ಸೋಮವಾರ, ಸೆಪ್ಟೆಂಬರ್ 27, 2021
21 °C
ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ

ಹಿರಿಯರ ಬಗ್ಗೆ ಎಂದೂ ಗೌರವ ತೋರದ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರದೇ ಸಂಪುಟದ ಹಿರಿಯ ಸಚಿವರ ಬಗ್ಗೆ ಪರಮ ಅಸಡ್ಡೆ ಮತ್ತು ಅಗೌರವ ಹೊಂದಿದ್ದರು. ಅಲ್ಲದೆ, ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿ ಅಪಮಾನಗೊಳಿಸಿದ್ದರು. ಈಗ ತುಂಬಾ ಸಂಭಾವಿತರಂತೆ ಮಾತನಾಡುತ್ತಿದ್ದಾರೆ’ ಎಂದು ಬಿಜೆಪಿ ತಿರುಗೇಟು ನೀಡಿದೆ.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಿಮ್ಮ ಅವಧಿಯಲ್ಲಿ ಶಾಮನೂರು ಶಿವಶಂಕರಪ್ಪ, ವಿ.ಶ್ರೀನಿವಾಸ್‌ ಪ್ರಸಾದ್‌, ಅಂಬರೀಷ್‌ ಅವರನ್ನು ಅವಮಾನಗೊಳಿಸಿ ಸಂಪುಟದಿಂದ ಕಿತ್ತು ಹಾಕಿದ್ದಿರಿ. ಇದಕ್ಕೇನು ಕಾರಣ, ಉತ್ತರ ಕೊಟ್ಟಿದ್ದೀರಾ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ಒಬ್ಬರಾದ ಹಿರಿಯ ನಾಯಕ  ಜನಾರ್ದನ ಪೂಜಾರಿ ಅವರನ್ನು ಮೂಲೆಗುಂಪು ಮಾಡಿ ಅತ್ಯಂತ ಕೆಟ್ಟದಾಗಿ ನಡೆಸಿ ಕೊಂಡಿರಿ. ಮೈಸೂರು ಭಾಗದ ಹಿರಿಯ ನಾಯಕ ಶ್ರೀನಿವಾಸ್‌ ಪ್ರಸಾದ್‌ ಅವರನ್ನು ನಡೆಸಿಕೊಂಡ ರೀತಿಯನ್ನು ನೆನಪಿಸಿಕೊಳ್ಳಿ. ಮುಖ್ಯಮಂತ್ರಿ ಸ್ಥಾನಕ್ಕೆ ಅಡ್ಡಿ ಆಗುತ್ತಾರೆ ಎಂಬ ಕಾರಣಕ್ಕೆ ಜಿ.ಪರಮೇಶ್ವರ ಅವರು ಚುನಾವಣೆಯಲ್ಲಿ ಗೆಲ್ಲದಂತೆ ನೋಡಿ ಕೊಂಡಿದ್ದು ನೀವೇ ಅಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ರಾಜ್ಯ ಸರ್ಕಾರವು ಉತ್ತಮವಾಗಿ ಕೆಲಸ ಮಾಡಲಿದೆ. ವಿರೋಧ ಪಕ್ಷಗಳು ಕಾಲೆಳೆಯುವ ಪ್ರವೃತ್ತಿಯನ್ನು ಕೈಬಿಟ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಸುರ್ಜೇವಾಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರು ಆಧಾರರಹಿತ ಮತ್ತು ಬೇಜವಾಬ್ದಾರಿ ಹೇಳಿಕೆ ಕೊಡು ವುದು ಬಿಡಬೇಕು’ ಎಂದು ತಿಳಿಸಿದರು.

‘ಕಾಂಗ್ರೆಸ್‌ ಪಕ್ಷವು ಸರ್ದಾರ್‌ ಪಟೇಲ್‌, ಬಿ.ಆರ್. ಅಂಬೇಡ್ಕರ್‌, ಪಿ.ವಿ.ನರಸಿಂಹರಾವ್‌, ಸೀತಾರಾಮ್‌ ಕೇಸರಿ ಅವರನ್ನು ಹೇಗೆ ನಡೆಸಿಕೊಂಡಿದೆ ಎಂಬುದನ್ನು ಸಿದ್ದರಾಮಯ್ಯ ನೆನಪಿಸಿ ಕೊಳ್ಳಬೇಕು’ ಎಂದು ಬಿಜೆಪಿ ಮುಖ್ಯ ವಕ್ತಾರ ಗಣೇಶ್‌ ಕಾರ್ಣಿಕ್ ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು