ಶನಿವಾರ, ಜುಲೈ 24, 2021
21 °C

ಕೋವಿಡ್‌ ತಗ್ಗಿದೆ, ಶಾಲಾ ಕಾಲೇಜು ಆರಂಭಿಸಿ: ರುಪ್ಸ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಕೂಡಲೇ ಶಾಲೆ–ಪಿಯು ಕಾಲೇಜುಗಳನ್ನು ಭೌತಿಕವಾಗಿ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ (ರುಪ್ಸ) ಆಗ್ರಹಿಸಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈ ಕುರಿತು ಪತ್ರ ಬರೆದಿರುವ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ‘ಗ್ರಾಮೀಣ ಭಾಗದ ಬಹಳಷ್ಟು ಕಡೆ ಸೋಂಕಿನ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೂಡ ಶಾಲೆಗಳನ್ನು ಆರಂಭಿಸಿದರೆ ಮಕ್ಕಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದೆ. ಈಗಲಾದರೂ 1ರಿಂದ 12ನೇ ತರಗತಿವರೆಗಿನ ಎಲ್ಲ ತರಗತಿಗಳನ್ನೂ ಭೌತಿಕವಾಗಿ ಆರಂಭಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.

ತಡ ಮಾಡದೆ ಶಾಲೆ ಆರಂಭಿಸಬೇಕು ಎಂದು ಡಾ.ದೇವಿಶೆಟ್ಟಿ ನೇತೃತ್ವದ ಸಮಿತಿ ಕೂಡ ಶಿಫಾರಸು ಮಾಡಿತ್ತು. ರಾಜ್ಯದ ಬಹುತೇಕ ಶಿಕ್ಷಣ ತಜ್ಞರು ಶಾಲೆ ಆರಂಭಿಸದಿದ್ದರೆ ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಮತ್ತಿತರ ಸಾಮಾಜಿಕ ಪಿಡುಗುಗಳು ಹೆಚ್ಚುತ್ತವೆ. ಮಕ್ಕಳ ನಿರಂತರ ಕಲಿಕೆಯಿಂದ ದೂರು ಉಳಿಯುತ್ತಾರೆ ಎಂದು ಎಚ್ಚರಿಸಿದ್ದಾಯಿತು. ಆದರೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲಾರಂಭದ ಬಗ್ಗೆ ಕಾರ್ಯಪಡೆ ರಚಿಸಿ ಅನಗತ್ಯವಾಗಿ ಕಾಲಹರಣ ಮಾಡುತ್ತಿದ್ದಾರೆ’ ಎಂದೂ ಅವರು ದೂರಿದ್ದಾರೆ.

‘ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳನ್ನು ಕೂಡಲೇ ಆರಂಭಿಸಬೇಕು’ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಕೂಡ ಒತ್ತಾಯಿಸಿದ್ದಾರೆ.

ಎಸ್ಸೆಸ್ಸೆಲ್ಸಿ: ಭಾಷಾ ಪರೀಕ್ಷೆ ಇಂದು

ಬೆಂಗಳೂರು: ಎಸ್ಸೆಸ್ಸೆಲ್ಸಿಯ ಭಾಷಾ ವಿಷಯಗಳ ಪರೀಕ್ಷೆ ಗುರುವಾರ ರಾಜ್ಯದಾದ್ಯಂತ 4,885 ಕೇಂದ್ರಗಳಲ್ಲಿ ನಡೆಯಲಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆಯು ಒಂದೇ ದಿನ ನಡೆಯಲಿದೆ.

ಪ್ರಥಮ ಭಾಷಾ ವಿಷಯಕ್ಕೆ 8.19 ಲಕ್ಷ, ದ್ವಿತೀಯ ಭಾಷೆಗೆ 8.27 ಲಕ್ಷ, ತೃತೀಯ ಭಾಷಾ ವಿಷಯ ಪರೀಕ್ಷೆಗೆ 8.17 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಮುಖ್ಯ ವಿಷಯಗಳಿಗೆ ಸೋಮವಾರ ನಡೆದ ಪರೀಕ್ಷೆಯಂತೆಯೇ ಭಾಷಾ ವಿಷಯದ ಪರೀಕ್ಷೆಗಳಿಗೂ ಒಂದೇ ಪ್ರಶ್ನೆಪತ್ರಿಕೆ ಇರಲಿದೆ. ಅದರಲ್ಲಿ 1ರಿಂದ 40ರವರೆಗೆ ಪ್ರಥಮ, 41ರಿಂದ 80ರವರೆಗೆ ದ್ವಿತೀಯ ಮತ್ತು 81ರಿಂದ 120ರವರೆಗೆ ತೃತೀಯ ಭಾಷಾ ಪ್ರಶ್ನೆಗಳಿರುತ್ತವೆ.

ಪ್ರತಿ ವಿಷಯದ ಪ್ರಶ್ನೆಗಳಿಗೂ ಉತ್ತರಿಸಲು ಪ್ರತ್ಯೇಕ ಬಣ್ಣದ ಒಎಂಆರ್ ಶೀಟ್‌ ನೀಡಲಾಗಿರುತ್ತದೆ. ಯಾವ ವಿಷಯಕ್ಕೆ ಯಾವ ಒಎಂಆರ್ ಎಂಬುದನ್ನು ಪರಿಶೀಲಿಸಿಕೊಂಡು ಬಹು ಆಯ್ಕೆ ಪ್ರಶ್ನೆಗಳ ಮುಂದೆ ನೀಡಿರುವ ಸರಿಯಾದ ಉತ್ತರದ ಸಂಖ್ಯೆಯ ಮೇಲೆ ಒಎಂಆರ್ ಶೀಟ್‌ನಲ್ಲಿ ನಿಗದಿತ ರೀತಿಯಲ್ಲಿ ನೀಲಿ ಅಥವಾ ಕಪ್ಪು ಬಾಲ್‌ಪಾಯಿಂಟ್ ಪೆನ್‌ನಲ್ಲಿ ಗುರುತಿಸಬೇಕು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಪದವಿ ಕಾಲೇಜುಗಳ ಶೇ 75 ವಿದ್ಯಾರ್ಥಿಗಳಿಗೆ ಲಸಿಕೆ’

ಬೆಂಗಳೂರು: ‘ರಾಜ್ಯದಲ್ಲಿ ಇದೇ 26ರಿಂದ ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭವಾಗುತ್ತಿದ್ದು, ಈವರೆಗೆ ಉನ್ನತ ಶಿಕ್ಷಣ ವಿಭಾಗದ ಶೇ.75ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ’ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪಮಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಸಿಕೆ ವಿತರಣೆ ಕಾರ್ಯಕ್ರಮ ವೇಗವಾಗಿ ಸಾಗುತ್ತಿದೆ. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 18 ವರ್ಷಕ್ಕೂ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲಾಗುತ್ತಿದೆ. ಜತೆಗೆ, ಬೋಧಕರು, ಬೋಧಕೇತರ ಸಿಬ್ಬಂದಿಗೂ ಲಸಿಕೆ ಹಾಕಿಸಲಾಗುತ್ತಿದೆ’ ಎಂದು ಹೇಳಿದರು.

‘ಭೌತಿಕ ತರಗತಿಗಳಿಗೆ ಹಾಜರಾಗ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೊದಲ ಡೋಸ್‌ ಲಸಿಕೆ ಪಡೆದಿರಲೇಬೇಕು‘ ಎಂದೂ ಅವರು ಸ್ಪಷ್ಟಪಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು