ಗುರುವಾರ , ಡಿಸೆಂಬರ್ 8, 2022
18 °C

ಚಂಪಾಷಷ್ಠಿ: ಹಿಂದೂಯೇತರ ವರ್ತಕರಿಗೆ ನಿಷೇಧ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ/ಮಂಗಳೂರು: ಈ ಬಾರಿಯ ಚಂಪಾ ಷಷ್ಠಿ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಹಿಂದೂಯೇತರ ವರ್ತಕರು ವ್ಯಾಪಾರ ನಡೆಸುವುದಕ್ಕೆ ನಿಷೇಧ ಹೇರುವ ಸಾಧ್ಯತೆ ಇದೆ. ದೇವಸ್ಥಾನದ ಬಳಿ ಕಾಣಿಸಿಕೊಂಡಿರುವ ಬ್ಯಾನರ್ ತೆರವುಗೊಳಿಸದೇ ಇರುವುದರಿಂದ ಹಿಂದೂಯೇತರರಿಗೆ ವ್ಯಾಪಾರ ನಡೆಸಲು ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ದೇವಸ್ಥಾನ ಸಮೀಪದ ಕುಮಾರಧಾರಾ ನದಿ ಬಳಿಯಲ್ಲಿ ಹಿಂದೂ ಜಾಗರಣ ವೇದಿಕೆ ಸುಬ್ರಹ್ಮಣ್ಯ ಘಟಕದ ಹೆಸರಿನಲ್ಲಿ ಬುಧವಾರ ಬ್ಯಾನರ್ ಅಳವಡಿಸಲಾಗಿತ್ತು. ಜಾತ್ರೆ ಸಂದರ್ಭದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಸುಬ್ರಹ್ಮಣ್ಯ ಠಾಣೆಗೆ ಹಿಂದೂ ಜಾಗರಣ ವೇದಿಕೆಯವರು ದೂರು ಕೂಡ ನೀಡಿದ್ದಾರೆ.

ಮುಜರಾಯಿ ಇಲಾಖೆಗೆ ಸೇರಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಜಾತ್ರೆಗಳಲ್ಲಿ ಈ ವರೆಗೆ ಹಿಂದೂಯೇತರರು ವ್ಯಾಪಾರ ನಡೆಸುತ್ತಿದ್ದರು. ಇಲ್ಲಿ ಇದೇ 29ರಂದು ಚಂಪಾ ಷಷ್ಠಿ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ. ಹಿಂದೂ ಜಾಗರಣ ವೇದಿಕೆ ಅಳವಡಿಸಿರುವ ಬ್ಯಾನರ್ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಗ್ರಾಮ ಸಮಿತಿ ಗ್ರಾಮ ಪಂಚಾಯಿತಿಗೆ ಗುರುವಾರ ಪತ್ರ ಸಲ್ಲಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿರುವ ಬ್ಯಾನರ್‌ ಕೋಮು ದ್ವೇಷ ಭಾವನೆಗೆ ಕಾರಣವಾಗಲಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ಬ್ಯಾನರ್‌ ಅಳವಡಿಕೆಗೆ ಸಂಬಂಧಿಸಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದೇವಸ್ಥಾನದ ವ್ಯವಸ್ಥಾಪಕ ನಿಂಗಯ್ಯ ‘ಹಿಂದೂ ದೇವಸ್ಥಾನಗಳ ಆವರಣದಲ್ಲಿ ಅನ್ಯ ಧರ್ಮೀಯರು ವ್ಯಾಪಾರ ಮಾಡುವಂತಿಲ್ಲ ಎಂದು ಮುಜರಾಯಿ ಇಲಾಖೆಯ ನಿಯಮಾವಳಿಯಲ್ಲೇ ಈ ಬಗ್ಗೆ ಸ್ಪಷ್ಟ ಉಲ್ಲೇಖ ಇದೆ. ಹೀಗಿರುವಾಗ ಬ್ಯಾನರ್ ಅಳವಡಿಕೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಹೇಳಿದರು.

‘ದೇವಸ್ಥಾನಕ್ಕೆ ಸಂಬಂಧಿಸಿದ ವಿಷಯದಲ್ಲಿ ಮಧ್ಯಪ್ರವೇಶಿಸಲು ಅವಕಾಶವಿಲ್ಲ. ಆದ್ದರಿಂದ ಬ್ಯಾನರ್ ಬಗ್ಗೆ ನಾವೇನೂ ಮಾಡುವಂತಿಲ್ಲ’ ಎಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.