ಭಾನುವಾರ, ಏಪ್ರಿಲ್ 2, 2023
33 °C

ಗಣರಾಜ್ಯೋತ್ಸವ ಪರೇಡ್: ನೌಕಾಪಡೆಯ ತುಕಡಿಗೆ ಮಂಗಳೂರಿನ ದಿಶಾ ಕ್ಯಾಪ್ಟನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಇಲ್ಲಿನ ತಿಲಕನಗರದ ದಿಶಾ ಅಮೃತ್‌ ಅವರು, ಇದೇ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸಲಿದ್ದಾರೆ. ನೌಕಾಪಡೆಯ 144 ಸೈನಿಕರನ್ನು ಒಳಗೊಂಡ ತುಕಡಿ ಹಾಗೂ ಸ್ತಬ್ಧಚಿತ್ರವು ಈ ಕವಾಯತಿನಲ್ಲಿ ‘ನಾರಿಶಕ್ತಿ’ಯನ್ನು ಪ್ರದರ್ಶಿಸಲಿದೆ.  

ಅಂಡಮಾನ್‌ ನಿಕೋಬಾರ್‌ನಲ್ಲಿ ನೌಕಾಪಡೆಯಲ್ಲಿ ಲೆಫ್ಟಿನೆಂಟ್‌ ಕಮಾಂಡರ್‌ ಆಗಿರುವ ಮಗಳು ಗಣರಾಜ್ಯೋತ್ಸವ ಪರೇಡ್‌ನಲ್ಲಿ ತುಕಡಿಯ ನಾಯಕಿಯಾಗಿ ಹೆಜ್ಜೆಹಾಕುವುದನ್ನು ಕಣ್ತುಂಬಿಕೊಳ್ಳಲು ಆಕೆಯ ತಂದೆತಾಯಿ ಅಮೃತ್ ಕುಮಾರ್‌– ಲೀಲಾ ದಂಪತಿ ನವದೆಹಲಿಗೆ ತೆರಳಿದ್ದಾರೆ.

ಮಗಳ ಸಾಧನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದಿಶಾ ಅವರ ತಂದೆ ಅಮೃತ್ ಕುಮಾರ್‌, ‘ನಮ್ಮ ಮನೆಯಲ್ಲೇ ಭಗತ್‌ ಸಿಂಗ್‌, ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯಂತಹ ಮಕ್ಕಳು ಹುಟ್ಟಬೇಕೆಂದು ಬಯಸಿದ್ದೆವು. ನಮ್ಮ ಮಗಳು ಅಂತಹ ಸಾಧನೆ ಮಾಡುತ್ತಿದ್ದಾಳೆ’ ಎಂದು ಸಂತಸ ಹಂಚಿಕೊಂಡರು. 

‘ನಾನೂ ಎನ್‌ಸಿಸಿಯಲ್ಲಿದ್ದೆ. ಸೇನೆ ಸೇರುವುದು ನನ್ನ ಕನಸಾಗಿತ್ತು.ಆದರೆ ಅವಕಾಶಗಳಿರಲಿಲ್ಲ. ಅದನ್ನು ಮಗಳು ಅದನ್ನು ಈಡೇರಿಸಿದ್ದಾಳೆ’ ಎಂದು ಬಾಲಭವನದ ಮಾಜಿ ಅಧ್ಯಕ್ಷರೂ ಆಗಿರುವ ಅಮೃತ್‌ ಕುಮಾರ್ ತಿಳಿಸಿದರು.

ಈ ಅವಕಾಶದ ಕುರಿತು ಪ್ರತಿಕ್ರಿಯಿಸಿರುವ ದಿಶಾ, ‘ನಾನು 2008ರಲ್ಲಿ ಎನ್‌ಸಿಸಿ ಕೆಡೆಟ್‌ ಆಗಿ ಗಣರಾಜ್ಯೋತ್ಸವದ ಕವಾಯತಿನಲ್ಲಿ ಭಾಗವಹಿಸಿದ್ದೆ. ಆಗಲೇ ಸೇನಾ ಅಧಿಕಾರಿಯಾಗಿ ಕವಾಯತಿನಲ್ಲಿ ಭಾಗವಹಿಸುವ ಕನಸು ಕಂಡಿದ್ದೆ. ಅದೀಗ ಸಾಕಾರಗೊಳ್ಳುತ್ತಿದೆ. ಇದನ್ನು ಜೀವಮಾನದ ಸಾಧನೆ ಎಂದೇ ಭಾವಿಸುತ್ತೇನೆ’ ಎಂದು ತಿಳಿಸಿದ್ದಾರೆ. 

‘ತಂದೆ–ತಾಯಿ ನನ್ನಲ್ಲಿ ಬಾಲ್ಯದಲ್ಲೇ ದೇಶಭಕ್ತಿಯನ್ನು ತುಂಬಿದ್ದರಿಂದ ಸೇನೆಯ ಸಮವಸ್ತ್ರ ತೊಡುವುದು ಸಾಧ್ಯವಾಗಿದೆ’ ಎಂದಿದ್ದಾರೆ.

ದಿಶಾ ಅವರು ನಗರದ ಕೆನರಾ ವಿದ್ಯಾಸಂಸ್ಥೆಯಲ್ಲಿ ಒಂದನೇ ತರಗತಿಯಿಂದ ಪಿಯುಸಿ ವರೆಗೆ ವಿದ್ಯಭ್ಯಾಸ ಪಡೆದಿದ್ದಾರೆ. ಬೆಂಗಳೂರು ಬಸವನಗುಡಿಯ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿ.ಇ ಪದವಿ ಪಡೆದಿದ್ದಾರೆ. ಅವರು 2016ರಲ್ಲಿ ನೌಕಾಪಡೆಗೆ ಆಯ್ಕೆಯಾಗಿದ್ದರು. ಅವರ ಸೋದರಿ ಜ್ಯೋತ್ಸಾ ಅವರೂ ಎಂಜಿನಿಯರ್ ಆಗಿದ್ದು ನಾರ್ವೆಯಲ್ಲಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಸೋದರಿಯರಿಬ್ಬರೂ ಭರತನಾಟ್ಯ ಹಾಗೂ ಹಿಂದದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು