ಶುಕ್ರವಾರ, ಡಿಸೆಂಬರ್ 2, 2022
19 °C

2 ವರ್ಷಗಳಲ್ಲಿ 8 ಸಾವಿರ ಟನ್‌ ಮೀನು ಉತ್ಪಾದನೆ: ಎಸ್‌.ಅಂಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಮೀನಿನ ಖಾದ್ಯಗಳಿಗೆ ಸಾಕಷ್ಟು ಬೇಡಿಕೆ ಇದ್ದು, ಪೂರೈಕೆಯ ಕೊರತೆ ನೀಗಿಸಲು ಸರ್ಕಾರ ಒಳನಾಡು ಮೀನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ ಎಂದು ಮೀನುಗಾರಿಕೆ ಸಚಿವ ಎಸ್‌.ಅಂಗಾರ ಹೇಳಿದರು.

ವಿಧಾನಸೌಧದಲ್ಲಿ ಶುಕ್ರವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು. 

‘ರಾಜ್ಯದಲ್ಲಿ 6 ಸಾವಿರ ಟನ್‌ ಮೀನುಗಳಿಗೆ ಬೇಡಿಕೆ ಇದ್ದರೂ, ಲಭ್ಯತೆ 4 ಸಾವಿರ ಟನ್‌ ದಾಟಿಲ್ಲ. ಹೆಚ್ಚುವರಿ ಬೇಡಿಕೆ ನೀಗಿಸಲು ಆಂಧ್ರ ಪ್ರದೇಶ, ತಮಿಳುನಾಡಿನ ಮೇಲೆ ಅವಲಂಬಿತವಾಗಿದ್ದೇವೆ. ಕೊರತೆ ನೀಗಿಸಲು ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡುವ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಎರಡು ವರ್ಷಗಳಲ್ಲಿ 8 ಸಾವಿರ ಟನ್‌ ಉತ್ಪಾದನೆಯ ಗುರಿ ತಲುಪುವ ನಿರೀಕ್ಷೆ ಇದೆ’ ಎಂದರು.

ಈಗಾಗಲೇ ಮೀನುಗಾರರ ಸಮಾವೇಶ ನಡೆಸಲಾಗಿದೆ. ಜಿಲ್ಲಾ, ತಾಲ್ಲೂಕು‌ಮಟ್ಟದಲ್ಲೂ ಸಮ್ಮೇಳನ ಆಯೋಜಿಸಲಾಗುವುದು. ಕೆರೆ, ಹೊಂಡಗಳಲ್ಲಿ ಮೀನು ಸಾಕಾಣಿಕೆಗೆ ಆದ್ಯತೆ ನೀಡಲಾಗುವುದು. ಮೀನುಕೃಷಿಗೆ ಸಹಾಯಕೋರಿ ಅರ್ಜಿ ಸಲ್ಲಿಸಿದವರಿಗೆ ಆರ್ಥಿಕ ನೆರವು ನೀಡುವುದು, ಮೀನಿನ ಮರಿಗಳ ಉಚಿತ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರ ನೀಡಿದರು.

ಕೆರೆ, ಹೊಂಡಗಳಲ್ಲಿ ಮೀನು ಕೃಷಿ ಮಾಡುವವರಿಗೆ ಉದ್ಯೋಗ ಖಾತ್ರಿ ಮೂಲಕವೂ ನೆರವು ಕಲ್ಪಿಸಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಮೀನು ಕೃಷಿಗೆ ಮುಂದಾಗುವವರಿಗೆ ₹ 5ರಿಂದ ₹ 10 ಕೋಟಿಯವರೆಗೂ ಆರ್ಥಿಕ ಸೌಲಭ್ಯ ಕಲ್ಪಿಸಲಾಗುವುದು. ಆಲಮಟ್ಟಿ ಜಲಾಶಯದ ಬಳಿ ಮೀನುಮರಿ ತೊಟ್ಟಿಗಳ ನಿರ್ಮಾಣಕ್ಕೆ 25 ಎಕರೆ ಗುರುತಿಸಲಾಗಿದೆ. ಸಾಕಾಣಿಕೆ ಉತ್ತೇಜನಕ್ಕಾಗಿ ಸ್ವಸಾಹಾಯ ಸಂಘಗಳು, ಸಣ್ಣಸಣ್ಣ ಗುಂಪುಗಳನ್ನು ರಚಿಸಲಾಗುತ್ತಿದೆ. ಆಳ ಸಮುದ್ರದ ಮೀನುಗಾರಿಕೆಗೂ ಅವಕಾಶ ನೀಡಲಾಗುತ್ತಿದೆ. ತಾಜಾ, ಗುಣಮಟ್ಟದ ಮೀನುಗಳು ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲು ಶೀತಲೀಕರಣ ಘಟಕಗಳ ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು