ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವನ್ಯಾರು ಕೇಳೋಕೆ: ಸಿ.ಟಿ. ರವಿ ವಿರುದ್ಧ ಸಿದ್ದರಾಮಯ್ಯ ಗರಂ

ಟೋಪಿ ತೊಟ್ಟು ಮುಸ್ಲಿಮರೊಂದಿಗೆ ನಮಾಜ್‌ನಲ್ಲಿ ಭಾಗವಹಿಸಿದ್ದ ಚಿತ್ರ ಟ್ವೀಟ್‌
Last Updated 27 ಅಕ್ಟೋಬರ್ 2021, 12:26 IST
ಅಕ್ಷರ ಗಾತ್ರ

ವಿಜಯಪುರ: ನಾನು ಕಂಬಳಿಯನ್ನಾದರೂ ಹಾಕಿಕೊಳ್ತೇನೆ,ಗಾಂಧಿ ಟೋಪಿಯನ್ನಾದರೂ ಹಾಕಿಕೊಳ್ತೇನೆ. ಮುಸ್ಲಿಂ, ಕ್ರಿಶ್ಚಿಯನ್‌, ಹಿಂದು ಸೇರಿದಂತೆ ಯಾರದ್ದಾದರೂ ಟೋಪಿ ಹಾಕಿಕೊಳ್ತೇನೆ. ಇವನಾರು ಕೇಳೋಕೆ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿ.ಟಿ.ರವಿ ವಿರುದ್ಧ ಹರಿಹಾಯ್ದರು.

ಟೋಪಿ ತೊಟ್ಟು ಮುಸ್ಲಿಮರೊಂದಿಗೆ ನಮಾಜ್‌ನಲ್ಲಿ ಭಾಗವಹಿಸಿದ್ದ ತಮ್ಮ ಫೋಟೊವನ್ನು ಸಿ.ಟಿ.ರವಿ ಟ್ವೀಟ್‌ ಮಾಡಿ, ಅಸಂಬಂಧ ಪದ ಪ್ರಯೋಗ ಮಾಡಿರುವುದಕ್ಕೆ ಅವರು ಗರಂ ಆಗಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು ಎಂದು ಕಂಬಳಿ ವಿಚಾರವನ್ನು ಮೊದಲಿಗೆ ರಾಜಕೀಯಕ್ಕೆ ಎಳೆದು ತಂದಿದ್ದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅದಕ್ಕೆ ಪ್ರತ್ಯುತ್ತರವಾಗಿ ಕುರಿ ಕಾಯ್ದಿರೋನು ನಾನು, ಕುರುಬರ ಜಾತಿಯಲ್ಲಿ ಹುಟ್ಟಿರೋನು ನಾನು, ಕಂಬಳಿ ಹಾಕಿಕೊಂಡಿರೋನು ನಾನು ಎಂದು ಹೇಳಿದ್ದೆ. ಅದು ಹೇಗೆ ಅವಮಾನ ಆಗುತ್ತದೆ? ಎಂದು ಪ್ರಶ್ನಿಸಿದರು.

ಕಂಬಳಿ ಬಗ್ಗೆ ನನಗೆ ಗೌರವವಿದೆ. ಕಂಬಳಿ ನೇಯುವವರು ಕುರುಬರು. ಹೆಚ್ಚೆಂದರೆ ಗೊಲ್ಲರು ನೇಯುತ್ತಾರೆ. ಬೇರೆಯವರಾರು ಕಂಬಳಿ ನೇಯುವುದಿಲ್ಲ. ಬಸವರಾಜ ಬೊಮ್ಮಾಯಿ ಅವರ ಮನೆಯವರು ಕುರಿ ಕಾಯ್ದಿದ್ದಾರಾ? ಅವರ ತಂದೆ ಎಸ್. ಆರ್. ಬೊಮ್ಮಾಯಿ ಶಾಸಕ, ವಿಧಾನ ಪರಿಷತ್‌ ಸದಸ್ಯ, ವಿಧಾನ ಸಭೆ ಪ್ರತಿಪಕ್ಷದ ನಾಯಕ, ಮುಖ್ಯಮಂತ್ರಿಯಾಗಿದ್ದರು. ಅವರ ಮಗನಾದ ಇವರು ಎಲ್ಲಿ ಕುರಿ ಕಾಯ್ದಿದ್ದಾರೆ? ಬಾಳು ಮಾಮಾನ ಕುರಿ ಕಾಯ್ದಿದ್ದಾಗಿ ಬೊಮ್ಮಾಯಿ ಕೇವಲ ಪ್ರಚಾರಕ್ಕಾಗಿ ಹೇಳುತ್ತಾರೆ ಎಂದರು.

ನಾನೂ ಕುರಿ ಮಂದೆಯಲ್ಲಿ ಮಲಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇವರ ತಂದೆಶಾಸಕ, ಮುಖ್ಯಮಂತ್ರಿ, ಪ್ರಧಾನಿಯಾಗಿದ್ದರು. ಇವರು ಎಲ್ಲಿ ಕುರಿ ಕಾಯ್ದಿದ್ದಾರೆ? ಹೇಳಿ ನೋಡೋಣ ಎಂದರು.

ನಾನು ಕಂಬಳಿ ನೇಯ್ದಿದ್ದೇನೆ ಎಂದು ಹೇಳಿಲ್ಲ. ನಾನು ಕಂಬಳಿ ನೇಯ್ದಿಲ್ಲ. ಕಂಬಳಿ ತಯಾರಿಸುವವರಿಗೆ ತುಪ್ಪಳ ನೀಡಿದ್ದೇವೆ. ಕುರಿ ತುಪ್ಪಟ ಕೊಟ್ಟಿದ್ದೇವೆ. ನಮ್ಮ ಮನೆಗೆ ಬಂದು ಕುರಿ ತುಪ್ಪಟ ತೆಗೆದುಕೊಂಡು ಕಂಬಳಿ ಕೊಡ್ತಿದ್ದರು. ನಾನೆಂದೂ ನೇಯ್ದಿಲ್ಲ. ಸುಳ್ಳು ಹೇಳಬಾರದು. ತುಪ್ಪಟ ತೆಗೆದುಕೊಳ್ಳುವವರು, ಕಂಬಳಿ ನೇಯುವವರು ಬೇರೆಯವರಿದ್ದಾರೆ. ನಾನು ಕುರಿ ಮೇಯ್ಸಿದ್ದೇನೆ ಅಷ್ಟೆ. ಇದು ಅವರಿಗೆ ಗೊತ್ತಾ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ಉಪ ಚುನಾವಣೆ ನಡೆಯುತ್ತಿರುವ ಸಿಂದಗಿಯಲ್ಲಿ ಬಿಜೆಪಿ ಸುನಾಮಿ ಅಲೆ ಇದೆ ಎಂಬ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಂದಗಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಬೊಮ್ಮಾಯಿ ಹೇಳಲಿ. ಎಂ. ಸಿ. ಮನಗೂಳಿ ಸಚಿವ, ಶಾಸಕರಾಗಿದ್ದಾಗ ಈ ಭಾಗವನ್ನುನೀರಾವರಿ ಮಾಡಿದ್ದಾರೆ, ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.ಸಿಂದಗಿಯಲ್ಲಿ ಕಾಂಗ್ರೆಸ್ ಪರ ಅಲೆಯಿದೆ ಎಂದರು.

ಬಿಜೆಪಿಯವರಿಗೆ ಸಾಧನೆ ಹೇಳಿಕೊಳ್ಳಲು ಯಾವುದೇ ಯೋಜನೆಗಳಿಲ್ಲ. ಕಳೆದ ಎರಡು ವರ್ಷದಿಂದ ಏನು ಸಾಧನೆ ಮಾಡಿದ್ದೇವೆ ಎಂದು ಹೇಳಲು ಆಗುತ್ತಿಲ್ಲ ಎಂದರು.

ಕೇಂದ್ರ ಸರ್ಕಾರ ಜನವಿರೋಧಿಯಾಗಿದೆ. ಬೆಲೆ ಏರಿಕೆ ಗಗನಕ್ಕೇರಿದೆ. ಕರ್ನಾಟಕ ಮತ್ತು ದೇಶದಲ್ಲಿ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ಜನರು ಬಿಜೆಪಿಗೆ ಶಾಪ ಹಾಕುತ್ತಿದ್ದಾರೆ ಎಂದರು.

ಎರಡೂ ಕಡೆ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಇದೆ. ಜೆಡಿಎಸ್ ಸ್ಪರ್ಧೆಯಲ್ಲಿ ಇಲ್ಲ. ಅಲ್ಪಸಂಖ್ಯಾತರು ಬುದ್ದಿವಂತರಿದ್ದಾರೆ. ಜಾತ್ಯತೀತ ಪಕ್ಷ ಅಲ್ಲ ಎಂಬುದು ಅವರಿಗೆ ಗೊತ್ತಿದೆ. ಸಂವಿಧಾನ ಉಳಿಸುವ ಪಕ್ಷಕ್ಕೆ ಅವರು ಮತ ಹಾಕುತ್ತಾರೆ. ಕೋಮುವಾದಿಗಳ ಜೊತೆ ಕೈ ಜೋಡಿಸುವವರಿಗೆ ಅವರು ವೋಟ್‌ ಹಾಕುವುದಿಲ್ಲ ಎಂದು ಹೇಳಿದರು.

ಶಾಸಕರಾದ ಎಂ. ಬಿ. ಪಾಟೀಲ, ಭೀಮಾ ನಾಯಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT