ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮಳೆ ಆರ್ಭಟ: 9 ಮಂದಿ ಸಾವು

ಭಟ್ಕಳದಲ್ಲಿ 55 ಸೆಂ.ಮೀ ದಾಖಲೆ ಮಳೆ: ಮನೆ, ರಸ್ತೆಗಳು ಜಲಾವೃತ
Last Updated 2 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಧಾರಾಕಾರ ಮಳೆಯಾಗಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಇಬ್ಬರು ಮಹಿಳೆಯರು ಸೇರಿ 9 ಮಂದಿ ಮೃತಪಟ್ಟಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ದಾಖಲೆಯ 55 ಸೆಂ.ಮೀ. ಮಳೆಯಾಗಿ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಉತ್ತರ ಕನ್ನಡದಲ್ಲಿ ಗುಡ್ಡ ಕುಸಿದು ನಾಲ್ವರು, ಹುಣಸೂರು ತಾಲ್ಲೂಕಿನಲ್ಲಿ ಗೋಡೆ ಕುಸಿದು ಮಹಿಳೆ ಮೃತಪಟ್ಟಿದ್ದರೆ, ವಿಜಯನಗರ ಜಿಲ್ಲೆಯಲ್ಲಿ ರೈತ ಸೇರಿ ಇಬ್ಬರು ಹಾಗೂ ತುಮಕೂರಿನಲ್ಲಿ ಶಿಕ್ಷಕ, ಕಾರ್ಮಿಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಕೊಡಗಿನಲ್ಲಿ ಪಯಸ್ವಿನಿ, ಮಂಡ್ಯದ ಶಿಂಷಾ ನದಿಉಕ್ಕಿ ಹರಿದಿವೆ. ವಿವಿಧ ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳಮನೆಗಳು ಜಲಾವೃತಗೊಂಡಿದ್ದು, ಜಮೀನುಗಳಿಗೆ ನೀರು ನುಗ್ಗಿದೆ. ಹಲವರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಕೆಲವೆಡೆ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ.

ಮಂಡ್ಯ ತಾಲ್ಲೂಕಿನ ಹೊಸ ಬೂದನೂರು ಕೆರೆ ಮಧ್ಯರಾತ್ರಿ ಒಡೆದು ಅಪಾರ ನೀರು ಹರಿದು, ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಬಂದ್‌ ಆಗಿದೆ.ಕೆರೆಯ ಹಿಂಭಾಗದಲ್ಲಿದ್ದ ಮೀನುಗಾರಿಕೆ ಇಲಾಖೆಯ ಮೀನು ಸಾಕಣೆ ಘಟಕವೂ ಮುಳುಗಿದ್ದು, ಲಕ್ಷಾಂತರ ಮೀನು ಮರಿಗಳು ಕೊಚ್ಚಿ ಹೋಗಿವೆ.

ಬಳ್ಳಾರಿ ತಾಲ್ಲೂಕಿನಯಾಳ್ಪಿ ಕಗ್ಗಲ್ ಬಳಿ ಹಗರಿ ನದಿಯಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 24 ಜನರನ್ನು ಜಿಲ್ಲಾಡಳಿತ ಮತ್ತು ಅಗ್ನಿಶಾಮಕ ದಳದ ತಂಡಗಳು ವಿಶೇಷ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿವೆ.

ದಾಖಲೆಯ ಮಳೆ: ಭಟ್ಕಳದಲ್ಲಿ ದಾಖಲೆಯ ಮಳೆಯಾಗಿದೆ. ರಾತ್ರಿ ಕಳೆದು ಬೆಳಗಾಗುವವಷ್ಟರಲ್ಲಿ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ಬೇಂಗ್ರೆಯಿಂದ ಬೆಳಕೆವರೆಗೆ ಸುಮಾರು 15 ಕಿ.ಮೀ ವ್ಯಾಪ್ತಿಯ ಭೂಪ್ರದೇಶ ನದಿಯಂತಾಯಿತು.

ಭಟ್ಕಳ ತಾಲ್ಲೂಕಿನ ಮುಟ್ಟಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ಮನೆಯ ಮೇಲೆ ಗುಡ್ಡ ಕುಸಿದು, ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟರು. ಮೃತರನ್ನು ಲಕ್ಷ್ಮಿ ನಾರಾಯಣ ನಾಯ್ಕ (60), ಅವರ ಪುತ್ರಿ ಲಕ್ಷ್ಮಿ ನಾಯ್ಕ (45), ಪುತ್ರ ಅನಂತ ನಾರಾಯಣ ನಾಯ್ಕ (35) ಹಾಗೂ ತಂಗಿ ಮಗ ಪ್ರವೀಣ ಬಾಲಕೃಷ್ಣ ನಾಯ್ಕ (20) ಎಂದು ಗುರುತಿಸಲಾಗಿದೆ.

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚನ್ನನಕುಂಟೆ ಬಳಿ ಹಳ್ಳ ದಾಟುತ್ತಿದ್ದ ಶಿಕ್ಷಕ ಅರೀಫ್ ಉಲ್ಲಾಖಾನ್ (55)‌ ಹಾಗೂ ಕುಣಿಗಲ್ ತಾಲ್ಲೂಕಿನ ಗೋವಿಂದಯ್ಯನಪಾಳ್ಯ ಬಳಿ ಕೂಲಿ ಕಾರ್ಮಿಕ ನಾಗರಾಜು (28) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಹುಣಸೂರು ತಾಲ್ಲೂಕಿನ ಕೆಂಚನಕೆರೆ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಶಾಂತಮ್ಮ (68) ಮೃತಪಟ್ಟರು.

ಹೊಸಪೇಟೆ ತಾಲ್ಲೂಕಿನ ಜಿ.ನಾಗಲಾಪುರದಲ್ಲಿ ಹಳ್ಳ ದಾಟಿಕೊಂಡು ಹೋಗುವಾಗ ರೈತ ಉಂಚಟ್ಟಿ ಬೊಮ್ಮಪ್ಪ (62) ಕೊಚ್ಚಿಕೊಂಡು ಹೋಗಿದ್ದಾರೆ. ಸಂಡೂರು ತಾಲ್ಲೂಕಿನ ಬೊಮ್ಮಾಘಟ್ಟದ ನಿವಾಸಿ ಕೃಷ್ಣಕುಮಾರ್‌ (51) ಅವರು ಬೈಕ್‌ನಲ್ಲಿ ಅಂಕಮನಾಳ ಗ್ರಾಮದ ಸಮೀಪದ ಹಳ್ಳ ದಾಟಿಕೊಂಡು ಹೋಗುವಾಗ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT