ಗುರುವಾರ , ಆಗಸ್ಟ್ 11, 2022
26 °C

ಹುಬ್ಬಳ್ಳಿಯಲ್ಲಿ ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಾಸ್ತು ತಜ್ಞ ಚಂದ್ರ ಶೇಖರ ಗುರೂಜಿ  ಅವರನ್ನು ನಗರದ ಉಣಕಲ್ ಪ್ರೆಸಿಡೆಂಟ್ ಹೊಟೇಲ್ ಸ್ವಾಗತಕಾರರ ಕೌಂಟರ್ ಬಳಿ ದುಷ್ಕರ್ಮಿಗಳು ಚಾಕೂವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಂಗಳವಾರ ನಡೆದಿದೆ.

 ಹೊಟೇಲ್ ಸ್ವಾಗತಕಾರರ ಕೇಂದ್ರದ ಬಳಿ ಭಕ್ತರ ಸೋಗಿನಲ್ಲಿ ಬಂದು ಹತ್ಯೆ ಮಾಡಿ, ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. 

ಡಿಸಿಪಿ ಸಾಹಿಲ್ ಬಾಗ್ಲಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಶುರು ಮಾಡಿದ್ದಾರೆ. ಕೆಎಂಸಿಗೆ ಚಂದ್ರಶೇಖರ ಗೂರುಜಿ ಅವರ ಮೃತದೇಹವನ್ನು ತರಲಾಗಿದೆ. ಪೊಲೀಸ್ ಆಯುಕ್ತ ಲಾಭೂರಾಮ ಹಾಗೂ ಅಧಿಕಾರಿಗಳ ತಂಡವು ಇದೆ.

ಇತ್ತೀಚೆಗಷ್ಟೇ ಗುರೂಜಿ ಸಹೋದರರೊಬ್ಬರ ಮೊಮ್ಮಗನ ಸಾವಾಗಿತ್ತು. ಅವರ ಕುಟುಂಬದವರನ್ನು ಭೇಟಿಯಾಗಲು ಗುರೂಜಿ ಹುಬ್ಬಳ್ಳಿಗೆ ಬಂದು 4 ದಿನ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ 220 ಸಂಖ್ಯೆಯ ರೂಮ್ ಬುಕ್ ಮಾಡಿದ್ದರು. ನಾಳೆಯೇ ಅವರು ರೂಮ್ ಚೆಕ್‌ಔಟ್ ಮಾಡಬೇಕಿತ್ತು.


ಚಂದ್ರಶೇಖರ ಗುರೂಜಿ ಹತ್ಯೆಯಾದ ಹುಬ್ಬಳ್ಳಿಯ ಉಣಕಲ್ ಕ್ರಾಸ್‌ನಲ್ಲಿರುವ ಪ್ರೆಸಿಡೆಂಟ್ ಹೋಟೆಲ್

ಸೋಮವಾರ 12.43 ರ ಸುಮಾರು ಚಂದ್ರಶೇಖರ್ ಗುರೂಜಿ ಅವರನ್ನು ವಾಸ್ತು ಸಲಹೆ ನೆಪದಲ್ಲಿ ಭೇಟಿಯಾಗಲು ಬಂದ ಇಬ್ಬರು ಈ ಕೃತ್ಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕೃತ್ಯ ನಡೆಯುವ ವೇಳೆ ಗುರೂಜಿ ಪಕ್ಕ ಒಬ್ಬ ಯುವತಿ ಕೂಡ ಕುಳಿತುಕೊಂಡಿದ್ದರು. ಹಂತಕರು ಗುರೂಜಿ ಮೇಲೆ ದಾಳಿ ಮಾಡಿದ ತಕ್ಷಣ ಆ ಮಹಿಳೆ ಕಿರುಚಿಕೊಂಡು ಓಡಿ ಹೋಗಿದ್ದಾರೆ. ಹೋಟೆಲ್‌ನ ಸ್ವಾಗತಕಾರರು ಕೂಡ ಘಟನೆಗೆ ಗಾಬರಿಗೊಂಡು ಮೂಕಪ್ರೇಕ್ಷಕರಾಗಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಗುರೂಜಿ ಯಾರು?

ವಾಸ್ತುತಜ್ಞ  ಚಂದ್ರಶೇಖರ ಗುರೂಜಿ ಮೂಲತಃ ಬಾಗಲಕೋಟೆ ನಗರದ ಮೋಟಗಿ ಗಲ್ಲಿಯ ನಿವಾಸಿಯಾಗಿದ್ದರು. ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡಿದ್ದರು. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಿವಾಸ ಹೊಂದಿದ್ದರು.

ಮೋಟಗಿ ಗಲ್ಲಿಯ ವಿರೂಪಾಕ್ಷಪ್ಪ ಅಂಗಡಿ, ನೀಲವ್ವ‌ ಅಂಗಡಿಯವರ ಪುತ್ರನಾಗಿದ್ದ ಗುರೂಜಿ, ಆರು ಮಂದಿ ಮಕ್ಕಳಲ್ಲಿ ಚಂದ್ರಶೇಖರ ಮೂರನೇಯವರಾಗಿದ್ದರು.

ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿ ನೌಕರಿ ಅರಸಿ ಅವರು ಮೂರೂವರೆ ದಶಕಗಳ ಹಿಂದೆ ಮುಂಬಯಿಗೆ ತೆರಳಿದ್ದರು. ಆರಂಭದಲ್ಲಿ ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಅವರು, ನಂತರ ಸರಳ ವಾಸ್ತು ಆರಂಭಿಸಿದ್ದರು. ಮುಂಬಯಿ, ಬೆಂಗಳೂರು, ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದರು.

ಸರಳ ವಾಸ್ತು ಪ್ರವರ್ಧಮಾನಕ್ಕೆ ಬಂದ ನಂತರ ವಾಸ್ತುಪ್ರಿಯರಲ್ಲಿ ಜನಪ್ರಿಯತೆ ಗಳಿಸಿದ್ದ ಇವರು, ಒಬ್ಬ ಸ್ಟಾರ್ ವಾಸ್ತು ತಜ್ಞ ಎನ್ನಲಾಗುತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು