ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ | ಬಿಜೆಪಿಯಿಂದ ವಂಚಿಸುವ ಕೆಲಸ: ಜಿ. ಪರಮೇಶ್ವರ್‌

ಕೆಪಿಸಿಸಿ ಪ‍್ರಣಾಳಿಕೆ ಸಮಿತಿ ಅಧ್ಯಕ್ಷ ಜಿ. ಪರಮೇಶ್ವರ್‌ ಅಸಮಾಧಾನ
Last Updated 14 ಡಿಸೆಂಬರ್ 2022, 10:16 IST
ಅಕ್ಷರ ಗಾತ್ರ

ಮೈಸೂರು: ’ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ರಾಜ್ಯದ ಜನರನ್ನು ಬಿಜೆಪಿ ವಂಚಿಸುವ ಕೆಲಸ ಮಾಡುತ್ತಿದೆ‘ ಎಂದು ಕೆಪಿಸಿಸಿ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಕಿಡಿಕಾರಿದರು.

ಚಿತ್ರದುರ್ಗದಲ್ಲಿ ಜ.8ರಂದು ಕಾಂಗ್ರೆಸ್‌ನಿಂದ ಆಯೋಜಿಸಿರುವ ಎಸ್ಸಿ–ಎಸ್ಟಿ ಸಮುದಾಯಗಳ ‘ಬೃಹತ್ ಐಕ್ಯತಾ ಸಮಾವೇಶ‘ ಸಂಬಂಧ, ಬುಧವಾರ ಮೈಸೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ವಿಭಾಗ ಮಟ್ಟದ ಪೂರ್ವಭಾವಿ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿ ಈ ವಿಷಯ ತಿಳಿಸಿದರು.

’ಮೀಸಲಾತಿ ಹೆಚ್ಚಳಕ್ಕೆ ಅಡಿಗಲ್ಲು ಹಾಕಿದ್ದೇ ಕಾಂಗ್ರೆಸ್‌ ಪಕ್ಷ. ಸಮ್ಮಿಶ್ರ ಸರ್ಕಾರದಲ್ಲಿ ಈ ಸಂಬಂಧ ಚರ್ಚಿಸಿ, ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದೆವು. ಸಮಿತಿಯ ವರದಿಯು ಸರ್ಕಾರ ಸಲ್ಲಿಕೆಯಾಗುವ ವೇಳೆಗೆ ಸರ್ಕಾರ ಪತನಗೊಂಡಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು, ಕಾಲಮಿತಿಯ ಒಳಗಾಗಿ ಮೀಸಲಾತಿ ಹೆಚ್ಚಳಕ್ಕೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು‘ ಎಂದರು.

ದಾರಿತಪ್ಪಿಸುವ ಕೆಲಸ: ’ಮೀಸಲಾತಿ ಹೆಚ್ಚಳಕ್ಕೂ ಮುನ್ನ ರಾಜ್ಯದ ಅಧಿವೇಶನದಲ್ಲಿ ಸರ್ವಾನುಮತದಿಂದ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ನಂತರ, ಸಂವಿಧಾನದ 9ನೆ ಶೆಡ್ಯೂಲ್‌ಗೆ ತಿದ್ದುಪಡಿ ತಂದು, ಮೀಸಲಾತಿ ಹೆಚ್ಚಳ ಸಂಬಂಧ ಸಂಸತ್ತಿನ ಎರಡು ಅಧಿವೇಶನದಲ್ಲಿ ಅಂಗೀಕರಿಸಿ ಅನುಮೋದನೆ ಪಡೆಯಬೇಕು. ಆದರೆ, ರಾಜ್ಯ ಸರ್ಕಾರ ಈ ಕೆಲಸ ಮಾಡದ ಕಾರಣ, ಮೀಸಲಾತಿ ಹೆಚ್ಚುವರಿ ಕಾರ್ಯಗತವಾಗುವುದಿಲ್ಲ. ‘ಈಗಿರುವ ಶೇಕಡಾ 50 ಮೀಸಲಾತಿ ಪ್ರಮಾಣ ಬದಲಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇಲ್ಲ‘ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ರಾಜ್ಯ ಸಚಿವೆ ಪ್ರತಿಮಾ ಭೌಮಿಕ್‌ ಕೂಡ ಲೋಕಸಭೆಯಲ್ಲಿ ವಾರದ ಹಿಂದೆ ಸ್ಪಷ್ಟಪಡಿಸಿದ್ದಾರೆ. ಆದರೆ, ರಾಜ್ಯದ ಜನರನ್ನು ಈ ವಿಚಾರದಲ್ಲಿ ಮೂರ್ಖರನ್ನಾಗಿ ಮಾಡುತ್ತಿದೆ‘ ಎಂದು ಅಸಮಾಧಾನ ಹೊರಹಾಕಿದರು.

’ಕೇಂದ್ರ–ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಅಸ್ತಿತ್ವದಲ್ಲಿದ್ದು, ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸಿ, ಆದಷ್ಟು ಶೀಘ್ರ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು‘ ಎಂದು ಈ ವೇಳೆ ಅವರು ಒತ್ತಾಯಿಸಿದರು.

’ದಲಿತ ಮುಖ್ಯಮಂತ್ರಿ ವಿಚಾರ ಈಗ ಅಪ್ರಸ್ತುತ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರುವುದು ಮುಖ್ಯ. ಕಾಂಗ್ರೆಸ್‌ನಲ್ಲಿ ಮಾತ್ರ ದಲಿತ ಮುಖ್ಯಮಂತ್ರಿಯಾಗಲು ಸಾಧ್ಯ‘ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜ.8ರಂದು ಐಕ್ಯತೆಯ ಸಮಾವೇಶ: ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‍ಪಕ್ಷದಿಂದ ಚಿತ್ರದುರ್ಗದ ಕಾಲೇಜು ಮೈದಾನದಲ್ಲಿ ಬೃಹತ್‌ ಐಕ್ಯತಾ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.

’ರಾಜ್ಯದಾದ್ಯಂತ ಸುಮಾರು 5 ಲಕ್ಷ ಮಂದಿ ಈ ಸಮಾವೇಶದಲ್ಲಿ ಭಾಗವಹಿಸಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪಕ್ಷದ ವಿವಿಧ ಪದಾಧಿಕಾರಿಗಳು, ಶಾಸಕರು ಭಾಗವಹಿಸಲಿದ್ದಾರೆ.ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದೆ‘ ಎಂದು ಡಾ.ಜಿ. ಪರಮೇಶ್ವರ್‌ ಮಾಹಿತಿ ನೀಡಿದರು.

ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಎಚ್‌.ಮಂಜುನಾಥ್‌, ಪುಟ್ಟರಂಗಶೆಟ್ಟಿ, ಕಾಂಗ್ರೆಸ್‌ ಮುಖಂಡರಾದ ಕೆ.ಎಚ್‌.ಮುನಿಯಪ್ಪ, ಎಚ್‌.ಸಿ.ಮಹಾದೇವಪ್ಪ, ಆರ್‌.ಧರ್ಮಸೇನಾ, ಧ್ರುವನಾರಾಯಣ್, ಮೈಸೂರು ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌, ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT