ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ, ಪಿಯು ಆರಂಭ: ಸುರಕ್ಷತೆಗೆ ಒತ್ತು

ಜ.1ರಿಂದ ತರಗತಿ: ಸಿದ್ಧತೆ ಕುರಿತು ಸಿಇಒಗಳ ಜತೆ ಸುರೇಶ್‌ಕುಮಾರ್‌ ಸಂವಾದ
Last Updated 23 ಡಿಸೆಂಬರ್ 2020, 20:44 IST
ಅಕ್ಷರ ಗಾತ್ರ

ಬೆಂಗಳೂರು: ‘ಜನವರಿ 1ರಿಂದ ಶಾಲೆಗಳನ್ನು ಆರಂಭಿಸಲು ವಿವಿಧ ಇಲಾಖೆಗಳ ಸಹಯೋಗದಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಶಾಲೆಗಳು ಆರಂಭಿಸುವ ಕುರಿತಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಒ), ಡಿಡಿಪಿಐ ಮತ್ತು ಬಿಇಒಗಳೊಂದಿಗೆ ಬುಧವಾರ ವಿಡಿಯೊ ಸಂವಾದ ನಡೆಸಿದ ಸಚಿವರು, ‘ಎಷ್ಟೇ ಮಕ್ಕಳು ಶಾಲೆಗೆ ಬಂದರೂ ಅವರು ಸುರಕ್ಷಿತವಾಗಿರುವಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ’ ಎಂದರು.

‘ಗುರುವಾರ (ಡಿ 24) ಡಿಡಿಪಿಐ ಮತ್ತು ಡಿಡಿಪಿಯುಗಳು ತಮ್ಮ ವ್ಯಾಪ್ತಿಯ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಮತ್ತು ಪಿಯು ಕಾಲೇಜುಗಳ ಮುಖ್ಯಸ್ಥರ ಸಭೆ ನಡೆಸಿ ಎಸ್ಸೆಸ್ಸೆಲ್ಸಿ ಮತ್ತು 12ನೇ ತರಗತಿಗಳು ಮತ್ತು 6ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ಯೋಜನೆಯನ್ನು ಸುರಕ್ಷಿತ ವಾತಾವರಣದಲ್ಲಿ ನಡೆಸುವ ಮತ್ತು ಪ್ರಮಾಣಿತ ಮಾರ್ಗದರ್ಶಿ ವಿಧಾನಗಳನ್ನು (ಎಸ್ಒಪಿ) ಪಾಲಿಸುವ ಕುರಿತು ಮಾರ್ಗದರ್ಶನ ನೀಡಲಿದ್ದಾರೆ’ ಎಂದು ಸುರೇಶ್ ಕುಮಾರ್ ತಿಳಿಸಿದರು.

ಪ್ರತಿಷ್ಠೆಯ ವಿಷಯವಲ್ಲ: ‘ಶಾಲಾರಂಭ ಸರ್ಕಾರಕ್ಕೆ ಬದ್ಧತೆಯ ವಿಷಯ ಮಾತ್ರವೇ ಆಗಿದ್ದು, ಅದು ಪ್ರತಿಷ್ಠೆ ಅಲ್ಲ. ಇನ್ನೊಂದು ವಾರದಲ್ಲಿ ಶಾಲಾ ತರಗತಿಗಳ ಸಮಯ, ಪಠ್ಯಕ್ರಮ ನಿಗದಿ ಮಾಡಲಾಗುವುದು. 10 ಮತ್ತು 12ನೇ ತರಗತಿಗಳ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗುವುದು’ ಎಂದು ಅವರು ತಿಳಿಸಿದರು.

‘ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನಿರ್ದೇಶನದಲ್ಲಿ ಶಿಕ್ಷಣ ಇಲಾಖೆ ರೂಪಿಸಿರುವ ಎಸ್ಒಪಿ ಮಾಹಿತಿಯನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತಲುಪಿಸಲಾಗಿದೆ. ಶಾಲೆಗೆ ಬಂದ ಮಕ್ಕಳಲ್ಲಿ ಸುರಕ್ಷಿತವಾಗಿ ತರಗತಿಗಳು ನಡೆಯುತ್ತವೆಂಬ ಆತ್ಮವಿಶ್ವಾಸ ಮೂಡುವಂತೆ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಅಗತ್ಯ: ‘ಶಾಲಾ ಸಂಚಿತ ನಿಧಿಯ ಖಾತೆಯಲ್ಲಿರುವ ಹಣವನ್ನು ಮಕ್ಕಳಿಗೆ ಅಗತ್ಯವಾದ ಸೋಪು, ಥರ್ಮಲ್ ಸ್ಕ್ಯಾನರ್ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಬಳಸಲು ಸುತ್ತೋಲೆ ಹೊರಡಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವರು ಸೂಚಿಸಿದರು. ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, 55 ವರ್ಷ ಮೀರಿದ ಶಿಕ್ಷಕರು ಮಾಸ್ಕ್‌ ಜೊತೆಗೆ ಫೇಸ್ ಶೀಲ್ಡ್ ಬಳಸಬೇಕು. ಶಾಲೆ ಆರಂಭವಾಗುವ 72 ಗಂಟೆಗಳ ಮೊದಲು ಆರ್‌ಟಿ–ಪಿಸಿಆರ್‌ ತಪಾಸಣೆ ಮಾಡಿಸಿಕೊಂಡು ನೆಗೆಟಿವ್‌ ವರದಿಯೊಂದಿಗೆ ಬರಲು ಜಿಲ್ಲಾ ಶೈಕ್ಷಣಿಕ ಉಪನಿರ್ದೇಶಕರು ಕ್ರಮ ತೆಗೆದುಕೊಳ್ಳಬೇಕು’ ಎಂದರು.

ಕೋವಿಡ್ ಜವಾಬ್ದಾರಿಯಿಂದ ಬಿಡುಗಡೆ: ಶಾಲಾ ಶಿಕ್ಷಕರು ಕೋವಿಡ್ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದರೆ ತಕ್ಷಣವೇ ಅವರನ್ನು ಮುಕ್ತಗೊಳಿಸುವಂತೆ ಸಂಬಂಧಿಸಿದವರಿಗೆ ಪ್ರಸ್ತಾವನೆ ಸಲ್ಲಿಸಲು ಇಲಾಖೆಯ ಆಯುಕ್ತರಿಗೆ ಸಚಿವರು ಸೂಚನೆ ನೀಡಿದರು. ಅಗತ್ಯವಿರುವ ಕಡೆಗಳಲ್ಲಿ ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ನೇಮಿಸಿಕೊಳ್ಳಬಹುದು. ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಶಾಲೆಗಳಿಗೆ ಹೊರ ರಾಜ್ಯದ ವಿದ್ಯಾರ್ಥಿಗಳು ಹಾಜರಾಗುತ್ತಿರುವ ಕಾರಣ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು (ಅಧ್ಯಕ್ಷರು) ಮತ್ತು ಸಿಇಒ (ಉಪಾಧ್ಯಕ್ಷರು) ನೇತೃತ್ವದ ಸಮಿತಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯ ಕ್ರಮಗಳನ್ನು ಕೈಗೊಳ್ಳಬಹುದು’ ಎಂದು ಸುರೇಶ್ ಕುಮಾರ್ ವಿವರಿಸಿದರು.

ಕಠಿಣ ಮೇಲ್ವಿಚಾರಣೆ-ಕಣ್ಗಾವಲು
‘ಪ್ರತಿದಿನವೂ ಒಬ್ಬ ಮಾರ್ಗದರ್ಶಿ ಶಿಕ್ಷಕರು ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಲಿದ್ದಾರೆ. ಕೆಮ್ಮು, ಜ್ವರ ಮತ್ತು ಕೋವಿಡ್ ಲಕ್ಷಣಗಳಿರುವ ವಿದ್ಯಾರ್ಥಿಗಳನ್ನು ತಕ್ಷಣವೇ ಪ್ರತ್ಯೇಕಿಸಿ ಆರೋಗ್ಯ ತಪಾಸಣೆ, ಕ್ವಾರಂಟೈನ್‌ನಂಥ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಿಇಒಗಳು ಶಾಲೆಗಳು ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿರುವ ಕುರಿತು ಪ್ರತಿ ದಿನ ಮಾಧ್ಯಮಗಳಿಗೆ ಹೇಳಿಕೆ ನೀಡಲಿದ್ದಾರೆ. ವಿದ್ಯಾಗಮ ತರಗತಿಗಳಿಗೆ ಮಕ್ಕಳು ತಮ್ಮದೇ ಶಾಲೆಗೆ ಬರಬೇಕೆಂಬ ಕಡ್ಡಾಯವೇನಿಲ್ಲ. ಸಮೀಪದ ಶಾಲೆಗಳಲ್ಲಿ ನಡೆಯುವ ತರಗತಿಗಳಿಗೆ ಹಾಜರಾಗಬಹುದು’ ಎಂದೂ ಸುರೇಶ್‌ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT