ರಸ್ತೆ ಮಧ್ಯದಲ್ಲಿದೆ ವಿದ್ಯುತ್ ಕಂಬ

ಚಿತ್ರದುರ್ಗ: ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಮಧ್ಯಭಾಗಕ್ಕೆ ಬಂದ ವಿದ್ಯುತ್ ಕಂಬವನ್ನು ತೆರವುಗೊಳಿಸದೇ ಕಾಂಕ್ರಿಟ್ ಕಾಮಗಾರಿಯನ್ನು ಗುತ್ತಿಗೆದಾರ ಪೂರ್ಣಗೊಳಿಸಿದ್ದಾರೆ. ಇದರ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿ ಇಂತಹದೊಂದು ಲೋಪ ಕಂಡುಬಂದಿದೆ. ರಸ್ತೆಯ ಮಧ್ಯಭಾಗದ ವಿದ್ಯುತ್ ಕಂಬಗಳು ಅಪಘಾತಕ್ಕೆ ಆಹ್ವಾನ ನೀಡುವಂತಿವೆ.
ತುರುವನೂರು ರಸ್ತೆಯ ವಿಸ್ತರಣೆ ಕಾಮಗಾರಿಯನ್ನು ₹ 7 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಒಂದೂವರೆ ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗೆ 10.5 ಮೀಟರ್ ವಿಸ್ತರಣೆ ಮಾಡಲಾಗುತ್ತಿದೆ. ವಿದ್ಯುತ್ ಕಂಬ, ಕಟ್ಟಡಗಳನ್ನು ತೆರವುಗೊಳಿಸದೇ ಕಾಮಗಾರಿ ಪೂರ್ಣಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಬಿ.ಎಲ್.ಗೌಡ ಬಡಾವಣೆಯ ವಿಷ್ಣುವರ್ಧನ್ ಉದ್ಯಾನದ ಸಮೀಪ ಕೆಲ ವಿದ್ಯುತ್ ಕಂಬಗಳು ರಸ್ತೆಯ ಮಧ್ಯಭಾಗದಲ್ಲಿವೆ. ಲೋಕೋಪಯೋಗಿ ಇಲಾಖೆಯ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗ ಈ ಕಂಬಗಳನ್ನು ಸ್ಥಳಾಂತರ ಮಾಡಬೇಕಿತ್ತು. ಈ ಕಾರ್ಯ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದರಿಂದ ಕುಪಿತಗೊಂಡ ಗುತ್ತಿಗೆದಾರ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಿದ್ದಾರೆ.
ರಸ್ತೆ ವಿಸ್ತರಣೆಯ ಉದ್ದೇಶಕ್ಕೆ ಈ ಮಾರ್ಗದಲ್ಲಿ ಈಗಾಗಲೇ 108 ಮರಗಳನ್ನು ಹನನ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಕಾಂಪೌಂಡ್ ಕೂಡ ತೆರವುಗೊಳಿಸಲಾಗಿದೆ. ಕೆಲ ಖಾಸಗಿ ಕಟ್ಟಡಗಳ ತೆರವು ಕಾರ್ಯ ಸಕಾಲಕ್ಕೆ ಪೂರ್ಣಗೊಳ್ಳುತ್ತಿಲ್ಲ. ನ್ಯಾಯಾಲಯದಲ್ಲಿರುವ ಪ್ರಕರಣದ ನೆಪ ಹೇಳಿಕೊಂಡು ಮೊದಲಿದ್ದಷ್ಟೇ ರಸ್ತೆಗೆ ಕಾಂಕ್ರಿಟ್ ಹಾಕಲಾಗುತ್ತಿದೆ.
‘ಭೀಮ್ ಆರ್ಮಿ’ ಸಂಘಟನೆಯ ಮುಖಂಡ ಅವಿನಾಶ್ ಎಂಬುವರು ಈ ಅವ್ಯವಸ್ಥೆಯ ಪರಿಯನ್ನು ಫೇಸ್‌ಬುಕ್ ಲೈವ್ ಮಾಡಿದ್ದರು. ಸಾರ್ವಜನಿಕರ ತೆರಿಗೆ ಹಣ ಲೋಪವಾಗುತ್ತಿರುವ ಬಗ್ಗೆ ಗಮನ ಸೆಳೆದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ರಸ್ತೆ ವಿಸ್ತರಣೆಗೆ ಸರ್ಕಾರ ಅನುಮತಿ ನೀಡುವುದು ತಡವಾಯಿತು. ವಿದ್ಯುತ್ ಕಂಬ ತೆರವುಗೊಳಿಸುವುದಕ್ಕೆ ₹ 67 ಲಕ್ಷ ಅನುದಾನ ಮೀಸಲಿಡಲಾಗಿದೆ. ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ವಾರದಲ್ಲಿ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಎಲೆಕ್ಟ್ರಿಕಲ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವೀಂದ್ರ ತಿಳಿಸಿದ್ದಾರೆ.
***
ರಸ್ತೆ ಬದಿಯಲ್ಲಿ ವಿದ್ಯುತ್ ಮಾರ್ಗ ನಿರ್ಮಾಣ ಮಾಡುವ ಮುನ್ನ ಲೋಕೋಪಯೋಗಿ ಇಲಾಖೆಯ ಅನುಮತಿ ಪಡೆಯಬೇಕು. ‘ಬೆಸ್ಕಾಂ’ ಈ ನಿಯಮವನ್ನು ಪಾಲನೆ ಮಾಡುತ್ತಿಲ್ಲ.
ರವೀಂದ್ರ, ಎಇಇ
ಲೋಕೋಪಯೋಗಿ ಇಲಾಖೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.