ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಮನೂರು ಶಿವಶಂಕರಪ್ಪ ಅರ್ಜಿ ಬಂದ ಮೇಲೆ ಅದೆಲ್ಲಾ ಶುರುವಾಯಿತು: ಸಿದ್ದರಾಮಯ್ಯ

Last Updated 20 ಆಗಸ್ಟ್ 2022, 18:57 IST
ಅಕ್ಷರ ಗಾತ್ರ

ಹಾಸನ: ‘ನಾನು ರಂಭಾಪುರಿ ಶ್ರೀಗಳ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ. ಆದರೆ, ಏನಾಯ್ತು ಎಂಬುದರ ಬಗ್ಗೆ ಅವರಿಗೆ ವಿವರಿಸಿದ್ದೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಧರ್ಮ ಒಡೆಯುವುದು ಉದ್ದೇಶವಾಗಿರಲಿಲ್ಲ ಎಂದು ಸಿದ್ದರಾಮಯ್ಯ ನೋವು ತೋಡಿಕೊಂಡಿದ್ದಾರೆ. ಪಶ್ಚಾತಾಪ ಪಟ್ಟಿದ್ದಾರೆ’ ಎಂಬ ರಂಭಾಪುರಿ ಶ್ರೀಗಳ ಹೇಳಿಕೆಗೆಪ್ರತಿಕ್ರಿಯಿಸಿದ ಅವರು, ‘ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಏನೇನು ಆಯಿತು, ಏನೇನು ಮಾಡಿದ್ದೇನೆ ಎನ್ನುವುದನ್ನು ಹೇಳಿದ್ದೇನೆ. ಇದು ಅಪಪ್ರಚಾರ ಆಗಿದೆ. ಧರ್ಮದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಿರಲಿಲ್ಲ. ಶಾಮನೂರು ಶಿವಶಂಕರಪ್ಪ ವೀರಶೈವ ಧರ್ಮ ಮಾಡಿ ಅಂತ ಅರ್ಜಿ ಕೊಟ್ಟರು. ಅಂದಿನಿಂದ ಇದೆಲ್ಲ ಆರಂಭವಾಯಿತು’ ಎಂದು ಹೇಳಿದರು.

‘ಬಿಜೆಪಿಯವರು ಹಿಂದುತ್ವದಲ್ಲಿ ನಂಬಿಕೆ ಇಟ್ಟು, ಕೋಮುವಾದದ ಅಜೆಂಡಾ ಇಟ್ಟುಕೊಂಡು ಎಲ್ಲವನ್ನೂ ಮಾಡುತ್ತಿದ್ದಾರೆ. ಕೊಡಗಿನಲ್ಲಿ ಪ್ರತಿಭಟನೆ ಮಾಡುತ್ತಿದ್ದವರನ್ನು ಪೊಲೀಸರು ತಡೆಯಬಹುದಿತ್ತಲ್ಲವೇ? ಇದನ್ನು ಖಂಡಿಸಿ ಆ.26ರಂದು ಕೊಡಗು ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದರು.

ಪ್ರತಿಕ್ರಿಯೆಗೆ ರಂಭಾಪುರಿಶ್ರೀ ನಕಾರ
ಚಿಕ್ಕಮಗಳೂರು
: ‘ರಂಭಾಪುರಿ ಪೀಠಕ್ಕೆ ಭೇಟಿ ನೀಡಿದಾಗ ನೋವು ತೋಡಿಕೊಂಡಿಲ್ಲ, ಪಶ್ಚಾತ್ತಾಪಪಟ್ಟಿಲ್ಲ, ಆಗಿರುವುದನ್ನು ವಿವರಿಸಿ ಹೇಳಿದ್ದೇನೆ ಅಷ್ಟೆ’ ಎಂದು ವಿಧಾನಸಭೆ ವಿರೋಧ ಸಿದ್ದರಾಮಯ್ಯ ಹೇಳಿರುವುದಕ್ಕೆ ಪ್ರತಿಕ್ರಿಯಿಸಲು ರಂಭಾಪುರಿಶ್ರೀ ನಿರಾಕರಿಸಿದರು.

ಸುದ್ದಿಗಾರರು ಸ್ವಾಮೀಜಿ ಅವರ ಪ್ರತಿಕ್ರಿಯೆ ಪಡೆಯಲು ಮಠಕ್ಕೆ ಶನಿವಾರ ಹೋಗಿದ್ದರು. ಆದರೆ, ಅವರು ಪ್ರತಿಕ್ರಿಯೆ ನೀಡಲಿಲ್ಲ.

ಸಿದ್ದರಾಮಯ್ಯನವರು ಶುಕ್ರವಾರ ಮಠಕ್ಕೆ ಭೇಟಿ ನೀಡಿ ತೆರಳಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ್ದ ಶ್ರೀಗಳು,‘ಧರ್ಮ ಒಡೆಯುವ ಪ್ರಯತ್ನ ಮಾಡಿರಲಿಲ್ಲ. ಕೆಲವರು ನನ್ನನ್ನು ದಾರಿ ತಪ್ಪಿಸಿದ್ದರು. ಅದರಿಂದಾಗಿ ಪಶ್ಚಾತ್ತಾಪವಾಗಿದೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ’ ಎಂದು ತಿಳಿಸಿದ್ದರು.

*

ಸ್ವಾಮೀಜಿ ಹೇಳಿಕೆ ಬಳಿಕ ಸಿದ್ದರಾಮಯ್ಯ ಕೂಡ ಮಾತನಾಡಿದ್ದಾರೆ. ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ಆದರೆ, ಆ ಸಂದರ್ಭದಲ್ಲಿ ಏನು ನಡೆಯಿತು ಎಂಬ ಸತ್ಯ ಎಲ್ಲರಿಗೂ ಗೊತ್ತಿದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

*

ಸಿದ್ದರಾಮಯ್ಯ ಕುರಿತ ಸ್ವಾಮೀಜಿ ಹೇಳಿಕೆ ಬಗ್ಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ. ಅವರ ಸ್ವಭಾವ ಏನು ಎಂಬುದು ಎಲ್ಲರಿಗೂ ಗೊತ್ತಿದೆ.
-ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ಶಾಸಕ

*

ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾದ 12 ಗಂಟೆಗಳ ಒಳಗೆ ಸಿದ್ದರಾಮಯ್ಯ ‘ಯೂ ಟರ್ನ್‌’ ಹೊಡೆದಿದ್ದಾರೆ. ಮುಂದೆ ಯಾವ ‘ಟರ್ನ್‌’ ಹೊಡೆಯುತ್ತಾರೋ ಕಾದು ನೋಡಬೇಕಿದೆ.
-ಸಿ.ಸಿ. ಪಾಟೀಲ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT