ಶನಿವಾರ, ಜನವರಿ 23, 2021
18 °C

ರೋಷನ್‌ ಬೇಗ್‌ ಪತ್ನಿ, ಪುತ್ರನಿಗೆ ಬಂಧನದಿಂದ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಶಾಸಕ ಆರ್‌.ರೋಷನ್‌ ಬೇಗ್‌ ಅವರ ಪತ್ನಿ ಸಬೀಹಾ ರೋಷನ್‌ ಮತ್ತು ಪುತ್ರ ರುಮಾನ್‌ ಬೇಗ್‌ ರಹಮಾನ್‌ ಅವರಿಗೆ ಸುಪ್ರೀಂಕೋರ್ಟ್‌ ಬಂಧನದಿಂದ ರಕ್ಷಣೆ ನೀಡಿದೆ.

ಈ ಪ್ರಕರಣದಲ್ಲಿ ವಿಚಾರಣೆ ಮುಂದುವರಿಸದಂತೆ ಕೋರಿ ರೋಷನ್‌ ಬೇಗ್‌ ಹಾಗೂ ಅವರ ಕುಟುಂಬದವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ನವೆಂಬರ್‌ನಲ್ಲಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಬೇಗ್‌ ಕುಟುಂಬದವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ದಿನೇಶ್‌ ಮಹೇಶ್ವರಿ ಮತ್ತು ಹೃಶಿಕೇಷ್‌ ರಾಯ್‌ ಅವರಿದ್ದ ತ್ರಿಸದಸ್ಯ ಪೀಠ ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿತು. ಈ ಸಂಬಂಧ ಪೀಠವು ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ನೀಡಿತು.

ಬೇಗ್‌ ಕುಟುಂಬದ ಪರ ವಕೀಲ ಗೌರವ್‌ ಅಗರವಾಲ್‌ ಅವರ ವಾದವನ್ನು ಆಲಿಸಿದ ಪೀಠವು ‘ಆರೋಪಿಗಳನ್ನು ಮುಂದಿನ ವಿಚಾರಣೆಯವರೆಗೂ ಬಂಧಿಸಬಾರದು’ ಎಂದು ಸೂಚಿಸಿತು.

ಬೇಗ್‌ ಮತ್ತು ಕುಟುಂಬದವರ ವಿರುದ್ಧ ಸಲ್ಲಿಕೆಯಾಗಿದ್ದ ಖಾಸಗಿ ದೂರಿನ ಕುರಿತು ತನಿಖೆ ನಡೆಸುವಂತೆ ವಿಚಾರಣಾ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. 2012ರಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, 2014ರಲ್ಲಿ ಪ್ರಕರಣ ಮುಕ್ತಾಯಗೊಳಿಸಲು ಶಿಫಾರಸು ಮಾಡಿ ‘ಬಿ’ ವರದಿ ಸಲ್ಲಿಸಿದ್ದರು.

2018ರ ಮೇ ತಿಂಗಳಲ್ಲಿ ‘ಬಿ’ ವರದಿ ತಿರಸ್ಕರಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಸಬೀಹಾ ರೋಷನ್‌ ಮತ್ತು ರುಮಾನ್‌ ಬೇಗ್‌ ವಿರುದ್ಧ ವಿಚಾರಣೆ ಆರಂಭಿಸಲು ಸೂಚಿಸಿತ್ತು. ರೋಷನ್‌ ಬೇಗ್‌ ಶಾಸಕರಾಗಿದ್ದ ಕಾರಣದಿಂದ ಅವರ ವಿರುದ್ಧ ವಿಚಾರಣೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು, ಸಲ್ಲಿಸುವಂತೆ ತನಿಖಾಧಿಕಾರಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು.

ಆರೋಪಿತರು ₹ 56.71 ಲಕ್ಷ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಮಾಹಿತಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ವರದಿಯಲ್ಲಿದೆ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹೈಕೋರ್ಟ್‌ಗೆ ತಿಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು