ಸೋಮವಾರ, ಮಾರ್ಚ್ 27, 2023
31 °C
‘ತುಮಕೂರು ಕೇಜ್‌’ ಅಳವಡಿಕೆ, ಥರ್ಮಲ್‌ ಡ್ರೋನ್‌ ಬಳಕೆ– ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ಚಿರತೆ ಸೆರೆಗೆ ಬಿರುಸಿನ ಕಾರ್ಯಾಚರಣೆ :‌ ‘ತುಮಕೂರು ಕೇಜ್’ ಬಳಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು/ತಿ.ನರಸೀಪುರ: ತಾಲ್ಲೂಕಿನಲ್ಲಿ ನಾಲ್ವರನ್ನು ಕೊಂದ ಚಿರತೆ ಸೆರೆಗೆ ಅರಣ್ಯ ಇಲಾಖೆಯು ‘ಕೂಂಬಿಂಗ್’ ಆರಂಭಿಸಿದ್ದು, ಹೊರಳಹಳ್ಳಿಯಲ್ಲಿ ಸೋಮವಾರ ಬಹು ದೊಡ್ಡ ಬೋನು (ತುಮಕೂರು ಕೇಜ್‌) ಅಳವಡಿಸಿದೆ. 

ಗ್ರಾಮದಲ್ಲಿ ಬಾಲಕನನ್ನು ಕೊಂದಿದ್ದ ಸ್ಥಳದಲ್ಲಿ ಬೋನು ಇರಿಸಲಾಗಿದ್ದು, ಬಂಡೀಪುರ, ನಾಗರಹೊಳೆ ಉದ್ಯಾನದ 120 ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಸೋಸಲೆ ಹೋಬಳಿ ವ್ಯಾಪ್ತಿಯಲ್ಲಿ ಕಾರ್ಯಪಡೆಯು ಗಸ್ತಿನಲ್ಲಿದೆ.

‘10 ತಂಡಗಳನ್ನು ರಚಿಸಲಾಗಿದ್ದು, ಹೊರಳವಳ್ಳಿಯಲ್ಲಿ ತುಮಕೂರು ಕೇಜ್ ಹಾಗೂ ವಿವಿಧೆಡೆ 13 ಬೋನು ಇರಿಸಲಾಗಿದೆ. 16 ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಲಾಗಿದೆ. ರಾತ್ರಿ ಕಾರ್ಯಾಚರಣೆಗೆ ಥರ್ಮಲ್‌ ಡ್ರೋಣ್‌ಗಳನ್ನು ಬಳಸಲಾಗುತ್ತಿದೆ’ ಎಂದು ಸಿಸಿಎಫ್‌ ಮಾಲತಿ
ಪ್ರಿಯಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲಿಫೆಂಟ್‌ ಟಾಸ್ಕ್‌ಫೋರ್ಸ್ ಸಿಬ್ಬಂದಿಯೂ ಪಾಲ್ಗೊಂಡಿದ್ದು, 2 ದಿನಗಳಿಂದ ಶೋಧ ಕಾರ್ಯಾಚರಣೆ ನಡೆದಿದೆ. ಕಬ್ಬು ಕಟಾವಿಗೆ ಜಿಲ್ಲಾಧಿಕಾರಿ 15 ದಿನಗಳ ಗಡುವು ನೀಡಿದ್ದಾರೆ. ಚಿರತೆ ಬಾಲಕನನ್ನು ಕೊಂದ ಜಾಗ ಪಾಳುಬಿದ್ದ ಪ್ರದೇಶವಾಗಿದ್ದು, 30 ಎಕರೆಯಷ್ಟು ಕಾಡು ಬೆಳೆದಿದೆ. ಅದನ್ನು ತೆರವುಗೊಳಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಚಿರತೆ ಕಂಡರೆ ಗುಂಡು ಹೊಡೆಯಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆಂಬುದು ವದಂತಿ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಮಾತ್ರ ಆ ಅಧಿಕಾರವಿದೆ’ ಎಂದು ಮಾಲತಿ ಪ್ರಿಯಾ ಸ್ಪಷ್ಟಪಡಿಸಿದರು.

ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್‌ ಕೂಡ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ‍ಪರಿಶೀಲಿಸಿ ಸೂಚನೆಗಳನ್ನು ನೀಡಿದರು. 

ಮತ್ತೊಂದು ಚಿರತೆ ಸೆರೆ: ತಿ. ನರಸೀಪುರ ತಾಲ್ಲೂಕಿನ ಚಿದರಹಳ್ಳಿಯಲ್ಲಿ ಭಾನುವಾರ ಹೆಣ್ಣು ಚಿರತೆಯೊಂದು ಬೋನಿಗೆ ಬಿದ್ದಿದೆ. ‘ಗ್ರಾಮದ
ಕಬ್ಬಿನ ಗದ್ದೆಯ ಸಮೀಪ ಚಿರತೆ ಮರಿಗಳು ಕಂಡು ಬಂದ ಕಾರಣ ಬೋನು ಇಡಲಾಗಿತ್ತು. ಮರಿಗಳನ್ನು ನೋಡಲು ಬಂದ ಬೋನಿನಲ್ಲಿ ಸೆರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಇದು ನಾಲ್ವರನ್ನು ಕೊಂದ ಚಿರತೆಯಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು ‘ತುಮಕೂರು ಕೇಜ್’?

ತುಮಕೂರು ಜಿಲ್ಲೆಯ ನರಭಕ್ಷಕ ಚಿರತೆಯ ಸೆರೆಗೆ ವಿಶಿಷ್ಟ ರೀತಿಯಲ್ಲಿ ಬೋನು ಅಳವಡಿಸಲಾಗಿತ್ತು. ಆದ್ದರಿಂದ ಈ ಮಾದರಿ ಬೋನನ್ನು ತುಮಕೂರು ಕೇಜ್ ಎನ್ನಲಾಗುತ್ತಿದೆ. ಬೋನು ಕೊಟ್ಟಿಗೆ ಮಾದರಿಯಲ್ಲಿದ್ದು, ಚಿರತೆಗೆ ಇದು ಬೋನೆಂಬುದು ಗೊತ್ತಾಗದ ರೀತಿ ವಿನ್ಯಾಸ ಮಾಡಲಾಗಿದೆ.

‘ಉಸ್ತುವಾರಿ ಸಚಿವರನ್ನು ಬದಲಾಯಿಸಿ’

‘ಜಿಲ್ಲೆಯಲ್ಲಿ ನಿರಂತರ ಚಿರತೆ– ಹುಲಿ ದಾಳಿ ನಡೆಯುತ್ತಿದ್ದರೂ ನಾಪತ್ತೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರನ್ನು ಬದಲಿಸಿ, ಬೇರೊಬ್ಬರಿಗೆ ಉಸ್ತುವಾರಿ ನೀಡಬೇಕು’ ಎಂದು ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದರು.

‘ಮಾನವ– ವನ್ಯಪ್ರಾಣಿ ಸಂಘರ್ಷ ತಡೆಯಲು ಅರಣ್ಯ ಇಲಾಖೆಯನ್ನು ಚುರುಕುಗೊಳಿಸಬೇಕಾದ ಸಚಿವರು ಕಾರ್ಯಕ್ರಮವಿದ್ದರೆ ಮಾತ್ರ ಬರುತ್ತಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಹುಲಿ ಓಡಿಸಿದ ‘ಅರ್ಜುನ’

ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಹಾಡಿ ಯುವಕನನ್ನು ಕೊಂದಿದ್ದ ಹುಲಿಯನ್ನು ದಸರಾ ಆನೆ ‘ಅರ್ಜುನ’ನ ನೇತೃತ್ವದಲ್ಲಿ ಶಿಬಿರದ ಆನೆಗಳಿಂದ ಕಾಡಿಗಟ್ಟಲಾಗಿದೆ.

‘ಜನವಸತಿ ಪ್ರದೇಶದಲ್ಲಿ 4 ಮರಿಗಳೊಂದಿಗೆ ಓಡಾಡುತ್ತಿರುವ ‘ಬ್ಯಾಕ್ ವಾಟರ್ ಫೀಮೇಲ್’ ಹುಲಿಯು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಶಿಬಿರದ ಆನೆಗಳ ಮೂಲಕ ಹುಲಿಯನ್ನು ಕಾಡಿನ ಒಳಭಾಗದವರೆಗೂ ಓಡಿಸಲಾಗಿದೆ' ಎಂದು ಅರಣ್ಯ ಅಧಿಕಾರಿಗಳು ಸೋಮವಾರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು