ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಮ್‌ಡಿಸಿವಿರ್‌ ಅಕ್ರಮ: ಬಂಧನದ ಎಚ್ಚರಿಕೆ

Last Updated 16 ಏಪ್ರಿಲ್ 2021, 20:05 IST
ಅಕ್ಷರ ಗಾತ್ರ

ಬೆಂಗಳೂರು: ರೆಮ್‌ಡಿಸಿವಿರ್‌ ಔಷಧಿಯ ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆಯಲ್ಲಿ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಬಂಧನ ಮಾಡಲಾಗುವುದು ಎಂದು ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರೆಮ್‌ಡಿಸಿವಿರ್‌ ಪ್ರಾಣ ಉಳಿಸಲು ಇರುವ ಔಷಧ. ಇದನ್ನು ಕಾಳಸಂತೆಯಲ್ಲಿ ಮಾರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.

ರೆಮ್‌ಡಿಸಿವಿರ್‌ ದಾಸ್ತಾನುದಾರರು ಯಾರು? ವಿತರಕರು ಯಾರು? ಬೇಡಿಕೆ ಸಲ್ಲಿಸಿದವರು ಯಾರು? ದಾಸ್ತಾನು ಎಲ್ಲಿದೆ ಸೇರಿದಂತೆ ಎಲ್ಲ ಮಾಹಿತಿಯನ್ನು ಕಲೆ ಹಾಕಲು ಸೂಚಿಸಲಾಗಿದೆ. ಇದರಿಂದ ಯಾವ ಹಂತದಲ್ಲಿ ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನೆರೆಯ ರಾಜ್ಯಗಳಿಂದ ಬರುವವರನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸುವ ಉದ್ದೇಶದಿಂದ ಗಡಿಭಾಗದಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ಆರೋಗ್ಯ ಇಲಾಖೆ ಸಚಿವರ ಜತೆ ಚರ್ಚೆ ಮಾಡುವುದಾಗಿ ಬೊಮ್ಮಾಯಿ ತಿಳಿಸಿದರು.

ಪೊಲೀಸರಿಗೆ ಚಿಕಿತ್ಸೆ: ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ 30 ಪೊಲೀಸ್‌ ಸಿಬ್ಬಂದಿಗೆ ಕೋವಿಡ್‌ ಪಾಸಿಟಿವ್‌ ಬಂದಿದೆ. ಒಟ್ಟು ಪೊಲೀಸ್‌ ಕುಟುಂಬದ 450 ಮಂದಿಗೆ ಕೋವಿಡ್‌ ಸೋಂಕು ತಗುಲಿದೆ. ಪೊಲೀಸ್‌ ಸಿಬ್ಬಂದಿಗೆ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಎಡಿಜಿಪಿ ಮಟ್ಟದ ಅಧಿಕಾರಿಯೊಬ್ಬರನ್ನು ಸಮನ್ವಯ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಅಗ್ನಿ ಶಾಮಕ, ಗೃಹರಕ್ಷಕ, ಜೈಲು ಸಿಬ್ಬಂದಿ ಸೇರಿದಂತೆ ಎಲ್ಲ ಪೊಲೀಸರಿಗೂ ಅತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಚಿಕಿತ್ಸೆ ನೀಡಲು ಆಸ್ಪತ್ರೆಗಳು ನಿರಾಕರಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಕೊರೊನಾದಿಂದ ರಕ್ಷಿಸಿಕೊಳ್ಳಲು ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಮತ್ತು ಶೀಲ್ಡ್ ಗಳನ್ನು ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಕ್ರಮಕ್ಕೆ ಡಿಜಿಪಿ ಸೂಚನೆ

‘ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮ್‌ಡಿಸಿವಿರ್‌ ಔಷಧಿ ಹಾಗೂ ಚುಚ್ಚುಮದ್ದುಗಳನ್ನು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ದುಬಾರಿ ದರಕ್ಕೆ ಮಾರಾಟ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು ರಾಜ್ಯದ ಎಲ್ಲ ಕಮಿಷನರ್ ಹಾಗೂ ಜಿಲ್ಲಾ ಎಸ್ಪಿಗಳಿಗೆ ಸುತ್ತೋಲೆ ಪ್ರತಿ ಕಳುಹಿಸಲಾಗಿದೆ.

‘ಕಾಳಸಂತೆಯಲ್ಲಿ ಔಷಧಿ ಹಾಗೂ ಚುಚ್ಚುಮದ್ದು ಮಾರಾಟ ಪ್ರಕರಣಗಳು ಕಂಡುಬಂದಲ್ಲಿ ಠಾಣಾಧಿಕಾರಿಗಳು ತಪ್ಪಿತಸ್ಥರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು. ಮಾಹಿತಿ ಇದ್ದರೆ ಗೌಪ್ಯ ತಪಾಸಣೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಬೇಕು. ಇಂಥ ಪ್ರಕರಣಗಳಲ್ಲಿ ಕೈಗೊಂಡ ಕ್ರಮದ ಬಗ್ಗೆ ಮುಖ್ಯ ಕಚೇರಿಗೆ ವರದಿ ಕಳುಹಿಸಬೇಕು’ ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT