ಶುಕ್ರವಾರ, ಅಕ್ಟೋಬರ್ 30, 2020
25 °C

14ರಂದು ಆರ್‌.ಆರ್‌.ನಗರ, 15ರಂದು ಶಿರಾದಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ– ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಚುನಾವಣಾ ಆಯೋಗ ಉಪ ಚುನಾವಣೆಯ ಅಧಿಸೂಚನೆ ಇನ್ನೂ ಹೊರಡಿಸಿಲ್ಲ. ಅದಕ್ಕೆ ನಾವು ಕಾಯುತ್ತಿದ್ದೇವೆ. ಇದೇ 14ರಂದು ಆರ್‌.ಆರ್‌. ನಗರ, 15ರಂದು ಶಿರಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತೇವೆ. ಎರಡೂ ಕಡೆಗಳಲ್ಲಿ ನಾನು ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇರುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಬಿಜೆಪಿ ಸರ್ಕಾರದ ಜನ ವಿರೋಧಿ ನಡೆ ಕುರಿತ ಸಾಹಿತ್ಯವಿರುವ ನಾಲ್ಕು ಆಡಿಯೊ, ವಿಡಿಯೊ ಸಿ.ಡಿ ಗುರುವಾರ ಬಿಡುಗಡೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

‘ರಾಜೇಶ್ ಗೌಡ ಯಾರು ಎಂದು ನನಗೆ ಗೊತ್ತಿಲ್ಲ. ಶಿರಾ ಕ್ಷೇತ್ರಕ್ಕೆ ರಾಜಣ್ಣ ಅವರು ಜಯಚಂದ್ರ ಹೆಸರು ಪ್ರಸ್ತಾಪ ಮಾಡಿದರು. ಪರಮೇಶ್ವರ ಅವರು ಅದಕ್ಕೆ ಒಪ್ಪಿದರು. ನಾವೆಲ್ಲರೂ ಎರಡೂ ಕ್ಷೇತ್ರಗಳಿಗೂ ಒಮ್ಮತದಿಂದ ಅಭ್ಯರ್ಥಿ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಿದ್ದೆವು’ ಎಂದರು.

‘ಆರ್‌.ಆರ್‌. ನಗರ ಕ್ಷೇತ್ರವೂ ಸೇರಿದಂತೆ ವಿಧಾನಸಭೆ, ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಜತೆ ಚರ್ಚಿಸಿ ಅಂತಿಮಗೊಳಿಸಲಾಗಿದೆ’ ಎಂದೂ ವಿವರಿಸಿದರು.

ನಾನು ಭ್ರಷ್ಟ ಅನ್ನೋ ಸಾಕ್ಷಿ ಜನರ ಮುಂದೆ ಇಡಲಿ: ‘ನಾನು ಭ್ರಷ್ಟನೊ, ತತ್ವಜ್ಞಾನಿಯೊ ಎಂಬುದನ್ನು ಸಚಿವ ಸಿ.ಟಿ ರವಿ ಜನರ ಮುಂದೆ ಇಡಲಿ. ನನ್ನ ವಿರುದ್ಧ ಎಷ್ಟು ತನಿಖೆಯಾಗಿದೆ. ಯಾವ ದಾಖಲೆ ಇದೆ ಎಂಬುದನ್ನು ಜನರ ಮುಂದಿಡಲಿ. ಕೆಲವರಿಗೆ ನನ್ನ ಹೆಸರು ಹೇಳಿದರೆ ಮಾರ್ಕೆಟ್ ಸಿಗುತ್ತದೆ. ಹೀಗಾಗಿ, ನನ್ನ ಬಗ್ಗೆ ಮಾತನಾಡುತ್ತಾರೆ. ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ಆರು ವರ್ಷವಾಗಿದೆ. ಈ ಅವಧಿಯಲ್ಲಿ ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ. ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆಯೇ’ ಎಂದು ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು.

ಬಿಜೆಪಿ ಬೆಂಬಲಿಗರಿಗೆ ಪ್ರಶ್ನೆ: 'ದೇಶದಲ್ಲಿ ಅತಿ ದೊಡ್ಡ ಬಹುಮತ ಇರುವ ಸರ್ಕಾರ ಇದೆ. ಇದು ಜನರು ಕೊಟ್ಟ ತೀರ್ಪು. ನಾವು ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಸರ್ಕಾರ ನುಡಿದಂತೆ ನಡೆಯಿತಾ. ಕೊಟ್ಟ ಮಾತು ಉಳಿಸಿಕೊಂಡಿತಾ. ಈ ದೇಶಕ್ಕೆ ಆದ ಲಾಭ ಏನು. ಹಿಂದೆ ಆರ್ಥಿಕ ತಜ್ಞರು ಪ್ರಧಾನ ಮಂತ್ರಿಯಾಗಿದ್ದಾಗ ದೇಶ ಹೇಗಿತ್ತು. ಮೋದಿ ಅಧಿಕಾರಕ್ಕೆ ಬಂದು ಆರು ವರ್ಷ ಆಯ್ತು. ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ. ಜನರಿಗೆ ಅವರು ಉದ್ಯೋಗ ಕೊಟ್ಟರಾ. ಕಪ್ಪು ಹಣ ತಂದರಾ. ರಾಜ್ಯದಲ್ಲಿ ಶಾಂತಿ ಕಾಪಾಡಿದರಾ. ದೇಶದ ಗಡಿ ಉಳಿಸಿಕೊಂಡರಾ. ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಉಳಿಸಿಕೊಂಡರಾ. ರೈತ ಉಳಿದನಾ. ಕಾರ್ಮಿಕ ಉಳಿದನಾ. ಈ ಬಗ್ಗೆ ಬಿಜೆಪಿ ಸ್ನೇಹಿತರು ಉತ್ತರಿಸಬೇಕು’ ಎಂದರು.

‘ನಾನು ಪ್ರಕೃತಿ ನಿಯಮದಲ್ಲಿ ನಂಬಿಕೆ ಇಟ್ಟವನು. ಇಡೀ ಪ್ರಪಂಚ, ಮನುಕುಲ ನರಳುತ್ತಿದೆ. ಇಂತಹ ಸಂದರ್ಭದಲ್ಲಿ ಜನರನ್ನು ಕಾಪಾಡದ ಸರ್ಕಾರ ನಮಗೆ ಬೇಕೇ. ಶಾಲೆಗೆ ಹೋಗುವ ಚಿಕ್ಕ ಮಕ್ಕಳು, ಅವರ ಪೋಷಕರು ಆತಂಕ ಪಡುವಂತಾಗಿದೆ. ಈ ದೇಶದಲ್ಲಿ ಶಾಂತಿ ಕಾಪಾಡಿ, ಅಭಿವೃದ್ಧಿ ಮಾಡಬೇಕು. ಜನರ ಬದುಕಿನ ಬಗ್ಗೆ ಕಾಳಜಿ ವಹಿಸಿ, ನಾವೆಲ್ಲರೂ ಕೆಲಸ ಮಾಡಬೇಕು’ ಎಂದೂ ಹೇಳಿದರು.

1. ಡಿಕೆಶಿ ಜನರ ಗಳಿಸಿದ ವಿಶ್ವಾಸಿ, 2. ಕಪ್ಪು ಹಣ ತರ್ತಿನಿ ಅಂತ ತಿಪ್ಪೆ ಸಾರ್ಸಿದ್ರು (ಬಿಜೆಪಿ ಸರ್ಕಾರದ ವಿರುದ್ಧದ ಹಾಡು), 3. ಜನರಿಗೆ ಬೇಕಿದೆ ಕಾಂಗ್ರೆಸ್, ಜನರ ಧ್ವನಿಯಾಗಿದೆ ಕಾಂಗ್ರೆಸ್, 4.  ಡಿಕೆ ನಮ್ ಡಿಕೆ, ಈ ಜನರ ಧ್ವನಿಯಾಗಿದೆ ಜೋಕೆ’ ಹೀಗೆ ನಾಲ್ಕು ವಿಡಿಯೊ ಹಾಡುಗಳನ್ನು ಶಿವಕುಮಾರ್ ಬಿಡುಗಡೆ ಮಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಶಾಸಕ ರಾಮಲಿಂಗಾರೆಡ್ಡಿ ಇದರು.

ಬೇರೆ ಪಕ್ಷಗಳ ಅಭ್ಯರ್ಥಿ ಯಾರು ಎನ್ನುವುದು ಮುಖ್ಯವಲ್ಲ: ಕುಸುಮಾ

ಸಿದ್ದರಾಮಯ್ಯ ಅವರ ನಿವಾಸದ ಬಳಿ ಮಾತನಾಡಿದ ಆರ್.ಆರ್. ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ, ‘ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಯಾರು ಎನ್ನುವುದು ನಮಗೆ ಬೇಕಿಲ್ಲ. ಆ ಪಕ್ಷದ ಅಭ್ಯರ್ಥಿ ಎಂದಷ್ಟೇ ಎದುರಿಸುತ್ತೇವೆ. ನನ್ನ ಅತ್ತೆ ನೀಡಿರುವ ಹೇಳಿಕೆ ನನಗೆ ಆಶೀರ್ವಾದ ಇದ್ದಂತೆ. ಅವರು ದೊಡ್ಡವರು. ರವಿಯವರ ಹೆಸರನ್ನು ಚುನಾವಣೆಯಲ್ಲಿ ಬಳಸುವುದಿಲ್ಲ. ಹಿಂದೆಯೂ ನಾನು ಅವರ ಹೆಸರು ಪ್ರಸ್ತಾಪಿಸಿಲ್ಲ’ ಎಂದರು.

‘ರಾಜಕೀಯ ನಮಗೆ ಹೊಸದಲ್ಲ. ಪ್ರತಿಸ್ಪರ್ಧಿಗಳು ಯಾರು ಎನ್ನುವುದೂ ಮುಖ್ಯವಲ್ಲ. ಕ್ಷೇತ್ರದಲ್ಲಿ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ನಾನು ನನ್ನದೇ ಆದ ಕನಸು ಕಟ್ಟಿಕೊಂಡಿದ್ದೇನೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದೆ. ಎಲ್ಲರೂ ನನ್ನನ್ನು ಒಪ್ಪಿಕೊಳ್ಳುತ್ತಾರೆಂಬ ವಿಶ್ವಾಸವಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು