ಸೋಮವಾರ, ಮೇ 17, 2021
21 °C
ಶಿವಾಜಿ ಅಭಿಮಾನಿಗಳಿಂದ ಪ್ರತಿಭಟನೆ

ಬೆಳಗಾವಿ: ಮಧ್ಯರಾತ್ರಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತಾಲ್ಲೂಕಿನ ಪೀರನವಾಡಿ ಗ್ರಾಮದ ವೃತ್ತದಲ್ಲಿ ಅಭಿಮಾನಿಗಳು ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ಪ್ರತಿಮೆಯನ್ನು ಮಧ್ಯರಾತ್ರಿ ಪ್ರತಿಷ್ಠಾಪನೆ ಮಾಡಿ ವಿಜಯೋತ್ಸವ ಆಚರಿಸಿದ್ದಾರೆ.

ರಾಯಣ್ಣನ ಜಯಂತಿಯ ದಿನವಾದ ಆ. 15ರಂದು ಸ್ಥಳೀಯ ರಾಯಣ್ಣನ ಅಭಿಮಾನಿಗಳು ಪ್ರತಿಷ್ಠಾಪಿಸಿದ್ದ ಪ್ರತಿಮೆಯನ್ನು ಪೊಲೀಸರು ಕೆಲ ಹೊತ್ತಿನಲ್ಲೇ ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದರು. ಅನುಮತಿ ಪಡೆದಿರಲಿಲ್ಲ ಎನ್ನುವುದು ಪೊಲೀಸರ ವಾದವಾಗಿತ್ತು. ಇದನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ವಿವಾದವನ್ನು ಆ.29ರಂದು ಬಗೆಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದರು. ಅಂದು ಸಚಿವ ಕೆ.ಎಸ್. ಈಶ್ವರಪ್ಪ ಕೂಡ ಬರುವುದು ನಿಗದಿಯಾಗಿತ್ತು. ಈ ನಡುವೆ ರಾತ್ರೋರಾತ್ರಿ ಅಭಿಮಾನಿಗಳು ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ.

ಬೇರೊಂದು ಪ್ರತಿಮೆ ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದಾರೆ. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ‌ ಗುಡಗನಟ್ಟಿ ಹಾಗೂ ಸ್ಥಳೀಯರು ಇದ್ದರು.

ಇದನ್ನು ಖಂಡಿಸಿ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ತಾವು ತಂದಿದ್ದ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೆ ಯತ್ನಿಸಿದರು. ಅವರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಶಿವಾಜಿ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಬೆಳಿಗ್ಗೆ ಸ್ಥಳಕ್ಕೆ ಬಂದ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಹಾಗೂ ಕಾರ್ಯಕರ್ತರನ್ನು ಪೊಲೀಸರು ಅಲ್ಲಿಂದ ಕಳುಹಿಸಿದರು.

ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.


ಕನ್ನಡ ಪರ ಹೋರಾಟಗಾರರ ಸಂಭ್ರಮಿಸಿದರು.

ಕನ್ನಡ ಪರ ಹೋರಾಟಗಾರರ ಸಂಭ್ರಮಾಚರಣೆ
ಬೆಳಗಾವಿ:
ಪೀರನವಾಡಿಯಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ ಕನ್ನಡಪರ ಹೋರಾಟಗಾರರು ನಗರದ ಹೃದಯ ಭಾಗವಾದ ರಾಣಿ ಚನ್ನಮ್ಮ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು. ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮಗೆ ಜೈಕಾರ ಹಾಕಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವ ವಹಿಸಿದ್ದರು.

ಲಾಠಿ ಪ್ರಹಾರ: ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿರೋಧಿಸಿ ಪ್ರತಿಭಟನೆಗೆ ಜಮಾಯಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಹಾಗೂ ಎಂಇಎಸ್ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಪರಿಸ್ಥಿತಿ ನಿಯಂತ್ರಿಸಲು ಗುಂಪನ್ನು ಚದುರಿಸಿದರು.

ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಿದ ಸ್ಥಳದಲ್ಲೇ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೆ ಅವಕಾಶ ಕೊಡಬೇಕು ಎನ್ನುವುದು ಅವರ ವಾದವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು