ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿನ ಹಸ್ತ ಚಾಚುವ ‘ಶೌರ್ಯ’

ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಒಂದು ವರ್ಷ
Last Updated 24 ಜೂನ್ 2021, 16:37 IST
ಅಕ್ಷರ ಗಾತ್ರ

ನಾಪೋಕ್ಲು: ಪ್ರಕೃತಿ ವಿಕೋಪ, ಕೋವಿಡ್‌ ಸಂಕಷ್ಟ ಕಾಲದಲ್ಲಿ ನೆರವಿನ ಹಸ್ತ ಚಾಚಿದಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ‘ಶೌರ್ಯ’ ವಿಪತ್ತು ನಿರ್ವಹಣಾ ತಾಲ್ಲೂಕು ಘಟಕ ಇದೀಗ ವರ್ಷ ಪೂರೈಸಿದೆ.

ಪ್ರವಾಹ, ಭೂಕುಸಿತ, ಭೂಕಂಪ ಸೇರಿದಂತೆ ವಿವಿಧ ವಿಪತ್ತು ಸಂಭವಿಸಿದಾಗ ಸ್ಪಂದಿಸುವುದು ಹಾಗೂ ರಸ್ತೆ ಅಪಘಾತ, ಅಗ್ನಿ ದುರಂತ, ಕಟ್ಟಡ ಕುಸಿತದಂತಹ ಸಂದರ್ಭಗಳಲ್ಲಿ ವಿಪತ್ತಿಗೊಳಗಾದವರನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡುವುದು, ಸ್ಥಳಾಂತರಕ್ಕೆ ಸಹಕರಿಸುವುದು... ಹೀಗೆ ಮುಂತಾದ ಆಪತ್ತಿನ ಸಂದರ್ಭದಲ್ಲಿ ಈ ತಂಡ ಕ್ಷಿಪ್ರ ಗತಿಯಲ್ಲಿ ಸಹಾಯಕ್ಕೆ ಧಾವಿಸುತ್ತದೆ.

2018ರಲ್ಲಿ ಸುರಿದ ಮಹಾಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಗುಡ್ಡಕುಸಿತ, ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಜಲಪ್ರಳಯ, ಕರಾವಳಿ ತೀರಗಳಲ್ಲಿ ನದಿಗಳು ಸೃಷ್ಟಿಸಿದ ಅವಾಂತರ... ಹೀಗೆ ಸಾಲು ಸಾಲು ದುರಂತಗಳನ್ನು ಗಮನಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ವಿಪತ್ತಿನ ಸಮಯದಲ್ಲಿ ಪ್ರಾಥಮಿಕ ಸ್ಪಂದನೆ ನೀಡಲು ಶೌರ್ಯ ವಿಪತ್ತು ಸೇವಾ ಘಟಕ ಆರಂಭಿಸಿದರು.

ದಕ್ಷಿಣ ಕನ್ನಡ, ಕೊಡಗು ಚಿಕ್ಕಮಗಳೂರು, ಹಾಸನ, ಉತ್ತರಕನ್ನಡ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದ್ದು, ಪ್ರತಿ ತಾಲ್ಲೂಕಿನಲ್ಲಿ ನೂರು ಸ್ವಯಂ ಸೇವಕರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಘಟಕದಲ್ಲಿ ವಿಪತ್ತು ನಿರ್ವಹಣೆಯ ತರಬೇತಿ ಪಡೆದ ಸ್ವಯಂ ಸೇವಕರಿದ್ದು, ವಿಪತ್ತಿನ ಸಮಯಲ್ಲಿ ಮಾತ್ರವಲ್ಲ ಸಾಮಾನ್ಯ ದಿನಗಳಲ್ಲಿಯೂ ಸಕ್ರಿಯರಾಗಿರುತ್ತಾರೆ. ಒಂದು ವರ್ಷದಲ್ಲಿ 6,256 ಸೇವಾ ಕಾರ್ಯಗಳನ್ನು ಇವರು ಮಾಡಿದ್ದಾರೆ.

‘ಈಚೆಗೆ ಅಶಕ್ತರಿಗೆ ಸಹಾಯ, ಬಡಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ, ಪರಿಸರ ಸಂಬಂಧಿ ಕಾರ್ಯಕ್ರಮಗಳು ಸೇರಿದಂತೆ ಸಾಮಾಜಿಕ ಸೇವೆ ಮಾಡಿದ್ದಾರೆ. ಸರ್ಕಾರ ಆರಂಭಿಸಿದ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸ್ವಯಂ ಸೇವಕರು ಎರಡು ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದಾರೆ’ ಎಂದುಕಾರ್ಯಕ್ರಮ ಸಂಯೋಜಕಿ ಬಾಳೆಯಡ ದಿವ್ಯಾ ಮಂದಪ್ಪ ತಿಳಿಸಿದರು.

‘ಪ್ರಕೃತಿ ವಿಕೋಪ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಲು ತರಬೇತಿ ಹೊಂದಿದ ಶೌರ್ಯ ಯುವಕರ ಪಡೆ ನೆರವಾಗಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT