ಗುರುವಾರ , ಆಗಸ್ಟ್ 11, 2022
21 °C

ಒಳನೋಟ: ಸ್ಮಾರ್ಟ್ ಆಗದ ಫಾಸ್ಟ್ಯಾಗ್

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಿ, ಡಿಜಿಟಲ್ ಶುಲ್ಕ ಪಾವತಿ ಪ್ರೇರೇಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವರ್ಷದ ಹಿಂದೆ ಜಾರಿಗೊಳಿಸಿರುವ ‘ಫಾಸ್ಟ್ಯಾಗ್’ ವ್ಯವಸ್ಥೆ, ಮೂಲ ಆಶಯ ಸಾಕಾರಗೊಳಿಸುವಲ್ಲಿ ಮುಗ್ಗರಿಸಿದೆ. ಪರಿಣಾಮವಾಗಿ, ಟೋಲ್ ಲೇನ್‌ಗಳ ನಡುವೆ ಚೆನ್ನೆಮಣೆ ಆಟದಂತೆ ಅತ್ತಿಂದಿತ್ತ ಅಲೆಯುವ ಪಡಿಪಾಟಲು ಚಾಲಕರದ್ದಾಗಿದೆ.

2019ರ ಡಿಸೆಂಬರ್ 15ರೊಳಗೆ ಎಲ್ಲ ಚತುಷ್ಚಕ್ರ ವಾಹನಗಳಿಗೆ ಕಡ್ಡಾಯವಾಗಿ ಫಾಸ್ಟ್ಯಾಗ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಲೆಕ್ಕಾಚಾರದಂತೆ ಈವರೆಗೆ ಶೇ 80ರಷ್ಟು ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಕೆಯಾಗಿದೆ. ಆದರೆ, ಟೋಲ್‌ಗಳಲ್ಲಿ ನಿತ್ಯ ಎದುರಾಗುವ ಫಾಸ್ಟ್ಯಾಗ್‌ಸಹಿತ ಮತ್ತು ಫಾಸ್ಟ್ಯಾಗ್‌
ರಹಿತ ವಾಹನಗಳ ಸಂಚಾರದ ಗೊಂದಲವು, ಈ ಅಂಕಿ–ಸಂಖ್ಯೆಯ ಬಗ್ಗೆ ಅನುಮಾನ ಮೂಡಿಸುವಂತಿದೆ.

ಪ್ರಸ್ತುತ ನಿಯಮದಂತೆ ಟೋಲ್ ಪ್ಲಾಜಾಗಳಲ್ಲಿ ಶೇ 75 ಫಾಸ್ಟ್ಯಾಗ್‌ (Fastag/No cash) ಲೇನ್‌ಗಳು, ಶೇ 25 ಹೈಬ್ರೀಡ್ ಲೇನ್‌ಗಳಿವೆ. ಆದರೆ, ವಾಸ್ತವದಲ್ಲಿ ಒಂದು ಅಥವಾ ಎರಡು ಲೇನ್‌ಗಳಲ್ಲಿ ಮಾತ್ರ ನಗದುರಹಿತ ವ್ಯವಸ್ಥೆ ಜಾರಿಯಲ್ಲಿದೆ. ಇನ್ನುಳಿದ ಲೇನ್‌ಗಳಲ್ಲಿ ನಗದು ಹಾಗೂ ನಗದುರಹಿತ ಶುಲ್ಕ ಪಾವತಿ ಎರಡೂ ವ್ಯವಸ್ಥೆಗಳು ಚಾಲ್ತಿಯಲ್ಲಿರುವ ಕಾರಣಕ್ಕೆ ವಾಹನ ದಟ್ಟಣೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಫಾಸ್ಟ್ಯಾಗ್ ಹೊಂದಿರುವ ವಾಹನಗಳು ನಗದುರಹಿತ ಲೇನ್ ಪತ್ತೆ ಮಾಡಲು ತಡಕಾಡುವ ದೃಶ್ಯ ಟೋಲ್‌ಗಳಲ್ಲಿ ಸಾಮಾನ್ಯವಾಗಿದೆ.

ಕೆಲವು ಟೋಲ್‌ಗಳಲ್ಲಿ ಫಾಸ್ಟ್ಯಾಗ್ ಸೆನ್ಸ್‌ ಮಾಡಲು ಹ್ಯಾಂಡ್‌ ರಿಸೀವರ್ ಹಿಡಿವ ಸಿಬ್ಬಂದಿ, ಎರಡೆರಡು ಲೇನ್‌ಗಳ ನಿರ್ವಹಣೆ ಮಾಡುತ್ತಾರೆ. ಇನ್ನು ಕೆಲವೊಮ್ಮೆ ಟೋಲ್‌ಗಳಲ್ಲಿರುವ ಸ್ಥಿರ ರಿಸೀವರ್‌ಗಳು ಫಾಸ್ಟ್ಯಾಗ್ ಸೆನ್ಸ್ ಮಾಡಲು ವಿಫಲವಾಗುತ್ತವೆ. ಹೀಗಾಗಿ, ನಗದು ಶುಲ್ಕ ಪಾವತಿಗಿಂತ ಫಾಸ್ಟ್ಯಾಗ್ ಮೂಲಕ ಪಾವತಿಯೇ ವಿಳಂಬವಾಗುತ್ತದೆ.

‘ಅಪರೂಪಕ್ಕೊಮ್ಮೆ ಕಾರು ಬಳಕೆ ಮಾಡುವವರು ಫಾಸ್ಟ್ಯಾಗ್ ಅಳವಡಿಸಿಕೊಳ್ಳಲು ನಿರಾಸಕ್ತರಾಗಿದ್ದಾರೆ. ಕೇಂದ್ರ ಸರ್ಕಾರದ ಡಿಜಿಟಲ್ ಪಾವತಿ ಮತ್ತು ಸುಗಮ ಸಂಚಾರ ಇವೆರಡು ಆಶಯಗಳು ಪ್ರಸ್ತುತ ವ್ಯವಸ್ಥೆಯಲ್ಲಿ ಈಡೇರಲು ಸಾಧ್ಯವಿಲ್ಲ. ಟೋಲ್‌ ಸಿಬ್ಬಂದಿ ಕಾರ್ಯಕ್ಷಮತೆ, ಫಾಸ್ಟ್ಯಾಗ್ ಸೆನ್ಸರ್ ಸಾಮರ್ಥ್ಯ ಹೆಚ್ಚಳ ಹಾಗೂ ವಾಹನಗಳ ತ್ವರಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ ಈ ವ್ಯವಸ್ಥೆ ಉತ್ತಮವಾಗಿದೆ’ ಎನ್ನುತ್ತಾರೆ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ.

‘ಯಾವುದೇ ಹೊಸ ವ್ಯವಸ್ಥೆ ಅಳವಡಿಸುವಾಗ ಗೊಂದಲಗಳಾಗುವುದು ಸಹಜ. ದಿನದಿಂದ ದಿನಕ್ಕೆ ‘ಫಾಸ್ಟ್ಯಾಗ್’ ಜನರಿಗೆ ಆಪ್ತವಾಗುತ್ತಿದೆ. ಆರಂಭದಲ್ಲಿ ಶೇ 50ರಷ್ಟು ಲೇನ್‌ಗಳಲ್ಲಿ ನಗದು ಪಾವತಿಗೆ ಅವಕಾಶವಿತ್ತು. ಈಗ ಅದನ್ನು ಒಂದು ಲೇನ್‌ಗೆ ಸೀಮಿತಗೊಳಿಸಲಾಗಿದೆ. ಕೋವಿಡ್–19 ಕಾರಣಕ್ಕೆ ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ವಿಳಂಬವಾಗಿದೆ. ನೋ ಕ್ಯಾಶ್ ಲೇನ್‌ನಲ್ಲಿ ಬರುವ ಫಾಸ್ಟ್ಯಾಗ್‌ರಹಿತ ವಾಹನಗಳಿಂದ ದುಪ್ಪಟು ಶುಲ್ಕ ಆಕರಿಸ
ಲಾಗುತ್ತದೆ’ ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ಶಿಶುಮೋಹನ್‌ ನೀಡುವ ಸಮರ್ಥನೆ.

ಫಾಸ್ಟ್ಯಾಗ್ ಅಳವಡಿಕೆ ಯಾಕೆ ?

ಟೋಲ್ ಪ್ಲಾಜಾಗಳಲ್ಲಿ ರಸ್ತೆ ಸಂಚಾರ ಶುಲ್ಕ ತ್ವರಿತ ಪಾವತಿಗೆ ಅನುವಾಗುವಂತೆ ರೇಡಿಯೊ-ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್(ಆರ್‌ಎಫ್‍ಐಡಿ) ಆಧಾರಿತ ಫಾಸ್ಟ್ಯಾಗ್‌ ಅನ್ನು ವಾಹನದ ಮುಂಭಾಗದ ಗಾಜಿಗೆ ಅಂಟಿಸಲಾಗುತ್ತದೆ. ಇದು ರೇಡಿಯೊ ಫ್ರಿಕ್ವೆನ್ಸಿ ಮೂಲಕ ಸ್ಕ್ಯಾನ್ ಆದಾಗ ವಾಲೆಟ್‌ನಲ್ಲಿರುವ (ಪ್ರಿಪೇಯ್ಡ್‌) ಹಣ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಇದನ್ನು ವಾಹನ ನೋಂದಣಿ ಸಂಖ್ಯೆಗೆ ಲಿಂಕ್ ಮಾಡಲಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ ಖಾತೆ ಅಥವಾ ಪೇಟಿಎಂನಂತಹ ಇ–ಪಾವತಿ ಮೂಲಕ ಫಾಸ್ಟ್ಯಾಗ್‌ ವಾಲೆಟ್‌ ಅನ್ನು ರಿಚಾರ್ಜ್ ಮಾಡಿಕೊಳ್ಳಬಹುದು.

‘ಪ್ರಸ್ತುತ ಟೋಲ್‌ಗಳಲ್ಲಿ ಇರುವ ರಿಸೀವರ್‌ಗಳು ಫಾಸ್ಟ್ಯಾಗ್ ಸ್ಕ್ಯಾನ್‌ ಮಾಡಲು 2–3 ಸೆಕೆಂಡ್ ಸಮಯ ತೆಗೆದುಕೊಳ್ಳುತ್ತವೆ. ಇವುಗಳ ಸಾಮರ್ಥ್ಯ ಹೆಚ್ಚಿಸಿ, 30 ಕಿ.ಮೀ ವೇಗದಲ್ಲಿ ಬರುವ ವಾಹನಗಳ ಟ್ಯಾಗ್ ಸೆನ್ಸ್ ಮಾಡುವ ತಂತ್ರಜ್ಞಾನ ಸುಧಾರಣೆಗೆ ಹೆದ್ದಾರಿ ಪ್ರಾಧಿಕಾರ ಯೋಚಿಸಿದೆ’ ಎನ್ನುತ್ತಾರೆ ಇಲಾಖೆ ಪ್ರಮುಖರು. 

ಹೊಸ ಅಧಿಸೂಚನೆ

ಎಲ್ಲ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ 2021ರ ಜನವರಿ 1ರಿಂದ ಮತ್ತೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ವಾಹನಕ್ಕೆ ಫಾಸ್ಟ್ಯಾಗ್ ಅಳವಡಿಸಿಕೊಳ್ಳಲು ಆಸಕ್ತಿ ಇಲ್ಲದವರು, ಮೆಟ್ರೊ ಕಾರ್ಡ್ ಮಾದರಿಯ ಕಾರ್ಡ್ ಖರೀದಿಸಿ, ಆ ಮೂಲಕ ಟೋಲ್‌ಗಳಲ್ಲಿ ಶುಲ್ಕ ಪಾವತಿಸಲು ನೂತನ ವ್ಯವಸ್ಥೆ ಕಲ್ಪಿಸಿದೆ.

ಶುಲ್ಕ ನಿಗದಿ ಹೇಗೆ ?

ಎರಡು ಟೋಲ್‌ಗಳ ನಡುವೆ ಕನಿಷ್ಠ 60 ಕಿ.ಮೀ ಅಂತರ ಇರಬೇಕು ಎಂಬ ನಿಯಮವಿದೆ. ಹೆದ್ದಾರಿಗಳಲ್ಲಿ ಇರುವ ಸೇತುವೆಗಳು, ಅಂಡರ್‌ಪಾಸ್‌ಗಳ ನಿರ್ಮಾಣ ವೆಚ್ಚ ಆಧರಿಸಿ, ಟೋಲ್ ಶುಲ್ಕ ನಿಗದಿಪಡಿಸಲಾಗುತ್ತದೆ.

ತೊಡಕುಗಳೇನು ?

* ವಾಹನದ ಮಾಲೀಕತ್ವ ಬದಲಾದಾಗ ಫಾಸ್ಟ್ಯಾಗ್ ಖಾತೆ ಬದಲಾಯಿಸುವ ಪ್ರಕ್ರಿಯೆ ಜಟಿಲ

* ಫಾಸ್ಟ್ಯಾಗ್‌ಗೆ ಹಾನಿಯಾದರೆ, ಇದನ್ನು ರದ್ದುಗೊಳಿಸಿ, ಅದೇ ನೋಂದಣಿ ಸಂಖ್ಯೆಗೆ ಹೊಸತು ಪಡೆಯಲು ಆಗುತ್ತಿಲ್ಲ

* 2017ರ ಪೂರ್ವ ಖರೀದಿಸಿದ ಎಲ್ಲ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಕೆ ಸಾಧ್ಯವಾಗಿಲ್ಲ

* ವಾಲೆಟ್‌ನಲ್ಲಿ ಹಣವಿದ್ದಾಗಲೂ ತಾಂತ್ರಿಕ ಸಮಸ್ಯೆಯಿಂದ ಬ್ಲ್ಯಾಕ್‌ಲಿಸ್ಟ್‌ ಎಂದು ತೋರಿಸುವ ರಿಸೀವರ್

ಪ್ರತ್ಯೇಕ ಪಥವಿಲ್ಲ; ಕಾಯೋದು ತಪ್ಪಿಲ್ಲ!

ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಧಾರವಾಡ ವಿಭಾಗದ ವ್ಯಾಪ್ತಿಯ ಬಂಕಾಪುರ, ಗಬ್ಬೂರು, ನರೇಂದ್ರ, ಹತ್ತರಗಿ ಹಾಗೂ ಕೊಗನಹಳ್ಳಿಯ ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ ಹೊಂದಿರುವ ವಾಹನಗಳಿಗೆ ಪ್ರತ್ಯೇಕ ಪಥಗಳಿಲ್ಲ. ಫಾಸ್ಟ್ಯಾಗ್ ಇದ್ದವರೂ, ನಗದು ಶುಲ್ಕ ಪಾವತಿಸುವವರ ಹಿಂದೆ ಕಾಯಬೇಕಾದ ಅನಿವಾರ್ಯತೆ ಇದೆ.

‘ಫಾಸ್ಟ್ಯಾಗ್‌ ಇದ್ದರೆ ಟೋಲ್‌ಗಳಲ್ಲಿ ತಡೆರಹಿತವಾಗಿ ಹೋಗಬಹುದು ಎಂದು ಆರಂಭದಲ್ಲಿ ಹೇಳುತ್ತಿದ್ದರು. ಎಲ್ಲಿಯೂ ಅಂತಹ ವ್ಯವಸ್ಥೆ ಇಲ್ಲ. ಹಿಂದೆ ಹಣ ಕೊಟ್ಟು ಚಿಲ್ಲರೆಗಾಗಿ ಕಾಯಬೇಕಿತ್ತು. ಈಗ ಬೇರೆಯವರ ಬಳಿ ಫಾಸ್ಟ್ಯಾಗ್‌ ಇಲ್ಲವೆಂದು ಕಾಯಬೇಕು’ ಎಂದು ಕಾರು ಸವಾರ ರಿಯಾಜ್ ಅಹಮದ್
ಪ್ರತಿಕ್ರಿಯಿಸಿದರು.

‘2019ರ ಡಿಸೆಂಬರ್‌ನಲ್ಲಿ ಫಾಸ್ಟ್ಯಾಗ್‌ ಕಡ್ಡಾಯಗೊಳಿಸಲಾಗಿತ್ತು. ಆಗ ಶೇ 20ರಷ್ಟು ವಾಹನಗಳಲ್ಲಿ ಮಾತ್ರ ಫಾಸ್ಟ್ಯಾಗ್ ಇರುತ್ತಿತ್ತು. ಈ ವರ್ಷ ಅದು ಶೇ 70ಕ್ಕೆ ತಲುಪಿದೆ. ಪ್ರತಿ ಟೋಲ್‌ ಬಳಿ ಫಾಸ್ಟ್ಯಾಗ್ ವಿತರಿಸುತ್ತಿರುವುದರಿಂದ ಬಳಕೆದಾರರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಕೆಲವೊಮ್ಮೆ ಫಾಸ್ಟ್ಯಾಗ್ ಲೇಬಲ್ ರೀಡ್ ಆಗದಿದ್ದರೆ, ಹ್ಯಾಂಡ್‌ಹೆಲ್ಡ್ ಸ್ಕ್ಯಾನರ್ ಬಳಸಲಾಗುತ್ತದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಕಾಂತ್ ಪೊದ್ದಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಫಾಸ್ಟ್ಯಾಗ್‌ ಇರುವವರಿಗೆ ಪ್ರತ್ಯೇಕ ಪಥ ಮಾಡಿ, ಅಲ್ಲಿ ಬೇರೆಯವರು ಬಂದರೆ ದಂಡ ವಿಧಿಸುತ್ತಿದ್ದೆವು. ಇದಕ್ಕೆ ಸವಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆಗ ಪೊಲೀಸರ ನೆರವು ಪಡೆದೆವು. ಆದರೂ, ಟೋಲ್ ಸಿಬ್ಬಂದಿಯೊಂದಿಗೆ ಸವಾರರ ಮಾತಿನ ಚಕಮಕಿ ಕಡಿಮೆಯಾಗಲಿಲ್ಲ. ಹಾಗಾಗಿ, ದಂಡದ ಜತೆಗೆ ಪ್ರತ್ಯೇಕ ಪಥಗಳ ವ್ಯವಸ್ಥೆಯನ್ನು ಕೈಬಿಟ್ಟೆವು’ ಎಂದರು.

ಮಾರ್ಗಸೂಚಿ ಫಲಕ ಇಲ್ಲ: ಹಾಸನ ಜಿಲ್ಲೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ ಶಾಂತಿಗ್ರಾಮದ ಟೋಲ್‌ ಪ್ಲಾಜಾದಲ್ಲಿ ಸರಿಯಾದ ಮಾರ್ಗಸೂಚಿ ಫಲಕಗಳು ಇಲ್ಲ. ಹೀಗಾಗಿ ವಾಹನ ಚಾಲಕರಿಗೆ ಅರಿವಿಲ್ಲದೇ ಬೇರೆ ಲೇನ್‌ಗಳಿಗೆ ಹೋಗಿ ತಿರುಗಿ ಬರಬೇಕಾಗುತ್ತದೆ.

ಎರಡೇ ಪಥ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕನ್ನೇಗಾಲದ ಬಳಿ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಟೋಲ್ ಕೇಂದ್ರವಿದೆ. ಎರಡೇ ಪಥ ಇದ್ದು, ನಗದು ಕೊಟ್ಟು ಹೋಗುವ ವ್ಯವಸ್ಥೆ ಈಗಲೂ ಇದೆ. ಹೆಚ್ಚು ವಾಹನಗಳು ಸಂಚರಿಸದೇ ಇರುವುದರಿಂದ ಸರತಿ ಸಾಲಿನಲ್ಲಿ ನಿಲ್ಲುವ ಪ್ರಮೇಯ ಬರುವುದಿಲ್ಲ.

ಸುಗಮಗೊಳ್ಳದ ಸಂಚಾರ

ಚಿತ್ರದುರ್ಗ/ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗುಯಿಲಾಳು ಟೋಲ್‌ ಪ್ಲಾಜಾದಲ್ಲಿ ಒಂದು ಬದಿಗೆ ಆರು ಲೇನ್‌ಗಳಿವೆ. ಅತಿ ಗಣ್ಯರು ಹಾಗೂ ತುರ್ತು ವಾಹನಗಳಿಗೆ ಒಂದು ಹಾಗೂ ನಗದು ಸಂಗ್ರಹಕ್ಕೆ ಮತ್ತೊಂದು ಲೇನ್‌ ಬಳಕೆಯಾಗುತ್ತಿದೆ. ಉಳಿದ ನಾಲ್ಕು ಲೇನ್‌ಗಳನ್ನು ‘ಫಾಸ್ಟ್ಯಾಗ್‌’ಗೆ ಮೀಸಲಿಡಲಾಗಿದೆ. ಆದರೆ, ಈ ಲೇನ್‌ಗಳಲ್ಲಿಯೂ ಸಂಚಾರ ಸುಗಮಗೊಂಡಿಲ್ಲ.

‘ಫಾಸ್ಟ್ಯಾಗ್‌’ ಸ್ಟಿಕ್ಕರ್‌ ಮೇಲೆ ದೂಳು, ನೀರು ಇದ್ದರೆ ಟೋಲ್‌ನಲ್ಲಿ ಸ್ಕ್ಯಾನ್‌ ಆಗುವುದಿಲ್ಲ. ‘ಫಾಸ್ಟ್ಯಾಗ್‌’ ರೀಡ್‌ ಆಗುವವರೆಗೂ ಕಾಯುವುದು ಅನಿವಾರ್ಯ. ಇದರಿಂದ ಫಾಸ್ಟ್ಯಾಗ್‌ಗೆ ಮೀಸಲಿದ್ದ ಲೇನ್‌ನಲ್ಲಿಯೂ ವಾಹನಗಳು ಸರಾಗವಾಗಿ ಸಾಗಲು ಸಾಧ್ಯವಾಗುತ್ತಿಲ್ಲ. ಖಾತೆಗೆ ಹಣ ಹಾಕಿಕೊಳ್ಳಲು ಆ್ಯಪ್‌ ಬಳಕೆ ಮಾಡಬೇಕು. ಸರಕು ಸಾಗಣೆ ವಾಹನ ಚಾಲನೆ ಮಾಡುವವರಿಗೆ ಈ ಬಗ್ಗೆ ಅರಿವಿನ ಕೊರತೆ ಇದೆ.

ಅರ್ಧದಷ್ಟು ವಾಹನಗಳಿಂದ ನಗದು ಪಾವತಿ: ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಟೋಲ್‌ನ 12 ಲೇನ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು 8 ಮಾತ್ರ. ಎರಡು ಲೇನ್‌ಗಳಲ್ಲಿ ನಗದು ಪಾವತಿಸಿ ಸಂಚರಿಸಬಹುದು. ಈ ಟೋಲ್‌ನಲ್ಲಿ ಅರ್ಧದಷ್ಟು ವಾಹನಗಳು ನಗದು ಪಾವತಿಸಿ ಸಂಚರಿಸುತ್ತಿವೆ ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

‘ಹೆಬ್ಬಾಳ್‌ ಟೋಲ್‌ನಲ್ಲಿ ‘ಫಾಸ್ಟ್ಯಾಗ್‌’ ಸರಿ ಯಾಗಿ ರೀಡ್‌ ಆಗುವುದಿಲ್ಲ. ಆಗ ‘ಕ್ಯಾಶ್‌ ಲೇನ್‌ಗೆ ಹೋಗಿ’ ಎಂದು ಟೋಲ್ ಸಿಬ್ಬಂದಿ ಹೇಳುತ್ತಾರೆ. ಇದರಿಂದ ಸಮಯ ವ್ಯರ್ಥವಾಗುವುದಲ್ಲದೇ, ಬೇರೆಯವರಿಗೂ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಕುರುಡಿಹಳ್ಳಿಯ ಕೆ.ಟಿ.ಮಹೇಶ್‌.

‘ಫಾಸ್ಟ್ಯಾಗ್‌’ ಖಾತೆಯಲ್ಲಿ ಕನಿಷ್ಠ ಹಣ ಉಳಿಸಿಕೊಳ್ಳುವುದು ಕಡ್ಡಾಯ. ಇದು ಎಷ್ಟೋ ಜನರಿಗೆ ಗೊತ್ತಿಲ್ಲ. ಇದರಿಂದ ‘ಫಾಸ್ಟ್ಯಾಗ್‌’ ಬ್ಲಾಕ್‌ಲಿಸ್ಟ್‌ಗೆ ಹೋಗುತ್ತಿದ್ದು, ನಿತ್ಯ ಕಿರಿಕಿರಿಯಾಗುತ್ತಿದೆ’ ಎನ್ನುತ್ತಾರೆ ಹೆಬ್ಬಾಳು ಟೋಲ್‌ ಮ್ಯಾನೇಜರ್ ರುದ್ರೇಶ್.

ಫಾಸ್ಟ್ಯಾಗ್‌ ಇದ್ದರೂ ತಪ್ಪದ ದಟ್ಟಣೆ

ಕಲಬುರ್ಗಿ: ಬೀದರ್‌ ಜಿಲ್ಲೆಯ ಮಂಗಲಗಿ ಬಳಿ 8 ಲೇನ್‌ಗಳಿವೆ. ಎಡಬದಿ ಮತ್ತು ಬಲಬದಿಗೆ ಎರಡು ಲೇನ್‌ಗಳನ್ನು ಫಾಸ್ಟ್ಯಾಗ್‌ ಇಲ್ಲದವರಿಗೆ ಬಿಡಲಾಗಿದೆ. ಉಳಿದ ಆರು ಲೇನ್‌ಗಳಲ್ಲಿ ಫಾಸ್ಟ್ಯಾಗ್‌ ಹೊಂದಿರುವ ವಾಹನಗಳು ಸಂಚರಿಸುತ್ತವೆ. ಟ್ಯಾಗ್‌ ಮಾಡಿಸದ ವಾಹನಗಳನ್ನು 200 ಅಡಿ ದೂರದಲ್ಲೇ ಗುರುತಿಸಿ, ಪ್ರತ್ಯೇಕವಾಗಿ ಸಂಚರಿಸಲು ಸೂಚನೆ ನೀಡಲಾಗುತ್ತದೆ. ಆದರೆ, ಬಹಳಷ್ಟು ಕಾರು, ಖಾಸಗಿ ಬಸ್‌ ಚಾಲಕರು ಟೋಲ್‌ ಸಿಬ್ಬಂದಿಯ ಸೂಚನೆ ಪಾಲಿಸದೇ ಮನಸ್ಸಿಗೆ ಬಂದಲ್ಲಿ ವಾಹನ ನುಗ್ಗಿಸುತ್ತಾರೆ. ಇದರಿಂದ ಟ್ಯಾಗ್‌ ಇರುವ ವಾಹನ ಸವಾರರಿಗೆ ಇಲ್ಲಿಯೂ ಕಷ್ಟ ತಪ್ಪಿಲ್ಲ.

ಕೊಪ್ಪಳ ಜಿಲ್ಲೆಯಲ್ಲಿ ಮೂರು ಟೋಲ್‌ಗೇಟ್‌ಗಳು ಬರುತ್ತವೆ. ಕುಷ್ಟಗಿ ಬಳಿಯ ರಾಷ್ಟ್ರೀಯ ಹೆದ್ದಾರಿ 64ರಲ್ಲಿ ಬರುವ ಟೋಲ್‌ನಲ್ಲಿ ನಾಲ್ಕು ಲೇನ್‌ಗಳಿವೆ. ನಾಲ್ಕೂ ಲೇನ್‌ಗಳಲ್ಲಿ ಫಾಸ್ಟ್ಯಾಗ್‌ ಮಾಡಿಸಿದ ಹಾಗೂ ಮಾಡಿಸದ ವಾಹನಗಳನ್ನು ಬಿಡಲಾಗುತ್ತದೆ. ಇದರಿಂದ ಎಲ್ಲ ವಾಹನಗಳ ಸವಾರರಿಗೂ ವಿಳಂಬವಾಗುತ್ತಿದೆ.

ಮುನಿರಾಬಾದ್‌ ಬಳಿಯೇ ಎರಡು ಕಡೆಯ ರಾಷ್ಟ್ರೀಯ ಹೆದ್ದಾರಿ ಇದ್ದು, ಒಂದು ಗುತ್ತಿ–ಅಂಕೋಲಾ ಮಾರ್ಗ (ನಂ.64) ಇನ್ನೊಂದು ಪುಣೆ–ಬೆಂಗಳೂರು (ನಂ. 53) ಮಾರ್ಗ. ಎರಡೂ ಕಡೆ ನಾಲ್ಕು ಟೋಲ್‌ಗಳನ್ನು ಮಾತ್ರ ಮಾಡಲಾಗಿದ್ದು, ಇನ್ನೆರಡು ಮಾರ್ಗಗಳ ಕಾಮಗಾರಿ ನಡೆದಿದೆ. ಹತ್ತಿರದಲ್ಲೇ ಎರಡು ಮಾರ್ಗದ ಟೋಲ್‌ಗಳು ಬರುವುದರಿಂದ ಇಲ್ಲಿ ದಿನವೂ ತಂಟೆ– ತಕರಾರು ತಪ್ಪಿದ್ದಲ್ಲ.

ಟೋಲ್‌ಗೇಟ್‌ ಫಲಕದಲ್ಲೂ ಗೊಂದಲ

ಮೈಸೂರು: ಜಿಲ್ಲೆಯ ಎರಡು ಕಡೆ ಟೋಲ್‌ ಗೇಟ್‌ಗಳಿದ್ದು, ಫಾಸ್ಟ್ಯಾಗ್‌‌‌ ಫಲಕ ಹಾಕಿದ ಜಾಗದಲ್ಲಿ ಫಾಸ್ಟ್ಯಾಗ್‌‌‌ ಇಲ್ಲದ ವಾಹನ ಚಾಲಕರೂ ಬರುತ್ತಾರೆ. ಇಲ್ಲಿ ಇವರಿಂದ ಟೋಲ್ ಸಂಗ್ರಹ ಕಾರ್ಯ ನಡೆಯುತ್ತದೆ.

ಮಾರ್ಗಸೂಚಿ ಫಲಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ತೆರೆದಿದೆ ಎಂಬ ಕಡೆ ಮುಚ್ಚಿರುತ್ತವೆ. ಮುಚ್ಚಿದೆ ಎಂಬ ಚಿಹ್ನೆ ಇರುವ ಕಡೆ ಬಹಳಷ್ಟು ಬಾರಿ ಟೋಲ್ ಸಂಗ್ರಹ ಕಾರ್ಯ ನಡೆಯುತ್ತಿರುತ್ತದೆ. ಇದರಿಂದ ಎರಡೂ ಟೋಲ್ ಕೇಂದ್ರಗಳಲ್ಲಿ ವಾಹನಗಳು ಸಾಲಾಗಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಸಾವಿನಲ್ಲಿ ಅಂತ್ಯ: ಟೋಲ್‌ ಸಂಗ್ರಹದ ಜಟಾಪ‍ಟಿ ಈಚೆಗೆ ಸಿಬ್ಬಂದಿಯೊಬ್ಬರ ಸಾವಿನಲ್ಲಿ ಪರ್ಯಾವಸನಗೊಂಡಿತ್ತು.  ಮೈಸೂರು– ನಂಜನಗೂಡು ರಸ್ತೆಯ ಟೋಲ್‌ ಪ್ಲಾಜಾದಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ (22) ಎಂಬುವವರು,  ಅ.12ರಂದು ಕಾರೊಂದನ್ನು ನಿಲ್ಲಿಸಿ ಶುಲ್ಕ ಕೇಳಿದಾಗ, ಅವರೊಂದಿಗೆ ವಾಗ್ವಾದಕ್ಕಿಳಿದ ತಂಡವೊಂದು, ಹಲ್ಲೆ ನಡೆಸಿತ್ತು. ಹಲ್ಲೆಗೀಡಾದ ಈ ಸಿಬ್ಬಂದಿ ಮೃತಪಟ್ಟರು.

ಸ್ಕ್ಯಾನಿಂಗ್ ಸಮಸ್ಯೆಯಿಲ್ಲ; ನಗದು ಸ್ವೀಕಾರವೂ ನಿಂತಿಲ್ಲ

ಬೆಂಗಳೂರು: ರಾಜಧಾನಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್‌ ವ್ಯವಸ್ಥೆ ಶೇ 80ರಷ್ಟು ಜಾರಿಗೆ ತರಲಾಗಿದೆ. ಬಹುತೇಕ ಕಡೆ ಸ್ಕ್ಯಾನಿಂಗ್ ಸುಸಜ್ಜಿತವಾಗಿದ್ದು, ನಗದು ಸ್ವೀಕಾರಕ್ಕೂ ಅವಕಾಶ ಕಲ್ಪಿಸಲಾಗಿದೆ.

ಭಾರತೀಯ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ನಿರ್ದೇಶನಗಳಿಗೆ ತಕ್ಕಂತೆ ಫಾಸ್ಟ್ಯಾಗ್‌ ವ್ಯವಸ್ಥೆ ಜಾರಿಯಾಗಿದೆ. ನೆಲಮಂಗಲ, ದೇವನಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಇತರೆ ಪ್ರಮುಖ ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ ಮೂಲಕ ಹಣ ಪಾವತಿಸುವರ ಪ್ರಮಾಣ ಹೆಚ್ಚಳವಾಗಿದೆ.

ನೆಲಮಂಗಲ ಹಾಗೂ ದೇವನಹಳ್ಳಿ ಟೋಲ್‌ಗೇಟ್‌ಗಳಲ್ಲಿ ಅಳವಡಿಸಿರುವ ಸ್ಕ್ಯಾನರ್‌ ಗಳು, ಫಾಸ್ಟ್ಯಾಗ್ ಸ್ಟಿಕರ್‌ಗಳಿಂದ ದತ್ತಾಂಶವನ್ನು ಗ್ರಹಿಸುವಲ್ಲಿ ವಿಳಂಬವಾಗುತ್ತಿತ್ತು. ಸಿಬ್ಬಂದಿ–ಚಾಲಕರ ನಡುವೆ ಜಗಳವೂ ನಡೆಯುತ್ತಿತ್ತು. ವಾಹನದ ಮುಂಭಾಗದ ಎಡ ಹಾಗೂ ಬಲದಲ್ಲಿದ್ದ ಸ್ಟಿಕರ್ ಸ್ಕ್ಯಾನಿಂಗ್ ಸಮಸ್ಯೆ ಇತ್ತು. ಇದೇ ಕಾರಣಕ್ಕೆ ಸ್ಕ್ಯಾನರ್‌ಗಳನ್ನು ಬದಲಾವಣೆ ಮಾಡಲಾಗಿದ್ದು, ಪ್ರತಿ ಟೋಲ್‌ನಲ್ಲೂ ಮಧ್ಯದ ಭಾಗದಲ್ಲಿ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಸ್ಕ್ಯಾನಿಂಗ್ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

‘ಬೆಂಗಳೂರು ಪಾರ್ಲೆ ಕಂಪನಿ ಬಳಿ ಇರುವ ಟೋಲ್‌ಗೇಟ್‌ನಲ್ಲಿ 8 ದ್ವಾರಗಳಿದ್ದು, ಅವುಗಳ ಪೈಕಿ 6 ಫಾಸ್ಟ್ಯಾಗ್‌ಗೆ ಮೀಸಲು. ಎರಡರಲ್ಲಿ ನಗದು ಸ್ವೀಕಾರವಿದೆ. ಜನವರಿ 1ರಿಂದ ಎಲ್ಲ ದ್ವಾರಗಳಲ್ಲಿ ಫಾಸ್ಟ್ಯಾಗ್‌ ಕಡ್ಡಾಯ ಮಾಡಲು ಎನ್‌ಎಚ್‌ಎಐ ಸೂಚಿಸಿದೆ’ ಎಂದು ಟೋಲ್‌ಗೇಟ್‌ ಸಿಬ್ಬಂದಿ ಹೇಳಿದರು.

‘ಹಲವು ಫಾಸ್ಟ್ಯಾಗ್‌ಗಳು ಹಣವಿಲ್ಲದೇ ಬ್ಲಾಕ್‌ ಆಗಿವೆ. ಅಂಥ ಚಾಲಕರು ಹಣ ಕೊಟ್ಟು ಹೋಗುತ್ತಿದ್ದಾರೆ. ಅದರಿಂದ ಕೆಲ ಕಡೆ ವಾಹನಗಳ ದಟ್ಟಣೆ ಉಂಟಾಗುತ್ತಿದೆ’ ಎಂದೂ ತಿಳಿಸಿದರು.

ಎನ್‌ಎಚ್‌ಎಐ ಅಧಿಕಾರಿಯೊಬ್ಬರು, ‘ಬೇಡಿಕೆಗೆ ತಕ್ಕಷ್ಟು ಫಾಸ್ಟ್ಯಾಗ್‌ ವಿತರಿಸಲಾಗಿದ್ದು, ಈ ಕೆಲಸ ಇಂದಿಗೂ ಮುಂದುವರಿದಿದೆ. ಕೆಲವರು, ಖಾತೆಯಲ್ಲಿ ಹಣ ನಿರ್ವಹಣೆ ಮಾಡುತ್ತಿಲ್ಲ’ ಎಂದರು.

ಎಲ್ಲಾ ವಾಹನಗಳಿಗೂ ಕಡ್ಡಾಯ

ಶೇ 80ರಷ್ಟು ವಾಹನಗಳಲ್ಲಿ ಸದ್ಯ ಫಾಸ್ಟ್ಯಾಗ್ ಅಳವಡಿಕೆಯಾಗಿದೆ. 2021ರ ಜನವರಿಯಿಂದ ಎಲ್ಲಾ ವಾಹನಗಳೂ ಫಾಸ್ಟ್ಯಾಗ್‌ ಅಳವಡಿಕೆ ಕಡ್ಡಾಯ ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಎಲ್ಲಾ ಟೋಲ್ ಪ್ಲಾಜಾಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಎನ್‌ಎಚ್ಎಐ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಸದ್ಯ ನಗದು ಸ್ವೀಕಾರಕ್ಕೆ ಒಂದು ಪಥ ಮಾತ್ರ ಇದೆ. ಜನವರಿ ನಂತರ ಅದೂ ಇರಲಿದೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದರು.

ಅಂಕಿ–ಅಂಶ

ರಾಜ್ಯದಲ್ಲಿರುವ ಟೋಲ್‌ಪ‍್ಲಾಜಾಗಳ ಸಂಖ್ಯೆ; 65

ರಾಜ್ಯದಲ್ಲಿ ನೋಂದಣಿ ಆಗಿರುವ ವಾಹನಗಳ ಸಂಖ್ಯೆ; 2.50 ಕೋಟಿ

ಫಾಸ್ಟ್ಯಾಗ್‌ ಅಳವಡಿಕೆ ಆಗಿರುವ ವಾಹನಗಳು; ಶೇ 80

ಪೂರಕ ಮಾಹಿತಿ: ಓದೇಶ ಸಕಲೇಶಪುರ(ಹುಬ್ಬಳ್ಳಿ), ಸಂತೋಷ ಈ. ಚಿನಗುಡಿ(ಕಲಬುರ್ಗಿ), ಕೆ.ಎಸ್‌.ಗಿರೀಶ್‌(ಮೈಸೂರು), ಡಿ.ಕೆ.ಬಸವರಾಜ(ದಾವಣಗೆರೆ), ಜೆ.ಬಿ.ನಾಗರಾಜ್‌(ಚಿತ್ರದುರ್ಗ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು