ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲದಲ್ಲಿ ಪೂರೈಕೆಯಾಗದ ಆಮ್ಲಜನಕ: 24 ಸಾವು?

ಚಾಮರಾಜನಗರ: ಮೂವರು ಸಾವಿನ ಲೆಕ್ಕ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌
Last Updated 3 ಮೇ 2021, 13:05 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ಕೋವಿಡ್‌ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಮೈಸೂರಿನಿಂದ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೆ ಮಹಾ ದುರಂತವೊಂದು ಸಂಭವಿಸಿದ್ದು, 23 ಜನರು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ. ಇನ್ನೊಬ್ಬರು ಹನೂರು ಬಳಿಯ ಕಾಮಗೆರೆ ಹಾಲಿಕ್ರಾಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಆದರೆ, ಜಿಲ್ಲಾಡಳಿತ ಮತ್ತು ಸರ್ಕಾರ ಇದನ್ನು ನಿರಾಕರಿಸಿದ್ದು, ಎಲ್ಲ ಸಾವುಗಳು ಆಮ್ಲಜನಕದ ಕೊರೆತೆಯಿಂದ ಸಂಭವಿಸಿಲ್ಲ. 24 ಗಂಟೆಗಳ ಅವಧಿಯಲ್ಲಿ 24 ಸಾವುಗಳು ಸಂಭವಿಸಿವೆ ಎಂದು ಸಮಜಾಯಿಷಿ ನೀಡಿವೆ. ಆಮ್ಲಜನಕದ ಕೊರತೆಯಿಂದ ಕೇವಲ ಮೂವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ಹೇಳಿದ್ದಾರೆ.ಸರ್ಕಾರ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿರುವುದರಿಂದ ಘಟನೆ ಬಗ್ಗೆ ಹೆಚ್ಚಿನ ವ್ಯಾಖ್ಯಾನ ಮಾಡುವುದಕ್ಕೆ ಹೋಗುವುದಿಲ್ಲ ಎಂದೂ ‌ಅವರು ಹೇಳಿದ್ದಾರೆ.

ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿಯೇ ಈ ದುರಂತ ಸಂಭವಿಸಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಹಾಗೂ ಮೃತರ ಸಂಬಂಧಿಕರು ಹಾಗೂ ಸ್ಥಳೀಯ ಪ್ರಗತಿ ಪರ ಸಂಘಟನೆಗಳ ಮುಖಂಡರು ಆರೋಪಿಸಿದ್ದು,‌ ಹೈಕೋರ್ಟ್‌ನ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಪ್ರಕರಣದ ಬಗ್ಗೆ ಉನ್ನತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯ ಕಾಂಗ್ರೆಸ್‌ ಶಾಸಕರಾದ ಆರ್‌.ನರೇಂದ್ರ ಹಾಗೂ ಸಿ.ಪುಟ್ಟರಂಗಶೆಟ್ಟಿ ಅವರು ಸರ್ಕಾರದ ವಿರುದ್ಧ ಹರಿಯಾಯ್ದಿದ್ದು, ಭಾನುವಾರ ರಾತ್ರಿ ಆಮ್ಲಜನಕ ಇಲ್ಲದೆ 24 ಜನರು ಮೃತಪಟ್ಟಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಡಳಿತಗಳು ತಮ್ಮ ವೈಫಲ್ಯ ಮುಚ್ಚಿಡಲು ಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಆಗಿದ್ದೇನು?: ಜಿಲ್ಲೆಯ ಕೋವಿಡ್‌ ಆಸ್ಪತ್ರೆಗೆ ಇದುವರೆಗೂ ಮೈಸೂರಿನಿಂದ ಆಮ್ಲಜನಕ ಪೂರೈಕೆಯಾಗುತ್ತಿತ್ತು. ನಾಲ್ಕು ದಿನಗಳ ಹಿಂದೆ ಜಿಲ್ಲಾಸ್ಪತ್ರೆ ಆವರಣದಲ್ಲಿ 6,000 ಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕ ಆರಂಭಗೊಂಡಿದೆ. ಬಳ್ಳಾರಿಯಿಂದ ಇಲ್ಲಿಗೆ ಆಮ್ಲಜನಕ ಪೂರೈಕೆಯಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಸದ್ಯ ಘಟಕದ ಆಮ್ಲಜನಕ ಒಂದೂವರೆ ದಿನಕ್ಕೆ ಸಾಕಾಗುತ್ತಿದೆ. ಭಾನುವಾರ ಮಧ್ಯಾಹ್ನ ಘಟಕದಲ್ಲಿನ ಆಮ್ಲಜನಕ ಖಾಲಿಯಾಗಿತ್ತು. ಆ ಬಳಿಕ ಆಸ್ಪತ್ರೆಯಲ್ಲಿದ್ದ ಆಮ್ಲಜನಕ ಸಿಲಿಂಡರ್‌ಗಳಿಂದ ಆಮ್ಲಜನಕ ಪೂರೈಸಲಾಗಿತ್ತು. ರಾತ್ರಿ 9 ಗಂಟೆಗೆ ಮೈಸೂರಿನಿಂದ ಹೊಸ ಸಿಲಿಂಡರ್‌ಗಳು ಬರಬೇಕಿತ್ತು. ಆದರೆ, ಈ ಸಿಲಿಂಡರ್‌ಗಳು ಬಾರದೇ ಇರುವುದರಿಂದ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದೆ.

ರಾತ್ರಿ 8.30ರವರೆಗೆ ಆಮ್ಲಜನಕ ಲಭ್ಯವಿತ್ತು. ಆಮೇಲೆ 12 ಗಂಟೆಯವರೆಗೆ ಇರುವ ಆಮ್ಲಜನಕವನ್ನು ಹೊಂದಿಸಿದ್ದರು. ಆದರೆ, ಆ ಬಳಿಕ ಅದು ಸಾಧ್ಯವಾಗದೇ ವೈದ್ಯರು ಕೈಚೆಲ್ಲಿದರು. ರಾತ್ರಿ 12 ಗಂಟೆಯ ಹೊತ್ತಿಗೆ ಮೈಸೂರು ಸಂಸ‌ದ ಪ್ರತಾಪ್‌ ಸಿಂಹ ಅವರು ಚಾಮರಾಜನಗರ ಜಿಲ್ಲಾಧಿಕಾರಿ ಹಾಗೂ ಮೈಸೂರಿನ ಹೆಚ್ಚುವರಿ ಜಿಲ್ಲಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿ 50 ಸಿಲಿಂಡರ್‌ಗಳನ್ನು ಪೂರೈಸಲು ವ್ಯವಸ್ಥೆ ಮಾಡಿದ್ದರು. ಈ ಸಿಲಿಂಡರ್‌ಗಳು ರಾತ್ರಿ 2.30ಕ್ಕೆ ಚಾಮರಾಜನಗರ ತಲುಪಿತು. 3 ಗಂಟೆಯ ನಂತರ ಮತ್ತೆ ಆಮ್ಲಜನಕ ಪೂರೈಕೆ ಸಹಜ ಸ್ಥಿತಿಗೆ ಬಂತು.

ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 24 ವೆಂಟಿಲೇಟರ್‌ಗಳಿವೆ. 53 ಐಸಿಯು ಹಾಗೂ 55 ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗಳಿವೆ.

‘ಕೊವಿಡ್‌ ಪ್ರಕರಣಗಳು ಹೆಚ್ಚಿರುವುದರಿಂದ ಪ್ರತಿ ದಿನ 300 ಸಿಲಿಂಡರ್‌ಗಳ ಅಗತ್ಯವಿದೆ. ಇದುವರೆಗೂ ಆಮ್ಲಜನಕಕ್ಕೆ ಮೈಸೂರನ್ನೇ ಅವಲಂಬಿಸಿದ್ದೇವೆ. ಮೈಸೂರಿನಿಂದ ಸರಿಯಾದ ಸಮಯಕ್ಕೆ ಪೂರೈಕೆಯಾಗದೇ ಇರುವುದರಿಂದ ಆಮ್ಲಜನಕ ಕೊರತೆ ಉಂಟಾಗಿದೆ. ಬಹುಶಃ ಅಲ್ಲಿಯೂ ಆಮ್ಲಜನಕದ ಅವಶ್ಯಕತೆ ಇರಬಹುದು ಎಂಬ ಕಾರಣಕ್ಕೆ ಇಲ್ಲಿಗೆ ಪೂರೈಕೆಯಾಗದಿರುವ ಸಾಧ್ಯತೆ ಇದೆ. ಎಲ್ಲ ಸಾವುಗಳೂ ಆಮ್ಲಜನಕದ ಕೊರತೆಯಿಂದಾಗಿ ಆಗಿವೆ ಎಂದು ಹೇಳುವುದು ಸರಿಯಲ್ಲ. ಸಾವಿನ ಲೆಕ್ಕಪರಿಶೋಧನಾ ವರದಿ ಬಂದ ನಂತರ, ನಿಖರ ಕಾರಣ ತಿಳಿಯಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು.

ಮೂವರಷ್ಟೇ ಸಾವು; ಸಚಿವರ ಸಾವಿನ ಲೆಕ್ಕ!

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಬೆಂಗಳೂರಿನಿಂದ ನಗರಕ್ಕೆ ದೌಡಾಯಿಸಿದ ಆರೋಗ್ಯ ಸಚಿವ ಆರ್.ಸುಧಾಕರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ನೇರವಾಗಿ ಆಸ್ಪತ್ರೆಗೆ ತೆರಳಿ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಕೆ.ಸುಧಾಕರ್‌ ಅವರು, ‘ಕೋವಿಡ್‌ ಆಸ್ಪತ್ರೆಯಲ್ಲಿ 123 ರೋಗಿಗಳು ದಾಖಲಾಗಿದ್ದರು. ಈ ಪೈಕಿ 14 ಜನ ವೆಂಟಿಲೇಟರ್‌, 36 ಮಂದಿ ಹೆಚ್ಚು ಆಮ್ಲಜನಕ ಅವಶ್ಯಕ ಇರುವ ಹಾಸಿಗೆಗಳಲ್ಲಿದ್ದರು. 58 ಮಂದಿ ಐಸಿಯುನಲ್ಲಿ ಹಾಗೂ 29 ಮಂದಿ ಸಾಮಾನ್ಯ ಆಮ್ಲಜನಕದ ಹಾಸಿಗೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಿಲ್ಲಾಡಳಿತ, ವೈದ್ಯಕೀಯ ಕಾಲೇಜು ಹಾಗೂ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಭಾನುವಾರ ಬೆಳಿಗ್ಗೆ 7ರಿಂದ ಮಧ್ಯರಾತ್ರಿ 12 ಗಂಟೆವರೆಗೆ 14 ಜನರು ಮೃತಪಟ್ಟಿದ್ದಾರೆ. ಹಲವು ದಿನಗಳಿಂದ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ರೋಗ ಉಲ್ಬಣ ಆಗಿ ಕೊನೆಯುಸಿರೆಳೆದಿದ್ದಾರೆ. ಮಧ್ಯರಾತ್ರಿ 12 ಗಂಟೆಯಿಂದ ಮುಂಜಾವು 3 ಗಂಟೆಯವರೆಗೆ ಮೂವರು ಅಸುನೀಗಿದ್ದಾರೆ. 3 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಏಳು ಜನರು ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 23 ಜನರು ಮೃತಪಟ್ಟಿದ್ದರೆ, ಒಬ್ಬರು ಕಾಮಗೆರೆಯಲ್ಲಿ ನಿಧನರಾಗಿದ್ದಾರೆ’ ಎಂದು ಹೇಳಿದರು.

‘ಪ್ರಾಣ ವಾಯು ಇಲ್ಲದೇ ಮೂವರು ಕೊನೆಯುಸಿರೆಳೆದಿದ್ದಾರೆ. ಇದು ಪ್ರಾಥಮಿಕ ವರದಿಯಷ್ಟೇ. ಈ ಬಗ್ಗೆ ವ್ಯಾಖ್ಯಾನ ಮಾಡುವುದಕ್ಕೆ ಹೋಗುವುದಿಲ್ಲ’ ಎಂದು ಅವರು ಹೇಳಿದರು.

‘ಎಲ್ಲ ಕಡೆಯೂ ಆಮ್ಲಜನಕದ ಬೇಡಿಕೆ ಹೆಚ್ಚಾಗಿದೆ. ಸರ್ಕಾರ ಪೂರೈಸಲು ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಈ ಅನಿರೀಕ್ಷಿತ ಸಾಂಕ್ರಾಮಿಕ ರೋಗದ ವಿರುದ್ಧ ಸರ್ಕಾರ ಪರಿಣಾಮಕಾರಿಯಾಗಿ ಹೋರಾಡುವಾಗ ಇಂತಹ ಘಟನೆ ನಡೆದಿರುವುದು ಬೇಸರ ತಂದಿದೆ. ಸರ್ಕಾರ ಈಗಾಗಲೇ ತನಿಖೆಗೆ ಆದೇಶಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಎಲ್ಲ ಸಾವಿಗೆ ಆಮ್ಲಜನಕದ ಕೊರತೆ ಕಾರಣ ಅಲ್ಲ: ಸುರೇಶ್‌ ಕುಮಾರ್‌

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು, ‘ಪ್ರತಿಯೊಂದು ಸಾವು ಕೂಡ ನೋವು ತರುವಂತಹದ್ದು. 24 ಸಾವುಗಳೂ ಆಮ್ಲಜನಕದ ಕೊರತೆಯಿಂದ ಆಗಿರುವುದು ಎಂಬ ಭಾವನೆ ವ್ಯಕ್ತವಾಗುತ್ತಿದೆ. ಆದರೆ, ಎಲ್ಲವೂ ಆಮ್ಲಜನಕದ ಕೊರತೆಯಿಂದ ಆಗಿಲ್ಲ ಎಂದು ಸ್ಪಷ್ಟಪಡಿಸುವುದಕ್ಕೆ ಇಚ್ಛಿಸುತ್ತೇನೆ’ ಎಂದರು.

‘ಗಂಭೀರ ಕಾಯಿಲೆಯಿಂದ ಮೃತಪಟ್ಟವರು ಇದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ, ತನಿಖೆ ಮಾಡಿ ವರದಿ ಸಲ್ಲಿಸಲು ಸರ್ಕಾರ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಮೂರು ದಿನಗಳಲ್ಲಿ ವರದಿ ನೀಡಲು ಸೂಚಿಸಲಾಗಿದೆ’ ಎಂದು ಹೇಳಿದರು.

ಜೀವ ಉಳಿಸಲು ಗಾಳಿ ಬೀಸಿದರು...

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್‌ ರೋಗಿಗಳಿಗೆ ಭಾನುವಾರದ ರಾತ್ರಿ ಕರಾಳ ರಾತ್ರಿಯಾಗಿತ್ತು. ರಾತ್ರಿ 8.30ಕ್ಕೆ ಆಮ್ಲಜನಕ ಮುಗಿಯುತ್ತಿದೆ ಎಂದು ವೈದ್ಯರು ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ತಿಳಿಸಿದ ಆತಂಕದ ವಾತಾವರಣ ಉಂಟಾಯಿತು. ಕೆಲವು ರೋಗಿಗಳು ಆಸ್ಪತ್ರೆಯ ಹೊರಗಡೆ ಬಂದರು. ಇನ್ನು ಕೆಲವು ಸಂಬಂಧಿಕರು ಆತಂಕದಿಂದ ಕೂಗಾಟ, ಅರಚಾಟದಲ್ಲಿ ತೊಡಗಿದರು. ಜಿಲ್ಲಾಡಳಿತದ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದರು.

ವೈದ್ಯಕೀಯ ಸಿಬ್ಬಂದಿ ಹಾಗೂ ಆಮ್ಲಜನಕ ಪಡೆಯದ ರೋಗಿಗಳು ದಿನಪತ್ರಿಕೆ, ಬಟ್ಟೆ ಸೇರಿದಂತೆ ಸಿಕ್ಕಿದ ವಸ್ತುಗಳಲ್ಲಿ ಗಾಳಿ ಹಾಕಲು ಆರಂಭಿಸಿದರು. ಹಾಗಿದ್ದರೂ, 12 ಗಂಟೆಯಾದರೂ ಆಮ್ಲಜನಕ ಬಾರದೇ ಇದ್ದಾಗ ವೈದ್ಯರು ಕೈಚೆಲ್ಲಿದರು.

ರಾತ್ರಿ 2.30ಗೆ 50 ಸಿಲಿಂಡರ್‌ಗಳು ಬಾರದೇ ಇದ್ದಿದ್ದರೆ ಇನ್ನಷ್ಟು ಸಾವು ನೋವು ಸಂಭವಿಸುತ್ತಿತ್ತು ಎಂದು ವೈದ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT