ಶನಿವಾರ, ಜುಲೈ 31, 2021
28 °C

ಶೀರೂರು ಮಠ: ಅರ್ಜಿ ಮಾರ್ಪಡಿಸಲು ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉಡುಪಿಯ ಶೀರೂರು ಮಠದ ನೂತನ ಪೀಠಾಧಿಪತಿಯನ್ನಾಗಿ ಅಪ್ರಾಪ್ತರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಮಾರ್ಪಡಿಸಿ ಸಲ್ಲಿಸಲು ಅರ್ಜಿದಾರರಿಗೆ ಹೈಕೋರ್ಟ್ ಅನುಮತಿ ನೀಡಿದೆ.

ಮಠದ ಭಕ್ತರಾಗಿರುವ ಸಮಿತಿ ಕಾರ್ಯದರ್ಶಿ ಪಿ. ಲಾತವ್ಯ ಆಚಾರ್ಯ ಸೇರಿ ನಾಲ್ವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಇದು ಸಂಪೂರ್ಣ ಖಾಸಗಿ ವ್ಯಾಜ್ಯ ಆಗಿರುವ ಕಾರಣ ಸಾರ್ವಜನಿಕ ಹಿತಾಸಕ್ತಿ ವ್ಯಾಪ್ತಿಯಲ್ಲಿ ವಿಚಾರಣೆಗೆ ಪರಿಗಣಿಸಲು ಆಗುವುದಿಲ್ಲ’ ಎಂದು ಹೇಳಿತು.‌

‘16 ವರ್ಷದ ಬಾಲಕನನ್ನು ಪೀಠಾಧಿಪತಿಯಾಗಿ ನೇಮಕ ಮಾಡಲಾಗಿದೆ. ಬಾಲಕನನ್ನು ಬಲವಂತವಾಗಿ ಸನ್ಯಾಸಿ ಮಾಡಲಾಗಿದೆ. 18 ವರ್ಷ ತುಂಬದೇ ಇರುವವರು ನೀಡುವ ಸಮ್ಮತಿಗೂ ಮಾನ್ಯತೆ ಇಲ್ಲ. ಪ್ರಕರಣದಲ್ಲಿ ಅಪ್ರಾಪ್ತರ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ವಿವರಿಸಿದರು. ‘ಅರ್ಜಿಯಲ್ಲಿರುವ ಮನವಿಗಳನ್ನು  ತಿದ್ದುಪಡಿ ಮಾಡಲಾಗುವುದು. ಅದಕ್ಕೆ ಅವಕಾಶ ನೀಡಬೇಕು’ ಎಂದು ಅರ್ಜಿದಾರರ ಪರ ವಕೀಲ ಡಿ.ಆರ್‌. ರವಿಶಂಕರ್ ಕೋರಿದರು.

‘ಅರ್ಜಿಯಲ್ಲಿ ಅಪ್ರಾಪ್ತರ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಸರ್ಕಾರ ಈ ವಿಚಾರದಲ್ಲಿ ಮೂಕ ಪ್ರೇಕ್ಷಕನಾಗಬಾರದು. ತಿದ್ದುಪಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಿ’ ಎಂದು ತಿಳಿಸಿದ ಪೀಠ, ಜೂ.2ಕ್ಕೆ ವಿಚಾರಣೆ ಮುಂದೂಡಿತು.

‘ಶೀರೂರು ಮಠದ ಆಡಳಿತಾತ್ಮಕ, ಆರ್ಥಿಕ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಸಾಧಿಸಲು ಸೋದೆ ಮಠಕ್ಕೆ ಅಧಿಕಾರ ಇಲ್ಲ. ಹೀಗಿದ್ದರೂ, ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಧ್ಯ ಪ್ರವೇಶ ಮಾಡಿರುವುದು ಕಾನೂನು ಬಾಹಿರ’ ಎಂದು ಅರ್ಜಿದಾರರು ದೂರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು