ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಅನಿವಾರ್ಯತೆಗೆ ಸಿಕ್ಕು ಮೀಸಲಾತಿ ಒಪ್ಪಿದ ಬಿಜೆಪಿ: ಸಿದ್ದರಾಮಯ್ಯ ವ್ಯಂಗ್ಯ

Last Updated 30 ಜುಲೈ 2021, 15:03 IST
ಅಕ್ಷರ ಗಾತ್ರ

ಬೆಂಗಳೂರು: ಮೀಸಲಾತಿಯ ಹುಟ್ಟು ವಿರೋಧಿಯಾದ ಬಿಜೆಪಿ ರಾಜಕೀಯ ಅನಿವಾರ್ಯತೆಗೆ ಸಿಕ್ಕಿ ಮೀಸಲಾತಿಯನ್ನು ಒಪ್ಪಿಕೊಂಡಿದೆ. ನಮ್ಮದು ಬದ್ದತೆ, ಬಿಜೆಪಿಯದ್ದು ಆತ್ಮವಂಚನೆ ಎಂದು ಸಿದ್ದರಾಮಯ್ಯ ಮೂದಲಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷರಾದ ಸೋನಿಯಾಗಾಂಧಿಯವರ ಪತ್ರವನ್ನು ಪರಿಗಣಿಸಿ ಅಖಿಲಭಾರತ ಕೋಟಾದಡಿ ಒಬಿಸಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್‌ಗಳಲ್ಲಿ 27% ಮೀಸಲಾತಿ ಘೋಷಿಸಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಸಕಾಲದಲ್ಲಿ ಸರ್ಕಾರವನ್ನು ಎಚ್ಚರಿಸಿದ ಸೋನಿಯಾಗಾಂಧಿಯವರಿಗೆ ಕೃತಜ್ಞತೆಗಳು ಎಂದು ಸಿದ್ದರಾಮಯ್ಯ ಶುಕ್ರವಾರ ಬೆಳಗ್ಗೆ ಟ್ವೀಟ್‌ ಮಾಡಿದ್ದರು.

ಸಿದ್ದರಾಮಯ್ಯ ಅವರ ಟ್ವೀಟ್‌ಗೆ ತಿರುಗೇಟು ನೀಡಿದ್ದ ಬಿಜೆಪಿ, ‘ಯುಪಿಎ ಸರ್ಕಾರ ಸತತ 10 ವರ್ಷ ಅಧಿಕಾರದಲ್ಲಿತ್ತು. ಆಗ ಸೋನಿಯಾ ಅವರಿಗೆ ಒಬಿಸಿ ಮೀಸಲು ಹೆಚ್ಚಳದ ಬಗ್ಗೆ ಜ್ಞಾನವಿರಲಿಲ್ಲವೇ ಸಿದ್ದರಾಮಯ್ಯನವರೇ? ಅಧಿಕಾರದಲ್ಲಿದ್ದಾಗ ವಂಶ ಬೆಳೆಸುವುದು, ಅಧಿಕಾರ ಇಲ್ಲದಿದ್ದಾಗ ಪತ್ರ ಬರೆಯುವುದು ಕಾಂಗ್ರೆಸ್‌ ಚಾಳಿ. ಕಾಗೆ ಕುಳಿತ ಕಾರಣಕ್ಕೆ ಮರದ ಟೊಂಗೆ ಮುರಿಯಿತು ಎಂದ ಹಾಗಾಯ್ತು ನಿಮ್ಮ ವಾದ,’ ಎಂದಿತ್ತು.

ಬಿಜೆಪಿಯ ವಾದವನ್ನು ಬಾಲಿಶ ಎಂದಿರುವ ಸಿದ್ದರಾಮಯ್ಯ ವಾಸ್ತವ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ‘ರಾಷ್ಟ್ರೀಯ ಪಕ್ಷವೆಂದು ಕರೆಸಿಕೊಳ್ಳುವ ಬಿಜೆಪಿ ಇಷ್ಟು ಬಾಲಿಶವಾಗಿ ಪ್ರತಿಕ್ರಿಯಿಸಬಾರದು. 2016ರಲ್ಲಿ ಅಖಿಲ ಭಾರತ ಕೋಟಾಕ್ಕಾಗಿ ರಾಜ್ಯದಿಂದ 15% ವೈದ್ಯಕೀಯ ಸೀಟು ಕಿತ್ತುಕೊಂಡಿರುವುದು ಕೇಂದ್ರ ಸರ್ಕಾರ. ಕಿತ್ತುಕೊಂಡಿದ್ದನ್ನು ಮರಳಿ ಕೊಟ್ಟಿದೆ, ಇದೇನು ಹೊಸ ಕೊಡುಗೆ ಅಲ್ಲ,‘ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಸಂವಿಧಾನದ 104ನೇ ತಿದ್ದುಪಡಿ ಮೂಲಕ 2006ರಲ್ಲಿಯೇ ಐಐಟಿ, ಐಐಎಂ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾತಿ ನೀಡುವ ದಿಟ್ಟ ನಿರ್ಧಾರ ಕೈಗೊಂಡದ್ದು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ,‘ ಎಂದು ಅವರು ಹೇಳಿದ್ದಾರೆ.

‘ಯುಪಿಎ ಸರ್ಕಾರದ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಮೀಸಲಾತಿ ನಿರ್ಧಾರವನ್ನು ವಿರೋಧಿಸಿದ್ದು ಬಿಜೆಪಿ. ಮೀಸಲಾತಿಯ ಹುಟ್ಟು ವಿರೋಧಿಯಾದ ಬಿಜೆಪಿ ರಾಜಕೀಯ ಅನಿವಾರ್ಯತೆಗೆ ಸಿಕ್ಕಿ ಈಗ ಮೀಸಲಾತಿಯನ್ನು ಒಪ್ಪಿಕೊಂಡಿದೆ ಅಷ್ಟೆ. ನಮ್ಮದು ಬದ್ದತೆ, ಬಿಜೆಪಿಯದ್ದು ಆತ್ಮವಂಚನೆ,‘ ಎಂದು ಅವರು ಸಿದ್ದರಾಮಯ್ಯ ಬಿಜೆಪಿಯನ್ನು ತಿವಿದಿದ್ದಾರೆ.

‘ರಾಜ್ಯದ ವೈದ್ಯಕೀಯ ಕಾಲೇಜುಗಳಿಂದ 15% ಸೀಟುಗಳನ್ನು ಅಖಿಲಭಾರತ ಕೋಟಾಕ್ಕಾಗಿ ಕಿತ್ತುಕೊಂಡದ್ದೇ ಮಹಾದ್ರೋಹ. ನಮ್ಮ ಭೂಮಿ ಮತ್ತು ತೆರಿಗೆ ಹಣದಿಂದ ವಿನಾಯಿತಿ-ರಿಯಾಯಿತಿ‌ ಪಡೆದಿರುವ ವೈದ್ಯಕೀಯ ಕಾಲೇಜುಗಳ ಸೀಟನ್ನು ಬೇರೆ ರಾಜ್ಯಗಳ ವಿದ್ಯಾರ್ಥಿಗಳಿಗೆ ಯಾಕೆ ಉಡುಗೊರೆಯಾಗಿ ನೀಡಬೇಕು?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಅಖಿಲಭಾರತ ಕೋಟಾವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿರುವ ತಮಿಳುನಾಡು‌ ಸರ್ಕಾರದ ರಿಟ್ ವಿಚಾರಣೆ ಆಗಸ್ಟ್ 3ಕ್ಕೆ ಇದೆ. ಅಲ್ಲಿ ಮುಖ ಉಳಿಸಿಕೊಳ್ಳಲು ನರೇಂದ್ರ ಮೋದಿ ಸರ್ಕಾರ ಒಬಿಸಿ ಮೀಸಲಾತಿ ಘೋಷಿಸಿದೆ. ಅಖಿಲ ಭಾರತ ಕೋಟಾದಡಿ ರಾಜ್ಯದ ಮೆಡಿಕಲ್ ಕಾಲೇಜ್ ಸೀಟುಗಳನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುವುದನ್ನು ನಾನು ಮುಖ್ಯಮಂತ್ರಿಯಾಗಿರುವಾಗಲೇ ವಿರೋಧಿಸಿದ್ದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಇದನ್ನು ರದ್ದು‌ಮಾಡಬೇಕು,‘ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT