ಶುಕ್ರವಾರ, ಏಪ್ರಿಲ್ 23, 2021
28 °C

‘ಮೈಸೂರು ‘ಮೈತ್ರಿ’: ಎಐಸಿಸಿಗೆ ವರದಿ’: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಎಐಸಿಸಿ ಕಾರ್ಯದರ್ಶಿ ಮಧು ಯಾಕ್ಷಿಗೌಡ, ಮೈಸೂರು ಮಹಾನಗರ ಪಾಲಿಕೆಯ ಮೇಯರ್‌–ಉಪ ಮೇಯರ್‌ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್‌–ಜೆಡಿಎಸ್‌ ‘ಮೈತ್ರಿ’ಗಾಗಿ ನಡೆದ ಎಲ್ಲ ಬೆಳವಣಿಗೆಯ ಬಗ್ಗೆ ವಿವರವಾದ ವರದಿಯೊಂದನ್ನು ವರಿಷ್ಠರಿಗೆ ಸಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಮಂಗಳವಾರ ರಾತ್ರಿ ಇಲ್ಲಿ ತಿಳಿಸಿದರು.

ಬೆಂಗಳೂರಿನಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ತನ್ವೀರ್ ಸೇಠ್‌ ಅವರಿಂದ ಮಾಹಿತಿ ಪಡೆದ ಮಧು ಯಾಕ್ಷಿಗೌಡ, ಮಂಗಳವಾರ ರಾತ್ರಿ ಮೈಸೂರಿನಲ್ಲಿ ಉಪ ಮೇಯರ್‌ ಅನ್ವರ್‌ ಬೇಗ್‌ ಸೇರಿದಂತೆ ಕಾಂಗ್ರೆಸ್‌ನ ಪಾಲಿಕೆಯ 19 ಸದಸ್ಯರು, ಮೂವರು ಪಕ್ಷೇತರ ಸದಸ್ಯರು, ಕೃಷ್ಣರಾಜ, ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ನಗರ ಘಟಕದ ಅಧ್ಯಕ್ಷರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಿದರು ಎಂದು ಮೂಲಗಳು ತಿಳಿಸಿವೆ.

‘ಮೈಸೂರು ನಗರಪಾಲಿಕೆಯಲ್ಲಿ ಮೈತ್ರಿಗೆ ಸಂಬಂಧಿಸಿದಂತೆ, ಎಐಸಿಸಿ ವರಿಷ್ಠರಿಗೆ ಸಿದ್ದರಾಮಯ್ಯ ದೂರು ನೀಡಿದ್ದರು. ಆದ್ದರಿಂದ, ಎಐಸಿಸಿ ಕಾರ್ಯದರ್ಶಿ ಮಧು ಯಾಕ್ಷಿಗೌಡ ಅವರನ್ನು ಸಮಗ್ರ ವರದಿ ಸಂಗ್ರಹಿಸಲಿಕ್ಕಾಗಿ ಕಳುಹಿಸಿಕೊಟ್ಟಿದೆ. ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರಿಗೆ ವರದಿ ಸಲ್ಲಿಸಲಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

'ಕೈ' ತಪ್ಪಿದ ಮೇಯರ್: ತನ್ವೀರ್‌ಗೆ ನೋಟಿಸ್

ಬೆಂಗಳೂರು: ಪಕ್ಷದ ನಾಯಕರ ಆದೇಶ ಉಲ್ಲಂಘಿಸಿ ಮೈಸೂರು ಮೇಯರ್‌ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡ ಕಾರಣಕ್ಕೆ ವಿವರಣೆ ಕೇಳಿ ಶಾಸಕ ತನ್ವೀರ್‌ ಸೇಠ್‌ ಅವರಿಗೆ ಎಐಸಿಸಿ ಸೂಚನೆಯಂತೆ ಕೆಪಿಸಿಸಿ ಶಿಸ್ತು ಸಮಿತಿ ಮಂಗಳವಾರ ನೋಟಿಸ್‌ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸೇಠ್‌, ‘ಶಿಸ್ತು ಸಮಿತಿ ಅಧ್ಯಕ್ಷರಾದ ರೆಹಮಾನ್ ಖಾನ್ ನೋಟಿಸ್ ಕೊಟ್ಟಿದ್ದಾರೆ. 2–3 ದಿನಗಳಲ್ಲಿ ಉತ್ತರ ಕೊಡುತ್ತೇನೆ. ಜೊತೆಗೆ ಕಾರಣಗಳನ್ನು ವಿವರಿಸುತ್ತೇನೆ. ಮೈತ್ರಿಯ ಕಾರಣ, ಫಲ, ನಷ್ಟದ ಬಗ್ಗೆಯೂ ವಿವರ ಕೊಡ್ತೇನೆ’ ಎಂದರು. ಮೈಸೂರು ಮೇಯರ್ ಚುನಾವಣೆ ಬಳಿಕ ಪಕ್ಷದಲ್ಲಿ ಉಂಟಾಗಿರುವ ಗೊಂದಲಗಳಿಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖರ ಜೊತೆ ಎಐಸಿಸಿ ಕಾರ್ಯದರ್ಶಿ ಮಧು ಯಾಕ್ಷಿಗೌಡ್‌ ಚರ್ಚೆ ನಡೆಸಿದರು.

ಸಿದ್ದರಾಮಯ್ಯ ಭಾಗಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಡಿ.ಕೆ ಶಿವಕುಮಾರ್‌ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಮೈಸೂರು ಬೆಳವಣಿಗೆ ಬಳಿಕ ಇಬ್ಬರ ನಡುವೆ ಭಿನ್ನಮತ ಉಂಟಾಗಿತ್ತು.ಡಿಕೆಶಿ ಅವರು ಮಂಗಳವಾರ ಸಂಜೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು