ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ: ರೈತರಿಗೆ ₹ 1,066 ಕೋಟಿ ಬಾಕಿ

ಆಹಾರ ಧಾನ್ಯದ ಬಾಬ್ತು ಪಾವತಿಸದ ಸರ್ಕಾರ
Last Updated 26 ಮೇ 2021, 21:42 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ನಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕಳೆದ ವರ್ಷ ರಾಜ್ಯ ಸರ್ಕಾರ ಖರೀದಿಸಿದ ಆಹಾರ ಧಾನ್ಯದ ಬಾಬ್ತು ₹ 1,065.92 ಕೋಟಿಯನ್ನು ರೈತರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದೆ.

2020–21ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ದಾಖಲೆ ಪ್ರಮಾಣದಲ್ಲಿ ಭತ್ತ, ರಾಗಿ ಮತ್ತು ಬಿಳಿಜೋಳ ಖರೀದಿಸಲಾಗಿತ್ತು. 2,74,036 ರೈತರಿಂದ ಖರೀದಿಸಿದ ಈ ಉತ್ಪನ್ನಗಳಿಗೆ ₹ 2,184.38 ಕೋಟಿ ಪಾವತಿಸಬೇಕಿತ್ತು. ಅದರಲ್ಲಿ 1,53,049 ರೈತರಿಗೆ ₹ 1,116.73 ಕೋಟಿ ಪಾವತಿಸಲಾಗಿದೆ. 1,20,987 ರೈತರ ಖಾತೆಗಳಿಗೆ ಇನ್ನೂ ಹಣ ಪಾವತಿ ಆಗಿಲ್ಲ.

ಒಂದೆಡೆ ಬೆಳೆದ ಉತ್ಪನ್ನಕ್ಕೆ ಸೂಕ್ತ ಬೆಲೆ ಇಲ್ಲದೆ ಮಾರಾಟ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ರೈತರಿದ್ದರೆ, ಮಾರಾಟ ಮಾಡಿದ ಉತ್ಪನ್ನದ ಹಣ ಕೈ ಸೇರದೆ ಮತ್ತಷ್ಟು ಕಂಗಾಲಾಗಿದ್ದಾರೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ಕೆಎಫ್‌ಸಿಎಸ್‌ಸಿ) ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ (ಕೆಎಸ್‌ಸಿಎಂಎಫ್‌) ಮೂಲಕ ಬೆಂಬಲ ಬೆಲೆಯಲ್ಲಿ ಈ ಧಾನ್ಯಗಳನ್ನು ಖರೀದಿಸಲಾಗಿದೆ. ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದೇ ಇರುವುದರಿಂದ ಉತ್ಪನ್ನಗಳನ್ನು ಮಾರಾಟ ಮಾಡಿದ ಎಲ್ಲ ರೈತರ ಖಾತೆಗಳಿಗೆ ಹಣ ಜಮೆ ಆಗಿಲ್ಲ ಎಂದು ಈ ಸಂಸ್ಥೆಗಳ ಮೂಲಗಳು ತಿಳಿಸಿವೆ.

ಎಲ್ಲಿ, ಎಷ್ಟು ಬಾಕಿ: ಕೆಎಫ್‌ಸಿಎಸ್‌ಸಿಗೆ ಸರ್ಕಾರ ₹ 581.74 ಕೋಟಿ ಬಿಡುಗಡೆ ಮಾಡಿದೆ. ಅದರಲ್ಲಿ ರೈತರ ಖಾತೆಗಳಿಗೆ ₹ 580.54 ಕೋಟಿ ವರ್ಗಾವಣೆ ಮಾಡಲಾಗಿದೆ. ಇನ್ನೂ 571.52 ಕೋಟಿ ಬಿಡುಗಡೆ ಮಾಡಬೇಕಿದೆ. ಕೆಎಸ್‌ಸಿಎಂಎಫ್‌ ಸಂಸ್ಥೆಗೆ ₹ 541.74 ಕೋಟಿ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ₹ 536.19 ಕೋಟಿ ರೈತರಿಗೆ ಪಾವತಿಸಲಾಗಿದೆ. ಇನ್ನೂ ₹ 493.21 ಕೋಟಿ ಪಾವತಿಸಲು ಬಾಕಿ ಇದೆ.

ನಿಯಮ ಸಡಿಲು: ಖರೀದಿಸಿದ ಭತ್ತ, ರಾಗಿ, ಜೋಳವನ್ನು ರಾಜ್ಯದ ಪಡಿತರ ಚೀಟಿದಾರರಿಗೆ ವಿತರಿಸುವ ಷರತ್ತಿಗೆ ಒಳಪಟ್ಟು ಕೇಂದ್ರ ಸರ್ಕಾರ ಆಹಾರಧಾನ್ಯ ಖರೀದಿ ಪ್ರಮಾಣದ ಗುರಿ ನಿಗದಿ‍ಪಡಿಸಿದೆ. ಅದರನ್ವಯ ಪ್ರತಿ ರೈತರಿಂದ ಇಂತಿಷ್ಟೆ ಖರೀದಿಸಬೇಕೆಂಬ ನಿಯಮ ಸಡಿಲಿಸಿ, ಜಮೀನಿಗೆ ಅನುಗುಣವಾಗಿ ಖರೀದಿಸಲಾಗಿದೆ. ಹೀಗಾಗಿ, ರೈತರು ತಾವು ಬೆಳೆದ ಉತ್ಪನ್ನದ ಪ್ರಮಾಣಕ್ಕೆ ಅನುಗುಣವಾಗಿ ಮಾರಾಟ ಮಾಡಲು ಸಾಧ್ಯವಾಗಿದ್ದು, ದಾಖಲೆ ಪ್ರಮಾಣದಲ್ಲಿ ಖರೀದಿ ಆಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರಾಜ್ಯಕ್ಕೆ ಹಂಚಿಕೆ ಮಾಡುವ ಆಹಾರಧಾನ್ಯದ ಪ್ರಮಾಣದಲ್ಲಿ ಕೇಂದ್ರ ಸರ್ಕಾರ, ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿರುವ ಪ್ರಮಾಣದ ಭತ್ತವನ್ನು (ಪ್ರತಿ ಕ್ವಿಂಟಲ್‌ ಭತ್ತಕ್ಕೆ 67 ಕಿಲೋ ಅಕ್ಕಿಯಂತೆ ಪರಿವರ್ತಿಸಿ) ಹಾಗೂ ರಾಗಿ ಮತ್ತು ಜೋಳದ ಪ್ರಮಾಣವನ್ನು ಕಡಿತಗೊಳಿಸಿ ಹಂಚಿಕೆ ಮಾಡುತ್ತದೆ. ರಾಜ್ಯದಲ್ಲಿ ಖರೀದಿಸಿದ ರಾಗಿ ಮತ್ತು ಜೋಳವನ್ನು ಅವುಗಳನ್ನು ಬೆಳೆಯುವ ಮತ್ತು ಉಪಯೋಗಿಸುವ ಜಿಲ್ಲೆಗಳ ಪಡಿತರಚೀಟಿದಾರರಿಗೆ ಹಂಚಿಕೆ ಮಾಡಲಾಗುತ್ತಿದೆ.

***

ಕನಿಷ್ಠ ಬೆಂಬಲ ಬೆಲೆ ನೀಡಿ ರಾಜ್ಯ ಸರ್ಕಾರ ಖರೀದಿಸಿದ ಆಹಾರಧಾನ್ಯಗಳ ಮೊತ್ತ ₹ 1,065.92 ಕೋಟಿ ರೈತರಿಗೆ ಪಾವತಿಸಲು ಬಾಕಿ ಇದೆ. ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇನೆ.
-ಉಮೇಶ ಕತ್ತಿ, ಆಹಾರ ಸಚಿವ

***

ಸಾಲ ಕಟ್ಟದಿದ್ದರೆ ಬಡ್ಡಿ ವಸೂಲಿ ಮಾಡುವುದಿಲ್ಲವೇ? ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿದ ಉತ್ಪನ್ನದ ಬಾಕಿಯನ್ನು ತಕ್ಷಣ ಪಾವತಿಸಬೇಕು.
-ಬಡಗಲಪುರ ನಾಗೇಂದ್ರ, ಅಧ್ಯಕ್ಷ, ರಾಜ್ಯ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT