ಭಾನುವಾರ, ಮಾರ್ಚ್ 26, 2023
24 °C

ಎಲ್ಲದಕ್ಕೂ ಎಸ್‌ಸಿಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯಿಸಬಾರದು: ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂತ್ರಸ್ತರು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದವರು ಎಂಬ ಒಂದೇ ಕಾರಣಕ್ಕೆ ಎಲ್ಲಾ ಪ್ರಕರಣಗಳಲ್ಲೂ ಎಸ್‌ಸಿಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಅನ್ವಯಿಸಬಾರದು ಎಂದು ಹೈಕೋರ್ಟ್ ಹೇಳಿದೆ.

ನಗರದ ವಿಶೇಷ ನ್ಯಾಯಾಲಯದಲ್ಲಿ ರಾಜಾಜಿನಗರದ ನಿವಾಸಿಯೊಬ್ಬರ ವಿರುದ್ಧ ನಡೆಯುತ್ತಿದ್ದ ವಿಚಾರಣೆ ರದ್ದುಗೊಳಿಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಅವರಿದ್ದ ಪೀಠ, ಈ ಅಭಿಪ್ರಾಯಪಟ್ಟಿತು.

ತುಮಕೂರಿನ ವ್ಯಕ್ತಿಯೊಬ್ಬರು ನೀಡಿದ್ದ ದೂರು ಆಧರಿಸಿ ಎಸ್‌ಸಿಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ(ಪಿಒಎ) ನಡೆಯುತ್ತಿದ್ದ ವಿಚಾರಣೆಯನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಯಶವಂತಪುರ ಹೋಬಳಿಯ ಹೇರೋಹಳ್ಳಿ ಗ್ರಾಮದ 3 ಎಕರೆ 3 ಗುಂಟೆ ಜಮೀನನ್ನು ಅರ್ಜಿದಾರರು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿ ಕಬಳಿಸಲು ಯತ್ನಿಸಿದ್ದರು ಎಂಬುದು ಆರೋಪ. ‘ಈ ವಿವಾದವು ಸಂಪೂರ್ಣ ಜಮೀನಿಗೆ ಸಂಬಂಧಿಸಿದ ವ್ಯಾಜ್ಯ. ಪಿಒಎ ಅಡಿಯಲ್ಲಿ ಯಾವುದೇ ಅಪರಾಧ ಇಲ್ಲ’ ಎಂದು ಅರ್ಜಿದಾರರು ವಾದಿಸಿದ್ದರು.

‘ಜಾತಿ ಕಾರಣಕ್ಕೆ ಎಸಗಿದ ಅಪರಾಧ ಆಗದಿದ್ದರೆ ಭಾರತೀಯ ದಂಡ ಸಂಹಿತೆ(ಐಪಿಸಿ) ಅಡಿಯಲ್ಲಿ ಆರೋಪಿಯ ವಿರುದ್ಧ ಬೇರೆ ಪ್ರಕರಣಗಳನ್ನು ದಾಖಲಿಸಿ ದೋಷಾರೋಪ ಸಲ್ಲಿಸಬಹುದಾಗಿದೆ. ಸತ್ಯ ಮತ್ತು ಸಂದರ್ಭ ನೋಡಿಕೊಂಡು ಮುಂದುವರಿಯಬೇಕಾಗುತ್ತದೆ’ ಎಂದು ಪೀಠ ಹೇಳಿದೆ.

‘ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರನ್ನು ದೌರ್ಜನ್ಯ ಅಥವಾ ದಬ್ಬಾಳಿಕೆಯಿಂದ ರಕ್ಷಿಸುವುದು ಪಿಒಎ ಕಾಯ್ದೆಯ ಉದ್ದೇಶ. ಆದರೆ, ಅದನ್ನು ದುರುಪಯೋಗ ಮಾಡಿಕೊಳ್ಳಲು ಅನುಮತಿಸಲಾಗದು. ದೋಷಾರೋಪ ಪಟ್ಟಿ ಸಲ್ಲಿಸುವ ಮುನ್ನ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕಾದ ಜವಾಬ್ದಾರಿ ತನಿಖಾಧಿಕಾರಿ ಮೇಲೆ ಇದೆ’ ಎಂದು ಪೀಠ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು