ಮತದಾರರ ಸಮೀಕ್ಷೆ ನಡೆಸುತ್ತಿದ್ದಏಳು ಜನರು ಪೊಲೀಸರ ವಶಕ್ಕೆ

ಹೊಸಪೇಟೆ (ವಿಜಯನಗರ): ಅನುಮತಿ ಪಡೆಯದೇ ತಾಲ್ಲೂಕಿನ ಕೊಂಡನಾಯಕನಹಳ್ಳಿಯಲ್ಲಿ ಮತದಾರರ ಸಮೀಕ್ಷೆ ನಡೆಸುತ್ತಿದ್ದ ಏಳು ಜನರನ್ನು ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
ನವದೆಹಲಿಯ ‘ಧ್ರುವ’ ಸರ್ವೇ ಸಂಸ್ಥೆಗೆ ಇವರೆಲ್ಲ ಸೇರಿದ್ದಾರೆ ಎಂದು ಗೊತ್ತಾಗಿದೆ. ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಏಳು ಜನರು ಸರ್ವೇ ಕಾರ್ಯದಲ್ಲಿ ತೊಡಗಿದ್ದರು. ಈ ಸಂಸ್ಥೆಯವರು ಈಗಾಗಲೇ ರಾಜ್ಯದ 12 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
‘ನಾವು ಗುಪ್ತಚರ ಸಂಸ್ಥೆಯಿಂದ ಬಂದಿದ್ದೇವೆ. ವಿಧಾನಸಭೆ ಚುನಾವಣೆ ಕುರಿತು ಪ್ರತಿಯೊಬ್ಬರಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ. ಬರುವ ಚುನಾವಣೆಯಲ್ಲಿ ನೀವು ಯಾವ ಪಕ್ಷಕ್ಕೆ ಮತ ಚಲಾಯಿಸುತ್ತೀರಿ? ಯಾವ ಪಕ್ಷ ಗೆದ್ದರೆ ಉತ್ತಮ? ಹೀಗೆ ಹಲವು ರೀತಿಯ ಪ್ರಶ್ನೆಗಳನ್ನು ಕೇಳಿ ಮಾಹಿತಿ ದಾಖಲಿಸುತ್ತಿದ್ದರು. ಅನುಮಾನ ಬಂದು ಅವರಿಗೆ ಘೇರಾವ್ ಹಾಕಿದೆವು. ಅನಂತರ ಠಾಣೆಗೆ ಕರೆ ಮಾಡಿ ತಿಳಿಸಿದಾಗ ಪೊಲೀಸರು ಬಂದು ಅವರನ್ನು ಜೀಪಿನಲ್ಲಿ ಕರೆದೊಯ್ದಿದ್ದಾರೆ’ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಮತದಾರರ ಸರ್ವೇ ನಡೆಸಲು ಯಾರು ಅನುಮತಿ ಕೊಟ್ಟಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಗ್ರಾಮಸ್ಥರು ವಿಷಯ ತಿಳಿಸಿದ್ದರಿಂದ ತಕ್ಷಣವೇ ಅಲ್ಲಿಗೆ ತೆರಳಿ ಅವರನ್ನು ವಶಕ್ಕೆ ಪಡೆಯಲಾಗಿದೆ. ನವದೆಹಲಿಯ ‘ಧ್ರುವ’ ಸರ್ವೇ ಸಂಸ್ಥೆಯವರು ಎಂಬುದು ಪ್ರಾಥಮಿಕ ವಿಚಾರಣೆಯಿಂದ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ ಸಂಘ ಸಂಸ್ಥೆಗಳಿಂದ ಸಮೀಕ್ಷೆ ನಡೆಸಲು ಅವಕಾಶ ಇಲ್ಲ. ಸರ್ವೇ ನಡೆಸುತ್ತಿದ್ದವರ ಬಳಿ ಖಾಸಗಿ ಕಂಪನಿ ಐ.ಡಿ. ಕಾರ್ಡ್‌ಗಳಿವೆ. ಆದರೆ, ಅನುಮತಿ ಪಡೆದಿಲ್ಲ. ಇವರಿಗೆ ಯಾರು ಅನುಮತಿ ಕೊಟ್ಟಿದ್ದಾರೆ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ರಾಜ್ಯ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.