ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ರುವನಾರಾಯಣ: ಒಂದು ಮತದಿಂದ ಗೆದ್ದಿದ್ದ ಶಾಸಕ, ಸಂಸದರಾಗಿ ಮನೆ ಮಾತು

ಈ ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದ ರಾಜಕಾರಣಿ
Last Updated 11 ಮಾರ್ಚ್ 2023, 9:51 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರದ ಸಂಸದರಾಗಿ ಎರಡು ಬಾರಿ, ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರ ಮತ್ತು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ತಲಾ ಒಂದು ಬಾರಿ ಆಯ್ಕೆಯಾಗಿದ್ದ ಧ್ರುವನಾರಾಯಣ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ‘ಕಾಯಕ ಯೋಗಿ’ ಎಂದೇ ಗುರುತಿಸಿಕೊಂಡಿದ್ದವರು.

ಮೂರು ಬಾರಿ ವಿಧಾನಸಭೆಗೆ, ಮೂರು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದ ಅವರು ನಾಲ್ಕು ಬಾರಿ ಗೆದ್ದಿದ್ದರೆ, ಇನ್ನೆರಡು ಬಾರಿ ಸೋತಿದ್ದರು.

ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಯಲ್ಲಿ 1961ರ ಜುಲೈ 31ರಂದು ಜನಿಸಿದ್ದರು. ಪತ್ನಿ, ಇಬ್ಬರು ಪುತ್ರರು ಅವರಿಗಿದ್ದಾರೆ. ಎಂ.ರಾಜಶೇಖರಮೂರ್ತಿಯವರ ಶಿಷ್ಯರಾಗಿರುವ ಅವರು 1999ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಬಂದಿದ್ದರು.

1999ರಲ್ಲಿ ಅವರು ಬಿಜೆಪಿಯುಂದ ಎ.ಆರ್‌.ಕೃಷ್ಣಮೂರ್ತಿ ವಿರುದ್ಧ ಸ್ಪರ್ಧಿಸಿ ಸೋಲುಕಂಡಿದ್ದರು. ಆ ಬಳಿಕ ಅವರು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದರು. ಕೈ ‍ಪಾಳಯಕ್ಕೆ ಬಂದ ನಂತರ ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಏರುತ್ತಾ ಹೋದರು.

ಒಂದು ಮತದಿಂದ ಗೆಲುವು:
2004ರ ವಿಧಾನಸಭಾ ಚುನಾವಣೆಯಲ್ಲಿ ಸಂತೇಮರಹಳ್ಳಿ ಕ್ಷೇತ್ರದಲ್ಲಿ ಎ.ಆರ್‌.ಕೃಷ್ಣಮೂರ್ತಿ ಅವರ ವಿರುದ್ಧ ಒಂದು ಮತದಿಂದ ರೋಚಕವಾಗಿ ಗೆದ್ದು ದೇಶದಾದ್ಯಂತ ಧ್ರುವನಾರಾಯಣ ಸುದ್ದಿಯಾಗಿದ್ದರು. ಚಾಮರಾಜನಗರ ಜಿಲ್ಲೆಯಲ್ಲಿ ರಾಜಕೀಯ ಜೀವನವನ್ನು ಈ ಗೆಲುವಿನೊಂದಿಗೆ ಭದ್ರಪಡಿಸಿದ್ದರು.

2004ರ ವಿಧಾನಸಭಾ ಚುನಾವಣೆಯಲ್ಲಿ 1ಮತದಿಂದ ಗೆದ್ದ ನಂತರ ಚುನಾವಣಾಧಿಕಾರಿಯಿಂದ ಪ್ರಮಾಣ ಪತ್ರ ಸ್ವೀಕರಿಸುತ್ತಿರುವ ಧ್ರುವನಾರಾಯಣ
2004ರ ವಿಧಾನಸಭಾ ಚುನಾವಣೆಯಲ್ಲಿ 1ಮತದಿಂದ ಗೆದ್ದ ನಂತರ ಚುನಾವಣಾಧಿಕಾರಿಯಿಂದ ಪ್ರಮಾಣ ಪತ್ರ ಸ್ವೀಕರಿಸುತ್ತಿರುವ ಧ್ರುವನಾರಾಯಣ

ಕ್ಷೇತ್ರ ಮರುವಿಂಗಡಣೆಯ ನಂತರ ಸಂತೇಮರಹಳ್ಳಿ ಕ್ಷೇತ್ರ ಇರಲಿಲ್ಲ. 2008ರ ಚುನಾವಣೆಯಲ್ಲಿ ಕೊಳ್ಳೇಗಾಲದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು.

ರಾಷ್ಟ್ರ ರಾಜಕಾರಣಕ್ಕೆ:
2009ರ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷವು ಧ್ರುವನಾರಾಯಣ ಅವರನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿತು. ಬಿಜೆಪಿಯ ಅಭ್ಯರ್ಥಿಯಾಗಿದ್ದ ಎ.ಆರ್.ಕೃಷ್ಣಮೂರ್ತಿ ವಿರುದ್ಧ 4,002 ಮತಗಳ ಅಂತರದಿಂದ ಗೆದ್ದು ರಾಷ್ಟ್ರರಾಜಕಾರಣಕ್ಕೆ ಹೋದರು. ಸಂಸದರಾಗಿ ಆಯ್ಕೆಯಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಮತ್ತೆ ಎ.ಆರ್‌.ಕೃಷ್ಣಮೂರ್ತಿ ವಿರುದ್ಧ 1,41,182 ಮತಗಳ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಕ್ಷೇತ್ರದಾದ್ಯಂತ ಉತ್ತಮ ಸಂಸದ ಎಂದು ಮನೆಮಾತಾಗಿದ್ದ ಅವರು, ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದರು. ಅವರ ಎರಡು ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳಾಗಿದ್ದವು.

2019ರ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಶ್ರೀನಿವಾಸ ಪ್ರಸಾದ್‌ ವಿರುದ್ಧ 1,817 ಮತಗಳ ಅಂತರದಲ್ಲಿ ಸೋತು, ನಿರಾಸೆ ಅನುಭವಿಸಿದ್ದರು.

ಮತ್ತೆ ರಾಜ್ಯ ರಾಜಕಾರಣಕ್ಕೆ:
ಫಲಿತಾಂಶದ ಬಳಿಕ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದರು. ವರಿಷ್ಠರು ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡಿ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಹೊರಿಸಿತ್ತು.

ಮತ್ತೆ ರಾಜ್ಯ ರಾಜಕಾರಣಕ್ಕೆ ಬರಲು ಇಚ್ಛಿಸಿದ್ದ ಅವರು ಈ ಬಾರಿಯ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದರು. ಕ್ಷೇತ್ರದಲ್ಲಿ ಪ್ರಚಾರವನ್ನೂ ಆರಂಭಿಸಿದ್ದರು. ಅವರಿಗೆ ಟಿಕೆಟ್‌ ನೀಡುವುದು ನಿಚ್ಚಳವೂ ಆಗಿತ್ತು.

ತಮ್ಮ ಸಾರ್ವಜನಿಕ ಜೀವನದಲ್ಲಿ ಎಲ್ಲೂ ಎಡವದೇ ಇದ್ದ ಧ್ರುವನಾರಾಯಣ ಯಾವುದೇ ಕಪ್ಪು ಚುಕ್ಕೆ ಹೊಂದಿರಲಿಲ್ಲ.

ಕ್ಷೇತ್ರದ ಜನರ ಸಂಪರ್ಕಕ್ಕೆ ಸದಾ ಸಿಗುವ ಧ್ರುವನಾರಾಯಣ ಅವರಿಗೆ ಎದುರಾಳಿ ಪಕ್ಷಗಳ ಮುಖಂಡರೊಂದಿಗೂ ಉತ್ತಮ ಬಾಂಧವ್ಯವನ್ನೂ ಹೊಂದಿದ್ದರು.

ಚಾಮರಾಜನಗರದರಲ್ಲಿ ಕೇಂದ್ರೀಯ ವಿದ್ಯಾಲಯದ ಹೊಸ ಕಟ್ಟಡದ ಉದ್ಘಾಟನೆಗೆ ಬಂದಿದ್ದ ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ ಕುಮಾರ್‌ ಅವರು, ‘ಧ್ರುವನಾರಾಯಣ ಅವರು ನನ್ನ ಮೆಚ್ಚಿನ ಸಂಸದರಲ್ಲಿ ಒಬ್ಬರು’ ಎಂದು ಶ್ಲಾಘಿಸಿದ್ದರು.

ರಾಜಕಾರಣದ ಎಲ್ಲ ಪಟ್ಟುಗಳನ್ನು ಅರಿತಿದ್ದ ಅವರು, ಚಾಣಾಕ್ಷ ರಾಜಕಾರಣಿ ಎಂದೇ ರಾಜಕೀಯ ವಲಯದಲ್ಲಿ ಜನಜನಿತರಾಗಿದ್ದರು.

ಶ್ರೀನಿವಾಸ ಪ್ರಸಾದ್‌ ನಂತರ ಮೈಸೂರು ಭಾಗದ ದಲಿತ ಸಮುದಾಯದ ಪ್ರಮುಖ ನಾಯಕರಾಗಿ ಹೊರಹೊಮ್ಮುತ್ತಾ ಬಂದಿದ್ದರು. ಕಳೆದ ಲೋಕಸಭಾ ಚುನಾವಣೆ ಸೋಲು ಅವರಿಗೆ ಕೊಂಚ ಹಿನ್ನಡೆ ತಂದಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಮತ್ತೆ ಈ ಭಾಗದಲ್ಲಿ ತಮ್ಮ ಪ್ರಭಾವವನ್ನು ಬೆಳೆಸಿಕೊಂಡಿದ್ದರು.

ಮುಖಂಡರು, ಕಾರ್ಯಕರ್ತರಿಗೆ ಆಘಾತ: ಧ್ರುವನಾರಾಯಣ ಅವರ ಹಠಾತ್‌ ಸಾವು, ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಆಘಾತ ಉಂಟಾಗಿದೆ.

ಇವನ್ನೂ ಓದಿ:

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT