ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಧ್ವನಿ: ಡಿಕೆಶಿ– ಸಿದ್ದರಾಮಯ್ಯ ಪ್ರತ್ಯೇಕ ಯಾತ್ರೆ ವೇಳಾ‌ಪಟ್ಟಿ ಸಿದ್ಧ

Last Updated 29 ಜನವರಿ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ಮತಬೇಟೆಗೆ ಕೈಗೊಂಡ ಜಂಟಿ ‘ಪ್ರಜಾಧ್ವನಿ’ ಯಾತ್ರೆ ಮುಗಿಯುತ್ತಿದ್ದಂತೆ, ಇದೀಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ‌ಅವರ ಪ್ರತ್ಯೇಕ ಯಾತ್ರೆಯ ವೇಳಾಪಟ್ಟಿ ಸಿದ್ಧವಾಗಿದೆ ಪಕ್ಷದ ಪ್ರಮುಖ ನಾಯಕರನ್ನು ಜೊತೆಗೆ ಕರೆದುಕೊಂಡು ಉತ್ತರ– ದಕ್ಷಿಣ ಭಾಗದಿಂದ ಇಬ್ಬರೂ ಫೆಬ್ರುವರಿ 3ರಿಂದ ಕ್ಷೇತ್ರವಾರು ‘ದಂಡಯಾತ್ರೆ’ ಹೊರಡಲಿದ್ದಾರೆ.

ಪಕ್ಷದ 35 ನಾಯಕರು ಮತ್ತು ಆಪ್ತ ಬಳಗದ ಜೊತೆ ಬೀದರ್‌ನ ಬಸವಕಲ್ಯಾಣದಿಂದ ಸಿದ್ದರಾಮಯ್ಯ ಯಾತ್ರೆ ಆರಂಭಿಸಲಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಮುಖಂಡರಾದ ಜಮೀರ್ ಅಹಮ್ಮದ್, ಬೈರತಿ ಸುರೇಶ್,ಎಚ್.ಸಿ. ಮಹಾದೇವಪ್ಪ, ಸಂತೋಷ್ ಲಾಡ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಉಮಾಶ್ರೀ, ಅಂಜಲಿ ನಿಂಬಾಳ್ಕರ್ ಮುಂತಾದವರು ಸಿದ್ದರಾಮಯ್ಯ ಜೊತೆ ಯಾತ್ರೆಯಲ್ಲಿ ಇರಲಿದ್ದಾರೆ‌.

ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಿ‌ ಯಾತ್ರೆ ಆರಂಭಿಸಲಿರುವ ಸಿದ್ದರಾಮಯ್ಯ, ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದೇ ದಿನ ಬಾಲ್ಕಿಯಲ್ಲಿ, ಫೆ. 4ರಂದು ಔರಾದ್, ಬೀದರ್, ಬೀದರ್ ದಕ್ಷಿಣ ಕ್ಷೇತ್ರ, ಹುಮನಾಬಾದ್‌ನಲ್ಲಿ ಸಮಾವೇಶದಲ್ಲಿ ಮಾತನಾಡಿ ಕಲಬುರಗಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಫೆ. 6 ರಂದು ಗುಲಬರ್ಗಾ ಗ್ರಾಮೀಣ, ಚಿಂಚೋಳಿ, ಸೇಡಂ, 7ರಂದು ಆಳಂದ, ಅಫ್ಜಲಪುರ, ಯಡ್ರಾಮಿ ಜೇವರ್ಗಿ, 8ರಂದು ಚಿತ್ತಾಪುರ, 10ರಂದು ಸುರಪೂರ, ಶಹಾಪುರ, ಕಲಬುರ್ಗಿ ಉತ್ತರ ಹಾಗೂ ದಕ್ಷಿಣ, 11ರಂದು ಸಿಂಧಗಿ, ಇಂಡಿ, ನಾಗಠಾಣಾ, 12ರಂದು ಬಬಲೇಶ್ವರ, ದೇವರ ಹಿಪ್ಪರಗಿ, ಬಸವನ
ಬಾಗೇವಾಡಿ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಸಂಚರಿಸಲಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಡಿ.ಕೆ. ಶಿವಕುಮಾರ್‌ ಯಾತ್ರೆ ಕೈಗೊಳ್ಳಲಿದ್ದು, ವಿಧಾನಸಭೆ ವಿರೋಧ ಪಕ್ಷದ ನಾಯಕ
ಬಿ.ಕೆ. ಹರಿಪ್ರಸಾದ್‌, ವೀರಪ್ಪ ಮೊಯಿಲಿ, ಜಿ. ಪರಮೇಶ್ವರ, ದಿನೇಶ್‌ ಗುಂಡೂರಾವ್‌, ರೆಹಮಾನ್‌ ಖಾನ್‌, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಕೆ.ಎಚ್‌. ಮುನಿಯಪ್ಪ., ಕೆ.ಜೆ. ಜಾರ್ಜ್‌ ಸೇರಿದಂತೆ 54 ನಾಯಕರು ಜೊತೆಗೆ ಇರಲಿದ್ದಾರೆ. ಕೋಲಾರ ಜಿಲ್ಲೆ
ಯಿಂದ ಶಿವಕುಮಾರ್‌ ನೇತೃತ್ವದ ತಂಡದ ಯಾತ್ರೆ ಆರಂಭವಾಗಲಿದೆ. ಫೆ. 3ರಂದು ಮುಳಬಾಗಿಲು, ಕೆಜಿಎಫ್, 4ರಂದು ಮಾಲೂರು, ದೇವನಹಳ್ಳಿ, 6ರಂದು ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, 7ರಂದು ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, 8ರಂದು ಶಿಕಾರಿಪುರ, ಸೊರಬ, ಸಾಗರ, 9ರಂದು ತೀರ್ಥಹಳ್ಳಿ, ಭದ್ರಾವತಿಯ ಸಮಾವೇಶಗಳಲ್ಲಿ ಶಿವಕುಮಾರ್‌ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT