ಸೋಮವಾರ, ಸೆಪ್ಟೆಂಬರ್ 20, 2021
28 °C

ದೆಹಲಿಯಲ್ಲಿ ರಾಯಣ್ಣ ಪ್ರತಿಮೆ ನಿರ್ಮಿಸಲು ಪ್ರಯತ್ನ: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರಮುಖ ಸ್ಥಳವೊಂದರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಿಸಬೇಕೆಂಬುದು ಎಲ್ಲರ ಅಭಿಲಾಷೆ. ಇದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ತಿಳಿಸಿದರು.

ಸಂಗೊಳ್ಳಿ ರಾಯಣ್ಣ ಅವರ 224ನೇ ಜಯಂತ್ಯೋತ್ಸವದ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ನಗರದ ಕೆ.ಎಸ್‌.ಆರ್‌. ರೈಲ್ವೆ ನಿಲ್ದಾಣದ ಎದುರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

‘ಮುಂದಿನ ದಿನಗಳಲ್ಲಿ ದೆಹಲಿಗೆ ಭೇಟಿ ನೀಡಿದಾಗ ರಾಯಣ್ಣ ಪುತ್ಥಳಿ ನಿರ್ಮಿಸುವ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದರು.

‘ನಮ್ಮ ಸರ್ಕಾರವು ಸಂಗೊಳ್ಳಿ ಹಾಗೂ ನಂದಗಡದ ಅಭಿವೃದ್ಧಿಗೆ ಬದ್ಧವಾಗಿದೆ. ಸಂಗೊಳ್ಳಿಯ ಸೈನಿಕ ಶಾಲೆ ಹಾಗೂ ನಂದಗಡದ ಸಂಪೂರ್ಣ ಅಭಿವೃದ್ಧಿಗೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ₹80 ಕೋಟಿ ಅನುದಾನ ಘೋಷಿಸಿದ್ದರು. ಬಾಕಿ ಮೊತ್ತವನ್ನು ಈಗ ಬಿಡುಗಡೆಗೊಳಿಸಲಾಗಿದೆ. ಸೈನಿಕ ಶಾಲೆಯನ್ನು ಕೇಂದ್ರ ರಕ್ಷಣಾ ಇಲಾಖೆಗೆ ವಹಿಸಿಕೊಡಲು ನಿರ್ಧರಿಸಲಾಗಿದೆ. ಅಲ್ಲಿ ತರಬೇತಿ ಪಡೆದವರು ದೇಶ ಕಾಯುವ ಕೆಲಸಕ್ಕೆ ನಿಯೋಜನೆಗೊಳ್ಳಲಿದ್ದಾರೆ. ಆ ಮೂಲಕ ಸಂಗೊಳ್ಳಿ ರಾಯಣ್ಣನವರ ಹೆಸರನ್ನು ಅಮರಗೊಳಿಸಲಿದ್ದಾರೆ’ ಎಂದು ತಿಳಿಸಿದರು.

‘ರಾಯಣ್ಣನವರ ಜನ್ಮದಿನ ಹಾಗೂ ಹುತಾತ್ಮರಾದ ದಿನಗಳಂದು ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸುವಂತೆ ಆದೇಶಿಸಲಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣ ಹೆಸರು ಇಡುವ ಸಂಬಂಧ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

‘ಪೂಜ್ಯರಾದ ನಿರಂಜನಾನಂದ ಪುರಿ ಸ್ವಾಮೀಜಿಯವರ ಆಶೀರ್ವಾದ ನನ್ನ ಮೇಲಿದೆ. ಸ್ವಾಮೀಜಿಯವರು ಕನಕದಾಸರ ವಿಚಾರ, ನೀತಿ ಹಾಗೂ ರಾಯಣ್ಣನ ಶೂರತ್ವದ ಪ್ರತಿರೂಪ. ಕರುಣಾಮಯಿಯಾಗಿರುವ ಅವರು ಸಮಯ ಬಂದಾಗ ರಾಯಣ್ಣನ ರೂಪವನ್ನೂ ತಾಳುತ್ತಾರೆ. ಕನಕದಾಸರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಅವರು ನಮಗೆಲ್ಲಾ ಸ್ಫೂರ್ತಿ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ’ ಎಂದರು.

‘ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ, ಎಚ್‌.ಎಂ.ರೇವಣ್ಣ, ವಿಶ್ವನಾಥ್‌ ಅವರ ಪರಿಶ್ರಮದಿಂದ ಕಾಗಿನೆಲೆಯನ್ನು ಮಾದರಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ನಾನು ಪ್ರತಿನಿಧಿಸುವ ಶಿಗ್ಗಾಂವಿ ಕ್ಷೇತ್ರದ ಬಾಡದಲ್ಲಿ ಕನಕದಾಸರು ಜನಿಸಿದ್ದಾರೆ. ಹೀಗಾಗಿ ಆ ಸ್ಥಳವನ್ನು ಅಭಿವೃದ್ಧಿಪ‍ಡಿಸಿ ಕನಕದಾಸರ ವಿಚಾರಧಾರೆಗಳನ್ನು ಎಳೆಯ ಮಕ್ಕಳಿಗೂ ತಿಳಿಸುವ ಕೆಲಸ ಮಾಡಿದ್ದೇವೆ. ಎಲ್ಲರೂ ಆ ಸ್ಥಳಕ್ಕೆ ಒಮ್ಮೆ ಭೇಟಿ ನೀಡಬೇಕು’ ಎಂದು ತಿಳಿಸಿದರು.

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ‘ದೇಶವನ್ನು ಬ್ರಿಟಿಷರಿಂದ ವಿಮುಕ್ತಿಗೊಳಿಸುವ ಸಲುವಾಗಿ ಅವರ ವಿರುದ್ಧ ತೊಡೆತಟ್ಟಿ ನಿಂತ ವೀರ ಯೋಧ ಸಂಗೊಳ್ಳಿ ರಾಯಣ್ಣ. ಅವರ ಜನ್ಮದಿನದಂದು ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸುವಂತೆ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸಮುದಾಯದ ಪರವಾಗಿ ಅಭಿನಂದಿಸುತ್ತೇನೆ. ರಾಯಪ್ಪನವರ ಮೊಮ್ಮಗನಾಗಿರುವ ಬೊಮ್ಮಾಯಿ ಅವರು ಈ ಕಾರ್ಯ ಮಾಡಿರುವುದು ಖುಷಿಯ ವಿಚಾರ. ಅವರು ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ’ ಎಂದು ಹಾರೈಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು