ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ: ಅಮ್ಮಾಜಮ್ಮ ಜೆಡಿಎಸ್‌ ಅಭ್ಯರ್ಥಿ

Last Updated 6 ಅಕ್ಟೋಬರ್ 2020, 19:49 IST
ಅಕ್ಷರ ಗಾತ್ರ

ಬೆಂಗಳೂರು: ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಶಿರಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲು ಜೆಡಿಎಸ್‌ ತೀರ್ಮಾನಿಸಿದೆ.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಅಭ್ಯರ್ಥಿ ಆಯ್ಕೆ ಸಭೆ ಮಂಗಳವಾರ ನಡೆಯಿತು. ಆ ಬಳಿಕ ದೇವೇಗೌಡರು ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಯ ಹೆಸರು ಪ್ರಕಟಿಸಿದರು.

‘ನಮ್ಮ ಪಕ್ಷದಿಂದ ಶಿರಾ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರೇ ನಮ್ಮ ಪಕ್ಷದ ಅಭ್ಯರ್ಥಿ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಆರ್‌.ಆರ್‌.ನಗರ ಕ್ಷೇತ್ರದ ಉಪಚುನಾವಣೆಗೆ ಮೂವರ ಹೆಸರು ಪರಿಶೀಲನೆಯಲ್ಲಿದೆ. ಅಕ್ಟೋಬರ್‌ 8 ರಂದು ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಚುನಾವಣೆಯಲ್ಲಿ ಸೋಲು ಅಥವಾ ಗೆಲುವು ಇದ್ದದ್ದೇ. ಅಭ್ಯರ್ಥಿಯನ್ನಂತೂ ಕಣಕ್ಕೆ ಇಳಿಸುತ್ತೇವೆ’ ಎಂದರು.

‘ಅಮ್ಮಾಜಮ್ಮ ಅವರ ಸ್ಪರ್ಧೆಗೆ ಅವರ ಮಗ ಮತ್ತು ಕಾರ್ಯಕರ್ತರು ಒಪ್ಪಿಗೆ ಸೂಚಿಸಿದ್ದಾರೆ. ಸತ್ಯನಾರಾಯಣ ಅವರ ಮಗ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅಮ್ಮಾಜಮ್ಮ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಆಸಕ್ತಿ ಇಲ್ಲ ಎಂಬ ಮಾಹಿತಿ ಸರಿಯಲ್ಲ’ ಎಂದು ದೇವೇಗೌಡರು ಹೇಳಿದರು.

‘ಶಿರಾದಲ್ಲಿ ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಸೆಳೆಯುವ ಕೆಲಸ ಕಾಂಗ್ರೆಸ್‌ ಮತ್ತು ಬಿಜೆಪಿಯರು ಮಾಡಿದ್ದಾರೆ. ಜೆಡಿಎಸ್ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸುತ್ತದೆ. ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದರು.

ಕುಸುಮಾಗೆ ‘ಕೈ’ ಟಿಕೆಟ್‌

ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಅವರು ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ ಎಂದು ವಿರೋಧ ಪಕ್ಷದ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ತಿಳಿಸಿದ್ದಾರೆ.‘ಈ ಕ್ಷೇತ್ರಕ್ಕೆ ಪಕ್ಷ ಕುಸುಮಾ ಅವರೊಬ್ಬರ ಹೆಸರನ್ನು ಮಾತ್ರ ಶಿಫಾರಸು ಮಾಡಿ ಹೈಕಮಾಂಡ್‌ಗೆ ಕಳುಹಿಸಿದೆ. ಅವರ ಹೆಸರನ್ನೇ ಅಂತಿಮಗೊಳಿಸುವ ವಿಶ್ವಾಸವಿದೆ. ಈ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗುತ್ತೇನೆ’ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ಕುಸುಮಾ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರಿದ್ದಾರೆ. ಶಿರಾದಲ್ಲಿ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್‌ ಖಚಿತವಾಗಿದ್ದು, ಈಗಾಗಲೇ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT