ಸೋಮವಾರ, ಆಗಸ್ಟ್ 15, 2022
24 °C
ಕಳೆದ ವರ್ಷ 426 ವಿದ್ಯಾರ್ಥಿಗಳು, ಈ ವರ್ಷ 503

ಶತಮಾನದ ಸರ್ಕಾರಿ ಶಾಲೆಗೆ ದಾಖಲೆ ಮಕ್ಕಳು

ರಾಮಚಂದ್ರ ನಾಗತಿಕಟ್ಟೆ Updated:

ಅಕ್ಷರ ಗಾತ್ರ : | |

Prajavani

ಉಚ್ಚಂಗಿದುರ್ಗ (ಬಳ್ಳಾರಿ ಜಿಲ್ಲೆ): ಇಲ್ಲಿಯ ಶತಮಾನದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಬರೋಬ್ಬರಿ 503 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಮೂಲಕ ಇದು ಹರಪನಹಳ್ಳಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ದಾಖಲಾತಿ ಪಡೆದ ಸರ್ಕಾರಿ ಶಾಲೆಯಾಗಿ ಗುರುತಿಸಿಕೊಂಡಿದೆ. 

ಕಳೆದ ವರ್ಷ 426 ವಿದ್ಯಾರ್ಥಿಗಳು ಇದ್ದರು. ವಲಸೆ ಹೋದ ಹಲವು ಗ್ರಾಮಸ್ಥರು ಈ ವರ್ಷ ಕೋವಿಡ್‌ ಲಾಕ್‌ಡೌನ್‌ ಕಾರಣದಿಂದಾಗಿ ಊರಿಗೆ ಮರಳಿದ್ದು, ಇವರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ.

1905ರಲ್ಲಿ ಸ್ಥಾಪನೆಗೊಂಡು ಇಂದಿಗೆ 115 ವಸಂತಗಳನ್ನು ಪೂರೈಸಿದೆ. ಬ್ರಿಟಿಷರ ಆಡಳಿತ ಅವಧಿಯಲ್ಲಿ ಗ್ರಾಮದಲ್ಲಿ ಸ್ಥಾಪನೆಗೊಂಡ ಮೊದಲ ಶಾಲೆ ಎನ್ನುವ ಹೆಗ್ಗಳಿಕೆ ಇದರದ್ದು. 1950ರಿಂದ 1980ರವರೆಗೂ ಈ ಶಾಲೆಗೆ ಸುಮಾರು 600 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಆದರೆ, ನಂತರದ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಲಗ್ಗೆ ಇಟ್ಟ ಕಾನ್ವೆಂಟ್ ಶಾಲೆಗಳಿಂದಾಗಿ ಈ ಸರ್ಕಾರಿ ಶಾಲೆಯ ದಾಖಲಾತಿಯಲ್ಲೂ ಗಣನೀಯವಾಗಿ ಕುಸಿದಿತ್ತು.

ಇಂತಹ ಸಂದರ್ಭದಲ್ಲಿ ಸರ್ಕಾರ ಒದಗಿಸಿರುವ ಸವಲತ್ತುಗಳ ಮಾಹಿತಿ ನೀಡಿ, ಮೂಲಸೌಕರ್ಯ ಕುರಿತು ಮನವರಿಕೆ ಮಾಡಿಸಿ, ಶಾಲೆ ಬಿಟ್ಟ ಮಕ್ಕಳನ್ನು ಕರೆತರುವಲ್ಲಿ ಶಿಕ್ಷಕರು ವಹಿಸಿದ ಪರಿಶ್ರಮ ಫಲಕೊಟ್ಟಿದೆ.

ಶಾಲೆಯಲ್ಲಿ 14 ಶಿಕ್ಷಕರಿದ್ದಾರೆ. ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಹೊಸ ಫಿಲ್ಟರ್‌ ಅಳವಡಿಸಲಾಗಿದೆ. ಗಾಳಿ, ಬೆಳಕು ಇರುವ ತರಗತಿ ಕೋಣೆಗಳಿವೆ. ಉಳಿದ ಸೌಲಭ್ಯ ಒದಗಿಸುವ ಬದ್ಧತೆಯನ್ನೂ ಶಿಕ್ಷಕರು ಪ್ರದರ್ಶಿಸಿದ್ದಾರೆ.

‘ಗುಣಮಟ್ಟದ ಶಿಕ್ಷಣದಿಂದಾಗಿ ಪ್ರತಿವರ್ಷ 3-5 ವಿದ್ಯಾರ್ಥಿಗಳು ವಸತಿಶಾಲೆಗೆ ಆಯ್ಕೆಯಾಗುತ್ತಿದ್ದಾರೆ.ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿನಿ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪ‍ಡೆದಿದ್ದಾಳೆ. ಹೀಗಾಗಿ ಈ ಶಾಲೆ ಅಚ್ಚುಮೆಚ್ಚಾಗಿದೆ’ ಎನ್ನುತ್ತಾರೆ ಪೋಷಕ ಕೆಂಚಪ್ಪ.

***

ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಕೈಗೊಂಡ ಕ್ರಮಗಳು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪೋಷಕರನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸುತ್ತಿವೆ --ಎಸ್.ಎಂ. ವೀರಭದ್ರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ

***

ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ. ಇದು ಶಿಕ್ಷಣ ಇಲಾಖೆಯ ಪ್ರಗತಿಯ ಸೂಚನೆ.
– ಎಂ.ಎಂ ಚಂದ್ರಪ್ಪ, ಸಿ.ಆರ್‌.ಪಿ, ಉಚ್ಚಂಗಿದುರ್ಗ ವಲಯ

***

ಶಾಲೆ ದಾಖಲಾತಿ ಜವಾಬ್ದಾರಿ ಹೆಚ್ಚಿಸಿದೆ. ತರಗತಿಗಳನ್ನು ವಿಭಾಗಿಸಿ ಪಾಠಗಳನ್ನು ಹೇಳಿಕೊಡಲಾಗುವುದು. ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿ ಇದ್ದು, ಅದನ್ನು ಸರ್ಕಾರ ಭರ್ತಿ ಮಾಡಬೇಕು.

-ಸಾದೇವ, ಮುಖ್ಯ ಶಿಕ್ಷಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು