ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕಾಲದಲ್ಲಿ ಸ್ವಾವಲಂಬಿಯಾಗುವತ್ತ ತೃತೀಯ ಲಿಂಗಿಗಳ ಹೆಜ್ಜೆ

ಸ್ವಉದ್ಯೋಗದಲ್ಲಿ ನೆಮ್ಮದಿ
Last Updated 8 ಆಗಸ್ಟ್ 2020, 17:59 IST
ಅಕ್ಷರ ಗಾತ್ರ
ADVERTISEMENT
""
""

ಕಲಬುರ್ಗಿ: ಮಂಗಳಮುಖಿಯರು ಎಂದಾಕ್ಷಣ ಮಹಾನಗರಗಳ ಸಿಗ್ನಲ್‌ಗಳಲ್ಲಿ, ಟೋಲ್‌ಗಳಲ್ಲಿ, ರೈಲುಗಳಲ್ಲಿ ಭಿಕ್ಷೆ ಬೇಡಿ ಹೊಟ್ಟೆಹೊರೆಯುವ ತೃತೀಯ ಲಿಂಗಿಗಳ ಚಿತ್ರಣವೇ ಕಣ್ಣೆದುರು ಮೂಡುತ್ತದೆ. ಅನಾದರಕ್ಕೆ ಒಳಗಾದರೂ ಅವನ್ನೆಲ್ಲಾ ಮೆಟ್ಟಿ ನಿಂತು ಸ್ವಉದ್ಯೋಗದಲ್ಲಿ ತೊಡಗಿಕೊಂಡವರೂ ಇದ್ದಾರೆ.

ಲಾಕ್‌ಡೌನ್‌ ಹೇರಿದ ಮೇಲೆ ಮತ್ತು ಈಗ ಕೊರೊನಾ ಎಲ್ಲೆಡೆ ಕಾಡುತ್ತಿರುವ ಈ ದಿನಗಳಲ್ಲಿ ಸಾಮಾನ್ಯ ಜನರೇ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಂಥ ದುರ್ಭರ ಪರಿಸ್ಥಿತಿಯಲ್ಲೂ ಕೆಲವು ಮಂಗಳಮುಖಿಯರು ಭಿಕ್ಷಾಟನೆ ತ್ಯಜಿಸಿದ್ದಾರೆ. ಕೈತುಂಬಾ ಗಳಿಕೆ ಆಗದಿದ್ದರೂ, ನೆಮ್ಮದಿಯ ಭಾವ ಮೂಡಿಸುವ ಸ್ವಉದ್ಯೋಗದತ್ತ ಮುಖಮಾಡಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಯಾನಗಹಳ್ಳಿಯಲ್ಲಿ ಈ ಸಮುದಾಯದ ಐವರು ಸೇರಿಕೊಂಡು ಕೃಷಿ ಕೆಲಸ ಮಾಡಿಕೊಂಡಿದ್ದಾರೆ.

ಕಲಬುರ್ಗಿ ಜಿಲ್ಲೆಯಲ್ಲಿ ಒಂದಿಷ್ಟು ಮಂದಿ ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇತಿಮಿತಿಗಳ ನಡುವೆಯೂ ಹೊಸ ಕಸುಬನ್ನು ನೆಚ್ಚಿಕೊಂಡು ಆತ್ಮವಿಶ್ವಾಸದಿಂದ ಮುಂದುವರಿಯುತ್ತಿದ್ದಾರೆ.

‘ನಾಲ್ಕು ತಿಂಗಳ ಹಿಂದೆ ಸ್ನೇಹಿತರ ಸಹಕಾರದಿಂದ ಒಂದು ಎಮ್ಮೆ ಖರೀದಿಸಿದೆ. ಹಾಲು ಮಾರಾಟ ಮಾಡಿ ಬಂದ ಲಾಭದಲ್ಲಿ ಮತ್ತೆ ಎರಡು ಖರೀದಿಸಿದ್ದೇನೆ. ಈಗ ಮೂರೂ ಎಮ್ಮೆಗಳು ಹಿಂಡುತ್ತವೆ. ದಿನವೂ ನಾನೇ ಮನೆ– ಮನೆಗೆ ಹೋಗಿ ಹಾಲು ಕೊಡುತ್ತೇನೆ. ಒಂದು ಲೀಟರ್‌ಗೆ ₹50 ದರ. ತಿಂಗಳಿಗೆ ಹೆಚ್ಚೂ– ಕಡಿಮೆ ₹15 ಸಾವಿರ ಗಳಿಕೆ ಆಗುತ್ತದೆ. ಇದರಲ್ಲಿ ಎಮ್ಮೆಗೆ ಮೇವು, ಹೊಟ್ಟು, ಮೇಯಿಸು
ವವರ ಕೂಲಿ ಸೇರಿ ₹ 8 ಸಾವಿರ ಖರ್ಚಾಗುತ್ತದೆ. ಉಳಿದಿದ್ದರಲ್ಲಿ ನೆಮ್ಮದಿ ಪಟ್ಟುಕೊಳ್ಳಬೇಕು ಎಂದುಕೊಂಡಿದ್ದೇನೆ’ ಎನ್ನುತ್ತಾರೆ.

ಸೃಷ್ಟಿ

ದಿನಗೂಲಿಯಲ್ಲಿ ನೆಮ್ಮದಿ: ‘18 ವರ್ಷಗಳಿಂದ ಕಲಬುರ್ಗಿಯ ‘ಸ್ನೇಹ ಸಂಸ್ಥೆ’ ಸಂಸ್ಥೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಎಚ್‌ಐವಿ ಪೀಡಿತರಿಗಾಗಿ ಕೆಲಸ ಮಾಡುತ್ತಿದ್ದೆ. ಲಾಕ್‌ಡೌನ್‌ ಕಾರಣ ಉಪಜೀವನವೇ ಬಂದ್‌ ಆಗಿತ್ತು. ಅನಿವಾರ್ಯವಾಗಿ ಹಳ್ಳಿಗೆ ಮರಳಿದ್ದು, ಈಗ ಕೂಲಿ ಕೆಲಸ ಮಾಡುತ್ತಿದ್ದೇನೆ. ಹೊಲ, ಮನೆ ಕೆಲಸ, ಕಟ್ಟಡ ನಿರ್ಮಾಣ ಹೀಗೆ ಏನು ಸಿಗುತ್ತದೆಯೋ ಅದಕ್ಕೆ ಹೋಗುತ್ತೇನೆ. ದಿನಕ್ಕೆ ₹ 150 ಕೂಲಿ ಸಿಗುತ್ತದೆ‘ ಎನ್ನುತ್ತಾರೆ ಆಳಂದ ತಾಲ್ಲೂಕು ಚಿತಲಿ ಗ್ರಾಮದ ವಿಠಲ.

‘ಬಾಡಿಗೆ ಮನೆ ಖರ್ಚು ತೆಗೆದು ಹೊಟ್ಟೆಗೆ ಉಳಿಯುವುದು ಅಷ್ಟಕ್ಕಷ್ಟೇ.‌ ಭಿಕ್ಷೆ ಬೇಡಿ ಸಾವಿರ ಗಳಿಸಿದರೂ ತೃಪ್ತಿ ಇರುತ್ತಿರಲಿಲ್ಲ. ಈಗ ಹೊಟ್ಟೆ ಖಾಲಿ ಇದ್ದರೂ ನೆಮ್ಮದಿಯಿಂದ ನಿದ್ದೆ ಮಾಡುತ್ತೇನೆ’ ಎಂದು ಹೇಳುತ್ತಾರೆ.

ಎಮ್ಮೆಗಳೇ ಜೀವನಾಧಾರ‌

‘ಕೊರೊನಾ ಬಂದ ಮೇಲೆ ಭಿಕ್ಷಾಟನೆ ಸಂಪೂರ್ಣ ನಿಲ್ಲಿಸಬೇಕಾಯಿತು. ಹಬ್ಬದ ದಿನಗಳಲ್ಲೇ ಭಿಕ್ಷೆ ಕೊಡದ ಜನ ಇಂಥ ಸಾಂಕ್ರಾಮಿಕ ರೋಗದ ದಿನಗಳಲ್ಲಿ ಕೊಡುತ್ತಾರೆಯೇ? ಅದಕ್ಕಿಂತ ಹೆಚ್ಚಾಗಿ, ಲಾಕ್‌ಡೌನ್‌ ಕಾರಣ ಯಾರಿಗೂ ಬಿಡಿಗಾಸಿನ ಗಳಿಕೆ ಇಲ್ಲ. ತುತ್ತಿನಚೀಲ ತುಂಬಿಸಿಕೊಳ್ಳಲು ಅನಿವಾರ್ಯವಾಗಿ ಎಮ್ಮೆ ಸಾಕಣೆಗೆ ಮುಂದಾದೆ’ ಎನ್ನುತ್ತಾರೆ ಕಲಬುರ್ಗಿ ಜಿಲ್ಲೆ ಆಳಂದ ಪಟ್ಟಣದ ಸೃಷ್ಟಿ.

ಕೃಷಿಯತ್ತ ಒಲವು

ಕೊರೊನಾ ಸಂಕಷ್ಟದ ಸಮಯದಲ್ಲೂ ಸ್ವಾವಲಂಬಿಗಳಾಗಲು ಬಯಸಿರುವ ಚಾಮರಾಜನಗರ ತಾಲ್ಲೂಕಿನ ಯಾನಗಹಳ್ಳಿ ಹಾಗೂ ಸುತ್ತಮುತ್ತಲಿನ ಐವರು ತೃತೀಯ ಲಿಂಗಿಗಳು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಕುಟುಂಬದ ಆಸ್ತಿ ಪಾಲಿನಲ್ಲಿ ಸಿಕ್ಕಿದ ಜಮೀನಿನಲ್ಲಿ ಎಲ್ಲರೂ ವ್ಯವಸಾಯ ಮಾಡುತ್ತಿದ್ದಾರೆ. ಕುಟುಂಬದ ಸಹಕಾರವೂ ಇವರಿಗಿದೆ.

ಯಾನಗಹಳ್ಳಿಯ ಮೀನಾ, ದೇವಿಯಮ್ಮ, ಕೆಂಪಮ್ಮ ಹಾಗೂ ತಾಹಿರಾ ವ್ಯವಸಾಯ ಮಾಡಿದರೆ, ರಾಗಿಣಿ ಎಂಬುವವರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಏಳೆಂಟು ಹಸುಗಳನ್ನು ಸಾಕುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿಯಲ್ಲೂ ಈ ಸಮುದಾಯದ 8–10 ಮಂದಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಶಾಂತಪ್ಪ ಭೀಮಶ್ಯಾ ಪರೀಟ

ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು!

ಚಿತ್ರದುರ್ಗ ಹೊರವಲಯದ ಹೆದ್ದಾರಿಯಲ್ಲಿ ಬರುವ ಕ್ಯಾದಿಗೆರೆ ಎಂಬಲ್ಲಿ ಭಾವನಾ ಎಂಬ ತೃತೀಯ ಲಿಂಗಿಯೊಬ್ಬರು ನಾಲ್ಕೈದು ವರ್ಷಗಳ ಕಾಲ ಯಶಸ್ವಿಯಾಗಿ ಧಾಬಾ ನಡೆಸಿದ್ದರು. ಐವರಿಗೆ ಕೆಲಸವನ್ನೂ ಕೊಟ್ಟಿದ್ದರು.

ಸುಮಾರು ಒಂದೂವರೆ ವರ್ಷದ ನಂತರ ಈ ಧಾಬಾ ಮುಚ್ಚಿಹೋಗಿತ್ತು. ಇವರಿಗೆ ಪೈಪೋಟಿಯಾಗಿ ಕೆಲ ವರ್ಷ ಇದೇ ಸಮುದಾಯದ ಇನ್ನೊಬ್ಬರು ಧಾಬಾ ಆರಂಭಿಸಿದ್ದೂ ಇದೆ. ಭಾವನಾ 2019ರ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿದ್ದರು.

* ಇನ್ನು ಮುಂದೆ ಕೂಡ ಭಿಕ್ಷಾಟನೆಗೆ ‘ಸಲಾಂ’ ಹೊಡೆದು ಹೈನುಗಾರಿಕೆಯಲ್ಲೇ ತೊಡಗಿಕೊಳ್ಳಬೇಕು ಅಂದುಕೊಂಡಿದ್ದೇನೆ

–ಸೃಷ್ಟಿ, ಆಳಂದ ಪಟ್ಟಣ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT