ಶುಕ್ರವಾರ, ಏಪ್ರಿಲ್ 23, 2021
22 °C
ಕಾಳಗಿ ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಭೇಟಿ,

ನಾಳೆಯಿಂದ ಶಾಲೆ ಪುನರರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ‘ಪಟ್ಟಣದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ. ಶಾಲೆಯನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಿ ಮಾರ್ಚ್‌ 8ರಿಂದ ಮತ್ತೆ ತರಗತಿ ಆರಂಭಿಸಲಾಗುವುದು’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಶುಕ್ರವಾರ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶನಿವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ಲಕ್ಷ್ಮಣನಾಯಕ ತಾಂಡಾದ ವಿದ್ಯಾರ್ಥಿಯೊಬ್ಬ ಬೆಡಸೂರ ತಾಂಡಾದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ. ಅಲ್ಲಿಗೆ ಮಹಾರಾಷ್ಟ್ರದ ಜನರು ಬಂದಿದ್ದರು. ಅಲ್ಲಿಂದ ವಿದ್ಯಾರ್ಥಿಗೆ ಸೋಂಕು ತಗುಲಿ ಬಳಿಕ ಶಾಲೆಯ ಇತರ ವಿದ್ಯಾರ್ಥಿಗಳಿಗೆ ಹರಡಿಕೊಂಡಿದೆ. ಮಾರ್ಚ್ 1ರಂದು ಆರೋಗ್ಯ ಇಲಾಖೆ ಸಿಬ್ಬಂದಿ ಸಹಜವಾಗಿ ಶಾಲೆಯಲ್ಲಿ 22 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕೈಗೊಂಡಾಗ 15 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿತ್ತು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಶೇಖರ ಮಾಲಿ ಜಿಲ್ಲಾಧಿಕಾರಿಗೆ ವಿವರಿಸಿದರು.

‘ಸೋಮವಾರದಿಂದ ಶಾಲೆ ಪುನರಾರಂಭಿಸಿ. ಹಾಸ್ಟೆಲ್ ವಿದ್ಯಾರ್ಥಿಗಳ ಮತ್ತು ಕೋವಿಡ್ ಲಕ್ಷಣಗಳು ಕಂಡುಬರುವ ವಿದ್ಯಾರ್ಥಿಗಳ ಮೇಲೆ ತೀವ್ರ ನಿಗಾವಹಿಸಿ. ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸಿ. ಜನರು ಒಂದೆಡೆ ಸೇರದಂತೆ ನೋಡಿಕೊಳ್ಳಿ. ಜಾತ್ರೆಗಳು ಸರಳವಾಗಿ ಜರುಗುವಂತೆ ಮಾಡಿ’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಮತ್ತೆ 142 ಮಾದರಿ ಸಂಗ್ರಹ: ಕಾಳಗಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮಂಗಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಶನಿವಾರ, ಉಳಿದ ಸೋಂಕಿತ ಇಬ್ಬರು ವಿದ್ಯಾರ್ಥಿಗಳ ಹಾಗೂ ನಾಮುನಾಯಕ ತಾಂಡಾ, ಲಕ್ಷ್ಮಣನಾಯಕ ತಾಂಡಾ, ದೇವಿಕಲ್ ತಾಂಡಾದ ಜನ ಸೇರಿ ಒಟ್ಟು 142 ಮಂದಿಯ ಗಂಟಲು  ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ಪಾಟೀಲ ಮಾಹಿತಿ ನೀಡಿದರು.

ಶುಕ್ರವಾರ ಏಕಾಏಕಿ 15 ವಿದ್ಯಾರ್ಥಿಗಳು ಪಾಸಿಟಿವ್‌ ಬಂದ ಕಾರಣ ಸುತ್ತಲಿನ ಶಾಲೆಗೆ 15 ದಿನ ರಜೆ ಘೋಷಣೆ ಮಾಡಲಾಗಿತ್ತು. ಕಾಳಗಿ ಮತ್ತು ಸುತ್ತಲಿನ ಜನರಲ್ಲಿ ಭೀತಿ ಆವರಿಸಿಕೊಂಡಿತ್ತು. ಊರು ಮತ್ತು ತಾಂಡಾಗಳ ಎಲ್ಲೆಡೆ ಸ್ವಚ್ಛತೆ, ಜಾಗೃತಿ ಕೈಗೊಳ್ಳಲಾಯಿತು. ಸೋಮವಾರದ ಸಂತೆ ರದ್ದುಪಡಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಶನಿವಾರ ಬಂದ ನೆಗೆಟಿವ್ ವರದಿ ಎಲ್ಲ ಕಡೆಯೂ ನಿಟ್ಟಿಸಿರು ಬಿಡುವಂತೆ ಮಾಡಿದೆ.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರಿ ಅಧಿಕಾರಿ ಉಮಾ ಬರಗೇರಿ, ತಹಶೀಲ್ದಾರ್ ನೀಲಪ್ರಭಾ ಬಬಲಾದ, ಸಿ.ಎಚ್.ಸಿ ಆಡಳಿತ ವೈದ್ಯಾಧಿಕಾರಿ ಡಾ.ಅಂಬರೀಶ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ, ಮಂಗಲಗಿ ವೈದ್ಯಾಧಿಕಾರಿ ಡಾ.ದೀಪಕ್ ರಾಠೋಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ, ಕಂದಾಯ ನಿರೀಕ್ಷಕ ಕರಬಸಪ್ಪ ಬೆನಕನಳ್ಳಿ, ಮುಖ್ಯಶಿಕ್ಷಕ ಮಹೇಶ ಬಡಿಗೇರ, ಶಿಕ್ಷಣ ಸಂಯೋಜಕ ವೆಂಕಟರೆಡ್ಡಿ, ಗ್ರಾಮ ಲೆಕ್ಕಿಗ ಸಂತೋಷ ಮಾನವಿ, ಸಿ.ಆರ್.ಪಿ ಬಸವಂತರಾಯ ಪೆದ್ದಿ ಅನೇಕರು ಇದ್ದರು.

ಕೋರವಾರ ಜಾತ್ರೆ ರದ್ದು

ಮಹಾಶಿವರಾತ್ರಿಗೆ ನೆರವೇರುವ ಕೋರವಾರ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವ ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ರದ್ದುಪಡಿಸಲಾಗಿದೆ. ಈ ಬಗ್ಗೆ ಕಲಬುರ್ಗಿ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡದೆ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲರೂ ಸಹಕರಿಸಬೇಕು ಎಂದು ತಹಶೀಲ್ದಾರ್ ನೀಲಪ್ರಭಾ ಬಬಲಾದ ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.