ಶನಿವಾರ, ಜುಲೈ 24, 2021
22 °C

₹1.87 ಕೋಟಿ ಆರ್.ಟಿ.ಇ ಶುಲ್ಕ ಅನುದಾನ ದುರುಪಯೋಗ ಆರೋಪ: 20 ಬಿಇಒಗಳಿಗೆ ನೋಟಿಸ್

ಶಶಿಧರ ರೈ ಕುತ್ಯಾಳ Updated:

ಅಕ್ಷರ ಗಾತ್ರ : | |

ಪುತ್ತೂರು: ಆರ್.ಟಿ.ಇ ಶುಲ್ಕ ಮರುಪಾವತಿಗೆ ಬಿಡುಗಡೆಯಾದ 2014-15ನೇ ಸಾಲಿನ ಸುಮಾರು ₹ 1.87 ಕೋಟಿ ಅನುದಾನವನ್ನು ದುರುಪಯೋಗ ಮಾಡಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ರಾಜ್ಯದ 20 ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ.

ಏಳು ದಿನಗಳ ಒಳಗೆ ಇದಕ್ಕೆ ಉತ್ತರಿಸುವಂತೆ ಸೂಚಿಸಲಾಗಿದೆ. ಅನುದಾನ ದುರುಪಯೋಗ ಆಗಿರುವ ಬಗ್ಗೆ ಬೆಂಗಳೂರಿನ ರಮೇಶ್ ಬೆಟ್ಟಯ್ಯ ದೂರು ಸಲ್ಲಿಸಿದ್ದರು.

ಈ ದೂರಿನ ಪ್ರಾಥಮಿಕ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಪ್ರಾಥಮಿಕ ಶಿಕ್ಷಣ ನಿರ್ದೇಶಕರಿಗೆ ಕಡತ ವರ್ಗಾಯಿಸಲಾಗಿತ್ತು.

ಅದರಂತೆ ಅವರು 2012-13 ನೇ ಸಾಲಿನಿಂದ 2015-16ನೇ ಸಾಲಿನ ತನಕ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾದ ಮಕ್ಕಳ ಹೆಚ್ಚುವರಿ ಶುಲ್ಕ ಪಾವತಿಯ ಬಗ್ಗೆ ವರದಿ ಸಲ್ಲಿಸಿದ್ದರು.

ಈ ವರದಿಯಲ್ಲಿ, ‘ಆರ್‌.ಟಿ.ಇ ಶುಲ್ಕ ಮರುಪಾವತಿ ಹೆಚ್ಚುವರಿಯಾಗಿ ಪಾವತಿ ಮಾಡಿರುವ ಕುರಿತು ಅನುಪಾಲನಾ ವರದಿ ಸಲ್ಲಿಸಲಾಗಿಲ್ಲ. ಸರ್ಕಾರದ ಅನುದಾನ ದುರುಪಯೋಗ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಲೋಪಕ್ಕೆ ಕಾರಣವಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು’ ಎಂದು ತಿಳಿಸಲಾಗಿತ್ತು.

ಇದನ್ನು ಆಧರಿಸಿ, 20 ಮಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜುಲೈ 6ರಂದು ನೋಟಿಸ್ ಜಾರಿಗೊಳಿಸಲಾಗಿದೆ. ಇದಕ್ಕೆ ಉತ್ತರ ನೀಡದಿದ್ದಲ್ಲಿ ಏಕಪಕ್ಷೀಯ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ನೀಡಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.

‘ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ನೋಟಿಸ್ ಬಂದಿದ್ದು ನಿಜ. ಇದಕ್ಕೆ ದಾಖಲೆ ಸಹಿತ ಉತ್ತರ ನೀಡಲಾಗುವುದು. ಯಾವುದೇ ಹಣ ದುರುಪಯೋಗ ನಡೆದಿಲ್ಲ. ಅದೇ ವರ್ಷ ಎಲ್ಲ ಶಾಲೆಗಳಿಗೆ ಹಣ ಪಾವತಿಯಾಗಿದೆ. ಇವುಗಳ ದಾಖಲೆ ನೀಡಲಾಗುವುದು. ಸಂವಹನ ದೋಷದಿಂದ ಈ ರೀತಿ ತಪ್ಪು ಆಗಿರಬಹುದು’ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು