ಬೆಂಗಳೂರು: ಒಳ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಬಂಜಾರ, ಭೋವಿ, ಕೊರಚ ಸಮುದಾಯಗಳಿಗೆ ತೃಪ್ತಿ ಇದೆ. ಮುಖ್ಯಮಂತ್ರಿ ಬೊಮ್ಮಾಯಿಯವರು ನ್ಯಾಯಬದ್ಧವಾಗಿ ಹಂಚಿಕೆ ಮಾಡಿದ್ದಾರೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಹಂಚಿಕೆ ವಿಚಾರವಾಗಿ ನನಗೆ ಯಾವುದೇ ಅಸಮಾಧಾನವಿಲ್ಲ. ಸರ್ವರಿಗೆ ಸಮಬಾಳು ಮತ್ತು ಸಮಪಾಲು ವಿಚಾರದಲ್ಲಿ ನಂಬಿಕೆ ಇಟ್ಟು ಈ ಹಂಚಿ ಮಾಡಲಾಗಿದೆ. ಬಂಜಾರ, ಭೋವಿ, ಕೊರಚ ಸಮುದಾಯಗಳಿಗೆ ಯಾವುದೇ ಅನ್ಯಾಯವಾಗಿಲ್ಲ ಎಂದೂ ತಿಳಿಸಿದರು.
ಒಳಮೀಸಲಾತಿ ಜಾರಿ ತರುವ ಸಂಬಂಧ ಸಂಪುಟ ಉಪಸಮಿತಿ ರಚಿಸುವುದಕ್ಕೆ ಮುನ್ನ ಅಂದರೆ ಫೆಬ್ರುವರಿಯಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಅನುಷ್ಠಾನ ಮಾಡಬಾರದು ಎಂಬ ಪತ್ರವನ್ನು ಬರೆದಿದ್ದು ನಿಜ. ಆದರೆ, ಸಂಪುಟ ಉಪಸಮಿತಿ ಸಭೆಯ ತೀರ್ಮಾನದ ಬಗ್ಗೆ ಅಸಮಾಧಾನಗೊಂಡಿಲ್ಲ. ಮುಖ್ಯಮಂತ್ರಿಯವರು ಸಾಧಕ– ಬಾಧಕಗಳನ್ನು ಪರಿಶೀಲಿಸಿಯೇ ಯಾರಿಗೂ ಅನ್ಯಾಯ ಆಗದಂತೆ ಹಂಚಿಕೆ ಮಾಡಿ, ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ ಎಂದರು.
ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸದಾಶಿವ ಆಯೋಗದ ವರದಿಯನ್ನು ಒಪ್ಪಿಲ್ಲ, ಪರಿಶಿಷ್ಟ ಜಾತಿಯಿಂದ ಬಂಜಾರ ಸಮುದಾಯವನ್ನು ಕೈಬಿಡುವ ಸಂಬಂಧ ಯಾವುದೇ ಶಿಫಾರಸನ್ನು ಸರ್ಕಾರ ಮಾಡಿಲ್ಲ. ಕೆಲವು ಸಹಿಸದೇ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಯಾರೋ ಕೆಲವರು ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆ ಪ್ರಕಾರ ಪರಿಶಿಷ್ಟ ಜಾತಿ ಪಟ್ಟಿಯಲ್ಲೇ ಮುಂದುವರಿಸಲು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುವುದಾಗಿ ಹೇಳಿದ್ದಾರೆ. ಧೈರ್ಯವಿದ್ದರೆ ಮಾಡಲಿ ನೋಡೋಣ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಒಳಮೀಸಲಾತಿ ಹಂಚಿಕೆ ಮಾಡಲಿಲ್ಲ. ತಾವು ಮಾಡಲಾಗದ್ದನ್ನು ಬಿಜೆಪಿ ಮಾಡಿದ್ದನ್ನು ಕಂಡು ಅಸೂಯೆಯಿಂದ ಕಾಂಗ್ರೆಸ್‌ನವರು ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ ಎಂದು ಪ್ರಭು ಚವ್ಹಾಣ ಹೇಳಿದರು.
ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಬಿಜೆಪಿ ಮೀಸಲಾತಿ ಜಾರಿ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೊಂಡೇ ಬಂದಿದ್ದರು. ಈಗ ನಾವು ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದು ಅವರಿಗೆ ಸಹಿಸಲು ಆಗುತ್ತಿಲ್ಲ. ಸುದೀರ್ಘ ಕಾಲದಿಂದ ಇದ್ದ ಗೊಂದಲಕ್ಕೆ ತೆರೆ ಎಳೆಯಲಾಗಿದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.