ಬುಧವಾರ, ಸೆಪ್ಟೆಂಬರ್ 29, 2021
20 °C

ಮಾದರಿ ಕ್ಷೇತ್ರವಾಗಿ ಶಿಗ್ಗಾವಿ ಅಭಿವೃದ್ಧಿ: ನಾನು ನಿಮ್ಮ ಬಸಣ್ಣನೇ; ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಾನು ಎಷ್ಟೇ ಮೇಲೆ ಹೋದರೂ ನಾನು ನಿಮ್ಮ ಬಸಣ್ಣನೇ’ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದಂತೆ ಶಿಗ್ಗಾವಿ– ಸವಣೂರು ವಿಧಾನಸಭಾ ಕ್ಷೇತ್ರದಿಂದ ಬಂದಿದ್ದ ಅವರ ಅಭಿಮಾನಿಗಳು ಪುಳಕಿತರಾದರು.

ಮುಖ್ಯಮಂತ್ರಿಯಾಗಿ ಬೊಮ್ಮಾಯಿ ನೇಮಕಗೊಳ್ಳುತ್ತಿದ್ದಂತೆ ಅವರ ಸ್ವಕ್ಷೇತ್ರ ಶಿಗ್ಗಾವಿ ಮತ್ತು ಹಾವೇರಿ ಜಿಲ್ಲೆಯಿಂದ ಬಂದಿದ್ದ ಅಭಿಮಾನಿಗಳು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬುಧವಾರ ಮಧ್ಯಾಹ್ನ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿದ್ದರು. ಬೊಮ್ಮಾಯಿ ವೇದಿಕೆಗೆ ಬರುತ್ತಿದ್ದಂತೆ ‘ಹಾವೇರಿ ಹುಲಿ’ಗೆ ಜಯವಾಗಲಿ ಎಂದು ಹರ್ಷೋದ್ಗಾರ ಮಾಡಿದರು.

ಈ ವೇಳೆ ಮಾತನಾಡಿದ ಬೊಮ್ಮಾಯಿ, ‘ಶಿಗ್ಗಾವಿ ಕ್ಷೇತ್ರದ ಪ್ರತಿ ಹಳ್ಳಿಯ ಮನೆಗಳಲ್ಲಿ ನಾನಿದ್ದೇನೆ. ಸ್ಥಾನದ ಬಲಕ್ಕಿಂತ ಸೇವೆ ಮಾಡುವುದು ಬಹಳ ಮುಖ್ಯ. ನಮ್ಮ ಜಿಲ್ಲೆ ಮತ್ತು ಕ್ಷೇತ್ರದ ಜನತೆಗೆ ವಿಶೇಷ ವ್ಯವಸ್ಥೆ ಮಾಡುತ್ತೇನೆ. ಶಿಗ್ಗಾವಿಯನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ. ರಾಜ್ಯದ ಅಭಿವೃದ್ಧಿಯ ಜತೆಗೆ ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುತ್ತೇನೆ’  ಎಂದು ಭರವಸೆ ನೀಡಿದರು.

‘ನನಗೆ ಶಕ್ತಿ ತುಂಬಿದವರು ನೀವು. ನಿಮ್ಮ ಬೆಂಬಲದಲ್ಲಿ ನನಗೆ ಎಷ್ಟು ಶಕ್ತಿ ಇದೆ ಎನ್ನುವುದೂ ನನಗೆ ಗೊತ್ತಿದೆ. ನನಗೆ ಹೆಗಲಿಗೆ ಹೆಗಲು ಕೊಟ್ಟಿದ್ದೀರಿ. ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ಸಾಧನೆ ಮಾಡಿದ್ದೀರಿ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದೇನೆ. ನಿಮ್ಮನ್ನು ಪಡೆದುಕೊಂಡಿರುವುದು ನನ್ನ ಪೂರ್ವಜನ್ಮದ ಪುಣ್ಯ. ನಿಮ್ಮನ್ನೆಲ್ಲ ನೋಡಿದಾಗ ಅತ್ಮವಿಶ್ವಾಸ ಹೆಚ್ಚಾಗುತ್ತದೆ. ಆದಮ್ಯ ಶಕ್ತಿ ಬರುತ್ತದೆ. ನಿಮ್ಮೀ ಶಕ್ತಿ- ಬೆಂಬಲದಿಂದ ಮುಂದೆ ಇಟ್ಟ ಹೆಜ್ಜೆಯನ್ನು ಯಾವತ್ತೂ ಹಿಂದೆ ಇಟ್ಟಿಲ್ಲ’ ಎಂದರು.

‘ನನಗೆ ಹಿರಿಯರಾದ ಉದಾಸಿಯವರು ನೆನಪಿಗೆ ಬರುತ್ತಿದ್ದಾರೆ. ಜಿಲ್ಲೆಯ ಅವರ ಸೇವೆ ಅಪಾರವಾಗಿದೆ. ಇವತ್ತು ಅವರು ನಮ್ಮ ನಡುವೆ ಇಲ್ಲ. ಎಲ್ಲೇ ಇದ್ದರೂ ಅವರ ಆಶೀರ್ವಾದ ನಮ್ಮ ಮೇಲೆ ಇರುತ್ತದೆ’ ಎಂದು ಬೊಮ್ಮಾಯಿ ಭಾವುಕರಾದರು.

‘ಎಲ್ಲ ವರ್ಗದ ಜನತೆಗೆ ನ್ಯಾಯ ಒದಗಿಸಲು ಬದ್ದನಾಗುತ್ತೇನೆ. ಸ್ವಲ್ಪ ತಾಳ್ಮೆಯೂ ಬೇಕು, ಸಹಕಾರವೂ ಬೇಕು. ನಿಮಗೋಸ್ಕರ ವಿಶೇಷ ಸಮಾರಂಭವನ್ನು ಏರ್ಪಡಿಸುತ್ತೇನೆ. ನಾನು ಎಷ್ಟೇ ಮೇಲೆ ಹೋದರೂ ನಾನು ನಿಮ್ಮ ಬಸಣ್ಣನೇ. ನೀವೂ ಕುಳಿತಿರಿ. ನಾನೇ ಅಲ್ಲಿ ಬರುತ್ತೇನೆ’ ಎಂದು ಹೇಳಿದ ಅವರು, ಜನರು ಕುಳಿತಲ್ಲಿಗೇ ಹೋಗಿ ಅಭಿನಂದನೆ ಸ್ವೀಕರಿಸಿದರು.

ಶಕ್ತಿಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಅಡಿ ಇಟ್ಟ ಸಿ.ಎಂ

ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅಧಿಕಾರದ ‘ಶಕ್ತಿ ಕೇಂದ್ರ’ ವಿಧಾನಸೌಧಕ್ಕೆ ಬಂದಾಗ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳಗೆ ಕಾಲಿಟ್ಟರು.

ಪ್ರಧಾನಿ ಮೋದಿ 2014 ರಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಮೊದಲ ಬಾರಿ ಸಂಸತ್‌ ಪ್ರವೇಶಿಸುವಾಗ ಸಂಸತ್ತಿನ ಮೆಟ್ಟಿಲುಗಳಿಗೆ ಹಣೆ ಮುಟ್ಟಿಸಿ ನಮಸ್ಕರಿಸಿದ್ದರು. ಬೊಮ್ಮಾಯಿ ಕೂಡ ಅದೇ ಮಾದರಿ ಅನುಸರಿಸಿದರು.

ಬೊಮ್ಮಾಯಿ ಮೆಟ್ಟಿಲುಗಳಿಗೆ ಕೈಮುಟ್ಟಿ ನಮಸ್ಕರಿಸುವಾಗ ಪತ್ರಿಕಾ ಛಾಯಾಗ್ರಾಹಕರಿಗೆ ಚಿತ್ರ ಸೆರೆ ಹಿಡಿಯಲು ಆಗದ ಕಾರಣ ಮತ್ತೊಮ್ಮೆ ನಮಸ್ಕರಿಸುವಂತೆ ಎಂಬ ಕೋರಿಕೆಗೆ ಒಪ್ಪಿದ ಬೊಮ್ಮಾಯಿ ಕ್ಯಾಮೆರಾಗಳಿಗಾಗಿ ಮತ್ತೊಮ್ಮೆ ನಮಸ್ಕರಿಸಿದರು.

ಮುಖ್ಯಮಂತ್ರಿ ಕಚೇರಿಯಲ್ಲಿ ದೇವರ ಫೋಟೊಗಳಿಗೆ ಸರಳವಾಗಿ ಪೂಜೆ ಮಾಡಿ, ಬಳಿಕ ಮುಖ್ಯಮಂತ್ರಿ ಆಸನದಲ್ಲಿ ಕುಳಿತುಕೊಂಡರು. ಮುಖ್ಯಮಂತ್ರಿ ಕೊಠಡಿ ಸೇರಿ ಎಲ್ಲೂ ಅದ್ಧೂರಿಯ ಅಲಂಕಾರ ಮಾಡಿರಲಿಲ್ಲ. ಸಾಮಾನ್ಯವಾಗಿ ಸಚಿವರು ಕೊಠಡಿ ಪೂಜೆ ಮಾಡುವಾಗ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು ವಾಡಿಕೆ. ಆದರೆ, ಬೊಮ್ಮಾಯಿ ಅನಗತ್ಯ ವೆಚ್ಚಗಳಿಗೆ ಮೊದಲ ದಿನವೇ ಕಡಿವಾಣ ಹಾಕಿದರು.

ಬೆಳಿಗ್ಗೆ ತಮ್ಮ ಮನೆಯಿಂದ ಹೊರಟು ಆಂಜನೇಯ ದೇವಸ್ಥಾನದಲ್ಲಿ ಪೂಜೆ ಮಾಡಿಸಿದರು. ಬಳಿಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮನೆಗೆ ಹೋಗಿ ಆಶೀರ್ವಾದ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು