ಗುರುವಾರ , ಜೂನ್ 24, 2021
25 °C

ಲಸಿಕೆಗೆ ₹100 ಕೋಟಿ ಬಳಸಲು ಅವಕಾಶ ಕೊಡಿ: ಬಿಎಸ್‌ವೈಗೆ ಸಿದ್ದರಾಮಯ್ಯ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಸಕರು, ಸಂಸದರಿಗೆ ನೀಡಲಾಗುವ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ತಲಾ ₹1 ಕೋಟಿಯಂತೆ ಒಟ್ಟು ₹100 ಕೋಟಿ ಬಳಸಿ ಜನರಿಗೆ ಲಸಿಕೆ ವಿತರಿಸಲು ಅವಕಾಶ ಕೊಡಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಪ್ರತಿನಿಧಿಸುವ ಶಾಸಕರು, ಸಂಸದರ ಕ್ಷೇತ್ರದ ಅಭಿವೃದ್ಧಿಗೆ ನೀಡಲಾಗುವ ಮೊತ್ತದಲ್ಲಿ ತಲಾ ₹1 ಕೋಟಿಯನ್ನು ಲಸಿಕೆಗಾಗಿ ಬಳಸಿದರೆ ₹90 ಕೋಟಿ ಆಗಲಿದೆ. ಪಕ್ಷದ ವತಿಯಿಂದ ₹10 ಕೋಟಿ ಸಂಗ್ರಹಿಸುತ್ತೇವೆ. ಒಟ್ಟು ಮೊತ್ತದಲ್ಲಿ ಲಸಿಕೆ ಖರೀದಿಸಿ, ಐಸಿಎಂಆರ್ ನಿಗದಿಪಡಿಸಿರುವ ನಿಯಮಗಳಂತೆ ಲಸಿಕೆ ನೀಡುತ್ತೇವೆ. ಇದಕ್ಕೆ ಅವಕಾಶ ಹಾಗೂ ಅನುಮೋದನೆ ನೀಡಬೇಕು’ ಎಂದು ಪತ್ರದಲ್ಲಿ ಕೋರಿದ್ದಾರೆ.

‘ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಯಾಮಾರಿದೆ. ಸರ್ಕಾರ ತಪ್ಪು ಮಾಡಿದೆ ಎಂದು ಹೇಳಿದರೆ ಬಿಜೆಪಿಯ ಹಲವು ಮುಖಂಡರು ಜನರನ್ನು, ವಿರೋಧ ಪಕ್ಷಗಳನ್ನು ನಿಂದಿಸುತ್ತಾ ಕುಳಿತಿದ್ದಾರೆ. ಸರ್ಕಾರದ ಸ್ವಯಂಕೃತ ಅಪರಾಧದಿದಾಗಿ ಕತ್ತಲು ಆವರಿಸಿದೆ. ಈ ಹೊತ್ತಿನಲ್ಲಿ ಜವಾಬ್ಧಾರಿಯುತ ಪ್ರತಿ ಪಕ್ಷವಾದ ನಾವು ಸುಮ್ಮನೇ ಕೈಕಟ್ಟಿ ಕೂರಲಾಗದು. ಈ ಕಾರಣಕ್ಕಾಗಿ ಲಸಿಕೆ ಯೋಜನೆ ಆರಂಭಿಸಲು ಮುಂದಾಗಿದ್ದೇವೆ’ ಎಂದು ಹೇಳಿದ್ದಾರೆ.

‘ವಿರೋಧ ಪಕ್ಷಗಳನ್ನು ಟೀಕಿಸುವ ಬಿಜೆಪಿ ಮುಖಂಡರು ಹಾಗೂ ಸ್ವತಃ ಪ್ರಧಾನಮಂತ್ರಿಗಳು, ‘ನಾವು ಕೊರೊನಾ ವಿರುದ್ಧದ ಯುದ್ಧ ಗೆದ್ದು ಬಿಟ್ಟಿದ್ದೇವೆ’ ಎಂದು ನಾಲ್ಕು ತಿಂಗಳ ಹಿಂದೆ ಹೇಳಿದ್ದರು. ಈ ಮಾತುನಂಬಿದ ಜನರು, ದುಡಿಮೆಯಲ್ಲಿ ತೊಡಗಿಕೊಂಡರು. ಆಗಲೇ ಕೊರೊನಾದ ಎರಡನೇ ಅಲೆ ಬಂದು ಅಪ್ಪಳಿಸಿತು. ಅಸಂಖ್ಯಾತ ಜನರು ಮೃತಪಟ್ಟರು. ಈ ಸಾವುಗಳನ್ನು ಆಡಳಿತ ನಡೆಸುತ್ತಿರುವ ಸರ್ಕಾರಗಳೇ  ಮಾಡಿದ ಕೊಲೆ ಎಂದರೆ ತಪ್ಪೇನು? ತಜ್ಞರು ನೀಡಿದ ಎಚ್ಚರಿಕೆ, ಸಲಹೆಗಳನ್ನು ಕಸದ ಬುಟ್ಟಿಗೆ ಎಸೆದು ಜನರನ್ನು ಕೊಂದವರೇ ಹೊರಬೇಕಲ್ಲವೇ?’ ಎಂದೂ ಅವರು ಪ್ರಶ್ನಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು