ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿಗೆ ಆಮ್ಲಜನಕ ನೀಡದ ಕೇಂದ್ರ

ಬೇಡಿಕೆಗೆ ತಕ್ಕಂತೆ ಹಂಚಿಕೆ ಮಾಡಲು ನಿರಾಸಕ್ತಿ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ
Last Updated 3 ಮೇ 2021, 20:30 IST
ಅಕ್ಷರ ಗಾತ್ರ

ಬೆಂಗಳೂರು: ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳ ಜೀವ ಉಳಿಸಲು ಬೇಕಾದ ಆಮ್ಲಜನಕದ ಕೊರತೆಯಿಂದಾಗಿ ರಾಜ್ಯದಲ್ಲಿ ಸಾವಿನ ಸಂಖ್ಯೆ ನಿತ್ಯ ಏರುತ್ತಿದೆ. ಕರ್ನಾಟಕದ ಬೇಡಿಕೆಗೆ ತಕ್ಕಂತೆ ಆಮ್ಲಜನಕ ಉತ್ಪಾದನೆಯಾಗುತ್ತಿದ್ದರೂ ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳುತ್ತಿರುವುದರಿಂದ ರೋಗಿಗಳು ಜೀವ ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ನಮ್ಮ ಬೇಡಿಕೆಗೆ ಅನುಗುಣವಾಗಿ ಆಮ್ಲಜನಕ ಪೂರೈಸದಿದ್ದರೆ ಆಸ್ಪತ್ರೆಗಳನ್ನು ಮುಚ್ಚಬೇಕಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಎದುರೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗೋಗರೆದು ಬೇಡಿ ಕೊಂಡಿದ್ದರು. ಕೇಂದ್ರ ಸರ್ಕಾರದಿಂದ ವಾಗ್ದಾನ ಸಿಕ್ಕಿತೇ ವಿನಃ ಆಮ್ಲಜನಕ ಸಿಗಲಿಲ್ಲ. ಇದರಿಂದಾಗಿ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದು, ಆತಂಕದ ದಿನಗಳತ್ತ
ರಾಜ್ಯ ಸಾಗುತ್ತಿದೆ ಎಂಬ ಅಭಿಪ್ರಾಯ ಅಧಿಕಾರಿಗಳ ವಲಯದಲ್ಲಿ ದಟ್ಟವಾಗುತ್ತಿದೆ.

ಕರ್ನಾಟಕದಲ್ಲಿಯೇ ನಿತ್ಯ 1,043 ಟನ್‌ ಆಮ್ಲಜನಕ ಉತ್ಪಾದನೆ ಆಗುತ್ತಿದೆ. ರಾಜ್ಯದ ಬೇಡಿಕೆಯನ್ನು ಗಮನಾರ್ಹವಾಗಿ ಪರಿಗಣಿ
ಸದ ಕೇಂದ್ರ ಸರ್ಕಾರ, ಇಲ್ಲಿ ಉತ್ಪಾದನೆಯಾದ ಆಮ್ಲಜನಕವನ್ನು ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಿಗೆ ಪೂರೈಕೆಮಾಡುತ್ತಿದೆ. ಅಲ್ಲದೆ, ಕೇಂದ್ರದ ಈ ನೀತಿಯಿಂದಾಗಿ, ತನಗೆ ಈಗಾಗಲೇ ಹಂಚಿಕೆ ಮಾಡಿರುವ ಆಮ್ಲಜನಕವನ್ನು ಹೊರರಾಜ್ಯಗಳಿಂದ (ಒಡಿಶಾ, ಆಂಧ್ರಪ್ರದೇಶ) ತರಿಸಿಕೊಳ್ಳಬೇಕಾದ ದೌರ್ಭಾಗ್ಯ ರಾಜ್ಯದ್ದಾಗಿದೆ ಎಂಬ ಅಸಹನೆಯೂ ಶುರುವಾಗಿದೆ.

ಆಮ್ಲಜನಕ ಕೊರತೆ ಎದುರಾಗಲಿದೆ ಎಂಬ ಆತಂಕವನ್ನು ವೈದ್ಯಕೀಯ ತಜ್ಞರು, ಆರೋಗ್ಯ ಕ್ಷೇತ್ರದ ಪರಿಣತರು ವ್ಯಕ್ತಪಡಿಸಿದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಆಮ್ಲಜನಕ ಸಿಗದೆ ಕೋಲಾರ, ಕಲಬುರ್ಗಿಯಲ್ಲಿ ಕೋವಿಡ್‌ ರೋಗಿಗಳು ಸಾವಿನ ಕದ ತಟ್ಟಿದ್ದರೂ ರಾಜ್ಯ ಸರ್ಕಾರ ಮೈ ಕೊಡವಿ ನಿಲ್ಲಲಿಲ್ಲ. ಬೇಡಿಕೆ – ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಆಮ್ಲಜನಕ ಕೊರತೆ ಮತ್ತಷ್ಟು ತೀವ್ರಗೊಂಡಿದೆ.

ಮೇ 5ರ ವೇಳೆಗೆ ರಾಜ್ಯಕ್ಕೆ ನಿತ್ಯ ಕನಿಷ್ಠ 1,162 ಟನ್‌ ಆಮ್ಲಜನಕ ಅಗತ್ಯವಿದೆ ಎಂದು ಸರ್ಕಾರ ಈ ಹಿಂದೆಯೇ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿತ್ತು. ಕರ್ನಾಟಕದ ಆಮ್ಲಜನಕ ಪಾಲು ನಿತ್ಯ 865 ಮೆಟ್ರಿಕ್ ಟನ್‌ಗೆ ಏರಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಸಚಿವ ಸದಾನಂದ ಗೌಡ ಮೇ 1ರಂದು ಹೇಳಿದ್ದರು. ಆದರೆ, ಆ ಪಾಲು ಕೂಡ ಸರಿಯಾಗಿ ಸಿಕ್ಕಿಲ್ಲ. ಕರ್ನಾಟಕದಲ್ಲಿಯೇ ಉತ್ಪಾದನೆ ಆಗುತ್ತಿರುವುದರಲ್ಲಿ 675 ಟನ್‌ ಪಡೆದುಕೊಳ್ಳಲು ಅವಕಾಶ ನೀಡಿದೆ. ಉಳಿದಂತೆ, ಒಡಿಶಾ ಮತ್ತು ಆಂಧ್ರಪ್ರದೇಶದಿಂದ 130 ಟನ್‌ ಹಂಚಿಕೆ ಮಾಡಿದೆ. ರಾಜ್ಯದಲ್ಲಿ ಉತ್ಪಾದನೆಯಾದ ಆಮ್ಲಜನಕದಲ್ಲಿ ತನ್ನ ಪಾಲಿಗೆ ಹಂಚಿಕೆ ಆಗಿರುವ ಪ್ರಮಾಣವನ್ನು ಸಂಪೂರ್ಣವಾಗಿ ರಾಜ್ಯದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಆದರೆ, ಅದು ಸಾಕಾಗದೇ ಇರುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂಬ ಭೀತಿ ಎದುರಾಗಿದೆ.

‘ಕೇಂದ್ರ ಹಂಚಿಕೆ ಮಾಡಿದ ಪ್ರಮಾಣದಲ್ಲಿ, ರಾಜ್ಯದಿಂದಲೇ ಸಿಕ್ಕಿದ 675 ಟನ್ ಜೊತೆಗೆ, ಬೇರೆ ಹೊಂದಾಣಿಕೆ ಮಾಡಿಕೊಂಡು16 ಟನ್‌ ಆಮ್ಲಜನಕವನ್ನು ನಾವು ಹೆಚ್ಚುವರಿಯಾಗಿ ಪಡೆದು ಈಗಾಗಲೇ 691 ಟನ್‌ ಬಳಸಿಕೊಂಡಿದ್ದೇವೆ. ಕೇಂದ್ರ ಸರ್ಕಾರ ಒಡಿಶಾದಿಂದ ಮತ್ತು ವಿಶಾಖಪಟ್ಟಣದಿಂದ ಹಂಚಿಕೆ ಮಾಡಿರುವ ಆಮ್ಲಜನಕವನ್ನು ರಾಜ್ಯಕ್ಕೆ ತರಬೇಕಿದೆ’ ಎಂದು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ‘ಪ್ರಜಾವಾಣಿ’ ತಿಳಿಸಿದರು.

‘ಸರ್ಕಾರ ಒಟ್ಟು 30 ಟನ್‌ ಸಾಗಣೆ ಸಾಮರ್ಥ್ಯ ಎರಡು ಟ್ಯಾಂಕರ್‌ಗಳನ್ನು ಸೋಮವಾರವೇ (ಮೇ 3) ಒಡಿಶಾಕ್ಕೆ ಕಳುಹಿಸಿದೆ. ಆ ಟ್ಯಾಂಕರ್‌ಗಳು ರಾಜ್ಯಕ್ಕೆ ಬರಲು 48 ಗಂಟೆ ಸಮಯ ಬೇಕಿದೆ. ಅಲ್ಲಿಂದ ರಾತ್ರಿಯೇ ಹೊರಟರೆ ಬುಧವಾರ ತಲುಪಬಹುದು’ ಎಂದರು.

‘ರಾಜ್ಯದಲ್ಲಿ ಆಮ್ಲಜನಕ ಸಾಗಣೆ ಟ್ಯಾಂಕರುಗಳಿಗೂ ಕೊರತೆ ಇದೆ. ಒಟ್ಟು 93 ಟ್ಯಾಂಕರ್‌ಗಳಷ್ಟೆ ಇದೆ. ಅವುಗಳು ಇಡೀ ದಿನ ರಾಜ್ಯದ ವಿವಿಧೆಡೆ ಓಡಾಡುತ್ತಿವೆ. ಸದ್ಯ ನಮ್ಮಲ್ಲಿ ಲಭ್ಯ ಇರುವ ಆಮ್ಲಜನಕವನ್ನು ಸಾಗಣೆಗೂ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕಿದೆ’ ಎನ್ನುತ್ತಾರೆ ರವಿಕುಮಾರ್‌.

1,162 ಟನ್‌

ಮೇ 5ರ ವೇಳೆಯ ಆಮ್ಲಜನಕ ಬೇಡಿಕೆ

1043 ಟನ್

ರಾಜ್ಯದ ಉತ್ಪಾದನಾ ಸಾಮರ್ಥ್ಯ

865 ಟನ್‌

ಕೇಂದ್ರ ಹಂಚಿಕೆ ಮಾಡಿರುವುದು

675 ಟನ್‌

ರಾಜ್ಯದ ಬಳಕೆಗೆ ಸಿಗುತ್ತಿರುವುದು.

ಆಮ್ಲಜನಕ ತಡೆರಹಿತ ಪೂರೈಕೆ: ಸೂಚನೆ

‘ಕೇಂದ್ರ ಸರ್ಕಾರ ಹಂಚಿಕೆ ಮಾಡಿರುವ ಆಮ್ಲಜನಕ ಕೋಟಾದಲ್ಲಿ ಕಡಿತ ಆಗಬಾರದು. ಸಮಸ್ಯೆಗಳಿದ್ದರೆ ನಿಯೋಜಿಸಿರುವ ಅಧಿಕಾರಿಯನ್ನು ಸಂಪರ್ಕಿಸಿ, ತಡೆರಹಿತವಾಗಿ ಪೂರೈಕೆ ಮಾಡಬೇಕು’ ಎಂದು ಆಮ್ಲಜನಕ ಉತ್ಪಾದಕರು ಮತ್ತು ಪೂರೈಕೆದಾರರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿರ್ದೇಶನ ನೀಡಿದರು. ಸೋಮವಾರ ತುರ್ತು ಸಭೆ ನಡೆಸಿದ ಅವರು, ಟ್ಯಾಂಕರ್‌ಗಳಿಗೆ ಆಮ್ಲಜನಕ ತುಂಬಿಸುವ ಅವಧಿ ಕಡಿತಗೊಳಿಸಲು, ಟ್ಯಾಂಕರ್‌ಗಳ ಸಂಚಾರಕ್ಕೆ ಗ್ರೀನ್‌ ಕಾರಿಡಾರ್‌ ಒದಗಿಸುವ ಜೊತೆಗೆ ಟೋಲ್‍ಗಳಲ್ಲಿ ವಿಳಂಬ ತಪ್ಪಿಸಲು ಅಗತ್ಯ ಕ್ರಮ ವಹಿಸಬೇಕು. ನೈಟ್ರೋಜನ್, ಆರ್ಗನ್ ಅನಿಲಗಳ ಸಾಗಣೆ ಟ್ಯಾಂಕರ್‌ಗಳನ್ನು ಆಮ್ಲಜನಕ ಆಕ್ಸಿಜನ್ ಸಾಗಣೆಗೆ ಪರಿವರ್ತಿಸಲು ಹಾಗೂ ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಲು ಎಲ್‍ಪಿಜಿ ಟ್ಯಾಂಕರ್‌ ಚಾಲಕರ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಲಭ್ಯ ಟ್ಯಾಂಕರ್‌ಗಳನ್ನು ಗರಿಷ್ಠ ಪ್ರಮಾಣದಲ್ಲಿ‌ ಬಳಸಿಕೊಳ್ಳಬೇಕು ಎಂದೂ ಸೂಚಿಸಿದರು.

ಮರುಭರ್ತಿ ಘಟಕಗಳ ಮೇಲೆ ಮೊಕದ್ದಮೆ– ಎಚ್ಚರಿಕೆ

ಎಲ್ಲ ಜಿಲ್ಲೆಗಳು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಮ್ಲಜನಕ ಮರುಭರ್ತಿ ಘಟಕಗಳು, ತಮ್ಮಲ್ಲಿಂದ ತುಂಬಿಸಿಕೊಂಡ ಮತ್ತು ಸಂಗ್ರಹದಲ್ಲಿರುವ ಆಮ್ಲಜನಕದ ವಿವರಗಳನ್ನು ನಿಗದಿತ ನಮೂನೆಯಲ್ಲಿ ಆಯಾ ಜಿಲ್ಲಾಧಿಕಾರಿಗಳು ಮತ್ತು ಬಿಬಿಎಂಪಿ ಆಯುಕ್ತರಿಗೆ ಪ್ರತಿನಿತ್ಯ ನೀಡಬೇಕು. ಯಾವ ಆಸ್ಪತ್ರೆಗೆ ಅಥವಾ ಸಂಸ್ಥೆಗೆ ಎಷ್ಟು ಪ್ರಮಾಣದ ಆಮ್ಲಜನಕ ಪೂರೈಕೆಯಾಗಿದೆ ಎಂಬ ಮಾಹಿತಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

‘ಆದೇಶ ಉಲ್ಲಂಘಿಸಿದರೆ ಮರುಭರ್ತಿ ಘಟಕಗಳ ಮಾಲೀಕರು ಅಥವಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್‌ ಎಚ್ಚರಿಕೆ ನೀಡಿದ್ದಾರೆ.

‘ಮರುಭರ್ತಿ ಘಟಕಗಳಲ್ಲಿ ಖುದ್ದು ಹಾಜರಿದ್ದು, ಆಮ್ಲಜನಕ ಪೂರೈಕೆಯ ಮೇಲುಸ್ತುವಾರಿಗೆ ತಹಶೀಲ್ದಾರ್‌ ಶ್ರೇಣಿಗೆ ಸಮಾನ ಅಧಿಕಾರಿಯೊಬ್ಬರನ್ನು ‘ಕ್ಯಾಂಪ್‌ ಅಧಿಕಾರಿ’ಯಾಗಿ ಜಿಲ್ಲಾಧಿಕಾರಿಗಳು ಮತ್ತು ಬಿಬಿಎಂಪಿ ಆಯುಕ್ತರು ನಿಯೋಜಿಸಿ, ಸಾರ್ವಜನಿಕರಿಗೆ ಮರುಭರ್ತಿ ಘಟಕಗಳಲ್ಲಿನ ಆಮ್ಲಜನಕಕ್ಕೆ ಸಂಬಂಧಿಸಿದ ಮಾಹಿತಿ ಲಭ್ಯವಾಗುವಂತೆ ಮಾಡಬೇಕು. ಜಿಲ್ಲೆಗಳಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಬಿಬಿಎಂಪಿಯಲ್ಲಿ ವಿಶೇಷ ಆಯುಕ್ತರು ಆಮ್ಲಜನಕ ಪೂರೈಕೆಯ ನೋಡಲ್‌ ಅಧಿಕಾರಿಗಳಾಗಿರುತ್ತಾರೆ. ತಕ್ಷಣದಿಂದಲೇ ಜಿಲ್ಲಾಧಿಕಾರಿಗಳು ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರುಈ ಆದೇಶವನ್ನು ಜಾರಿಗೆ ತರಬೇಕು’ ಎಂದೂ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT