ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಣ್ಣೆನಗರಿಯಲ್ಲಿ ಜನಸಾಗರ: ‘ಕೈ’ ನಗಾರಿ: ಒಗ್ಗಟ್ಟಿನ ಸವಾರಿ

Last Updated 3 ಆಗಸ್ಟ್ 2022, 20:50 IST
ಅಕ್ಷರ ಗಾತ್ರ

ದಾವಣಗೆರೆ: ನಾಡಿನ ಎಲ್ಲ ದಾರಿಗಳು ಬೆಣ್ಣೆನಗರಿ ಕಡೆಗೆ ಹರಿದು ಬಂದಂತೆ ಸಮಾವೇಶಗೊಂಡ ಜನಸಾಗರ, ಕಾಂಗ್ರೆಸ್‌– ಸಿದ್ದರಾಮಯ್ಯನವರಿಗೆ ಜಯಘೋಷ, ನಾಯಕರು–ಕಾರ್ಯಕರ್ತರ ಉತ್ಸಾಹದ ಹೊನಲಿನ ಮಧ್ಯೆ ಇಲ್ಲಿ ನಡೆದ ಸಿದ್ದರಾಮಯ್ಯನವರ 75ನೇ ಜನ್ಮದಿನದ ‘ಅಮೃತ ಮಹೋತ್ಸವ’ವು ವಿಧಾನಸಭೆ ಚುನಾವಣೆಗೆ ‘ಕೈ‍’ ಪಡೆಯನ್ನು ಅಣಿಗೊಳಿಸಲು ಬಡಿದೆಬ್ಬಿಸಿದ ನಗಾರಿ ಸದ್ದಿನಂತೆ ಮಾರ್ದನಿಸಿತು.

ಮಧ್ಯಕರ್ನಾಟಕದ ವಾಣಿಜ್ಯ ನಗರಿಯಾಗಿರುವ ದಾವಣಗೆರೆಯಲ್ಲಿ ಶಕ್ತಿ ಪ್ರದರ್ಶಿಸುವ ಮೂಲಕ ಮುಂದಿನ ಚುನಾವಣೆಗೆ ಇಡೀ ರಾಜ್ಯಕ್ಕೆ ಸಂದೇಶ ರವಾನಿಸಬೇಕೆಂಬ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಮ್ಮಿಕೊಂಡ, ಅಮೃತಮಹೋತ್ಸವತಮ್ಮ ನಾಯಕನ ವೈಭವೀಕರಣಕ್ಕೆ
ಸೀಮಿತವಾಗಲಿಲ್ಲ. ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ ನಾಯಕರು–ಕಾರ್ಯಕರ್ತರಲ್ಲಿ ಅಮೃತ ಸಿಂಚನ ಮಾಡಿಸುವ ಸಂಜೀವಿನಿಯಂತೆ ಹುರುಪು ತುಂಬಿಸುವಲ್ಲಿ ಯಶಸ್ವಿ ಆಯಿತು. ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಾಕ್ಷಿಯಾದರು.

ನಾಯಕತ್ವಕ್ಕಾಗಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಧ್ಯೆ ಪೈಪೋಟಿ ಇದೆ ಎಂಬ ವರ್ತಮಾನವನ್ನು ಹುಸಿಗೊಳಿಸುವಂತೆ ನಡೆದುಕೊಂಡ ನಾಯಕರು, ಆಡಳಿತಾರೂಢ ಬಿಜೆಪಿಯನ್ನು ಮಣಿಸಿ ಅಧಿಕಾರ ಹಿಡಿಯಲು ಒಗ್ಗಟ್ಟು ತೋರುವುದಾಗಿ ಘೋಷಿಸಿದರಲ್ಲದೇ, ಅದನ್ನು ಪ್ರದರ್ಶಿಸಿದರು. ‘ನಮ್ಮಿಬ್ಬರ ಮಧ್ಯೆ ಯಾವುದೇ ಒಡಕಿಲ್ಲ. ಅದು ಬಿಜೆಪಿ ಹಾಗೂ ಕೆಲವು ಮಾಧ್ಯಮಗಳ ಸೃಷ್ಟಿರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರಲು ಸಾಮೂಹಿಕ ನಾಯಕತ್ವದಲ್ಲಿಶ್ರಮಿಸುತ್ತೇವೆ’ ಎಂದು ಸಿದ್ದರಾಮಯ್ಯ ಘೋಷಿಸಿದರು. ‘ಅದಕ್ಕೆ ನಿಮ್ಮ ಆಶೀರ್ವಾದ ಬೇಕು’ ಎಂದು ಜನರನ್ನು ಉದ್ದೇಶಿಸಿ ಮೂರು ದಿಕ್ಕುಗಳಿಗೆ ಬೊಟ್ಟು ಮಾಡಿ ಕೋರಿದರು.

ಇದೇ ನಡಾವಳಿ ಪ್ರದರ್ಶಿಸಿದ ಡಿ.ಕೆ. ಶಿವಕುಮಾರ್, ‘ಇಂದಿರಾಗಾಂಧಿಯವರ ಆಯ್ದ ನುಡಿಮುತ್ತುಗಳು’ ಪುಸ್ತಕವನ್ನು ಸಿದ್ದರಾಮಯ್ಯನವರ ಕೈಗಿಟ್ಟು, ಅವರ ಬಲಗೈಯನ್ನು ಹಿಡಿದು ಮೇಲೆತ್ತಿ ಒಗ್ಗಟ್ಟಿನ ಬೆಸುಗೆ ಹಾಕಿದರು. ವೇದಿಕೆಯಲ್ಲಿ ಸಿದ್ದರಾಮಯ್ಯನವರನ್ನು ಆಲಂಗಿಸಿ ಒಮ್ಮತ ತೋರಿದರು.

ಸಿದ್ದರಾಮಯ್ಯ ಸಿ.ಎಂ: ಬೇಡಿಕೆ

ಜನ್ಮದಿನ ಆಚರಿಸಿಕೊಳ್ಳುತ್ತಿರುವ ನೆಚ್ಚಿನ ನಾಯಕನ ಹೆಸರು ಕೇಳಿದಾಗೆಲ್ಲ ಮುಗಿಲು ಮುಟ್ಟುತ್ತಿದ್ದ ಅಭಿಮಾನಿಗಳ ಕೇಕೆಯು, ಸಿದ್ದರಾಮಯ್ಯ ಅವರನ್ನೇ ಮುಂದಿನ ಮುಖ್ಯಮಂತ್ರಿಯಾಗಿ ಘೋಷಿಸಲು ಒತ್ತಡ ಹೇರಿದಂತೆ ಭಾಸವಾಯಿತು. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕೆ.ಸಿ. ವೇಣುಗೋಪಾಲ್‌ ಹಾಗೂ ರಾಹುಲ್‌ ಗಾಂಧಿ ಆ ಬೇಡಿಕೆಗೆ ಮನ್ನಣೆ ನೀಡದೆ ಸಾಮೂಹಿಕ ನಾಯಕತ್ವಕ್ಕೇ ಆದ್ಯತೆ ನೀಡುವುದಾಗಿ ಘೋಷಿಸಿದರು.

ಕೆಲವೊಮ್ಮೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂಬ ಘೋಷಣೆ ಕೂಗುವ ಮೂಲಕ ‘ಸಾಮೂಹಿಕ ನಾಯಕತ್ವ ಬೇಡ, ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿ’ ಎಂಬ ಬೇಡಿಕೆಯನ್ನು ಇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT