ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ ಅತ್ಯಾಚಾರ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ: ಸಿದ್ದರಾಮಯ್ಯ ಆರೋಪ

Last Updated 1 ಸೆಪ್ಟೆಂಬರ್ 2021, 19:49 IST
ಅಕ್ಷರ ಗಾತ್ರ

ಮೈಸೂರು: ‘ಲಲಿತಾದ್ರಿಪುರ ಗುಡ್ಡದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕಲು ಪ್ರಯತ್ನಿಸಿತ್ತು. ಗೃಹಸಚಿವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

‘ಘಟನೆ ಕುರಿತು ರಾತ್ರಿ 9.30ಕ್ಕೆ ಮಾಹಿತಿ ದೊರಕಿದ್ದರೂ ಸುಮಾರು 15 ಗಂಟೆಗಳಷ್ಟು ತಡವಾಗಿ ಪ್ರಕರಣ ದಾಖಲಿ
ಸಲಾಗಿದೆ. ಹೇಳಿಕೆ ಪಡೆಯದೇ ಸಂತ್ರಸ್ತೆಯನ್ನು ಕಳುಹಿಸಿದ್ದು ಅನುಮಾನಗಳನ್ನು ಮೂಡಿಸುತ್ತದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

‘ಹೇಳಿಕೆ ನೀಡುವಂತೆ ಸಂತ್ರಸ್ತೆಯ ಮನವೊಲಿಸಲು ಪ್ರಯತ್ನಿಸಲಿಲ್ಲ. ಮ್ಯಾಜಿಸ್ಟ್ರೇಟ್‌ ಮುಂದೆ ಹೇಳಿಕೆ ದಾಖಲಿಸುವ ಅವಕಾಶವನ್ನೂ ನಿರ್ಲಕ್ಷ್ಯಿಸಿದರು. ಹೇಳಿಕೆ ಪಡೆಯಬೇಡಿ ಎಂದು ಸರ್ಕಾರವೇ ಹೇಳಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದರು.

‘ಘಟನೆಯ ಕುರಿತು ಮಾಹಿತಿ ಪಡೆಯಲು ಮೈಸೂರಿಗೆ ಬಂದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಸುತ್ತಾಟದಲ್ಲೇ ಕಾಲ ಕಳೆದರು. ಮಧ್ಯರಾತ್ರಿಯಲ್ಲೂ ಮಹಿಳೆಯರು ಏಕಾಂಗಿಯಾಗಿ ನಿರ್ಭಯವಾಗಿ ನಡೆದಾಡುವಂತಿರಬೇಕು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರೆ, ಗೃಹಸಚಿವರು ಹುಡುಗಿ ಅಲ್ಲಿಗೆ ಹೋಗಿದ್ದೇ ತಪ್ಪು ಎಂಬ ಬಾಲಿಶ ಹೇಳಿಕೆ ನೀಡಿದರು’ ಎಂದು ವಿಷಾದಿಸಿದರು.

ಮಾತಿನ ನಡುವೆ, ಸಂತ್ರಸ್ತೆಯ ಸ್ನೇಹಿತನ ಹೆಸರನ್ನು ಅಪ್ರಜ್ಞಾಪೂರ್ವಕವಾಗಿ ಹೇಳಲೆತ್ನಿಸಿದ ಅವರನ್ನು ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ಹಾಗೂ ಶಾಸಕ ತನ್ವೀರ್‌ಸೇಠ್ ತಡೆದರು.

ಇನ್‌ಸ್ಪೆಕ್ಟರ್‌ಗೆ ತರಾಟೆ: ಸುದ್ದಿಗೋಷ್ಠಿಗೂ ಮುನ್ನ, ಅತ್ಯಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಆಲನಹಳ್ಳಿ ಇನ್‌ಸ್ಪೆಕ್ಟರ್ ರವಿಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.

‘ರಿಂಗ್‌ರಸ್ತೆಗೂ ಘಟನಾ ಸ್ಥಳಕ್ಕೂ ಎಷ್ಟು ದೂರವಿದೆ ಎಂದು ನ್ಯಾಯಾಲಯದಲ್ಲಿ ಕೇಳಿದರೆ ಏನು ಹೇಳುತ್ತೀರಿ’ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ ಅವರು, ‘ನಿರಂತರವಾದ ಗಸ್ತು ನಡೆದಿದ್ದರೆ ಅಪರಾಧ ನಡೆಯುತ್ತಿರಲಿಲ್ಲ. ಗಸ್ತು ವಾಹನ ಕೊಟ್ಟಿರೋದೂ ಪೂಜೆ ಮಾಡಕ್ಕಲ್ಲ’ ಎಂದೂ ಬೈಯ್ದರು.

ಪೊಲೀಸರಿಗೆ ಬಹುಮಾನ; ಆಕ್ಷೇಪ
‘ಸಾಮೂಹಿಕ ಅತ್ಯಾಚಾರ ನಡೆದಿದ್ದರೂ ಪೊಲೀಸರಿಗೆ ಬಹುಮಾನ ಘೋಷಿಸಿದ್ದು ಸರಿಯಲ್ಲ’ ಎಂದು ಸಿದ್ದರಾಮಯ್ಯ ಆಕ್ಷೇಪಿಸಿದರು.

‘ಆರೋಪಿಗಳನ್ನು ಬಂಧಿಸುವುದು ಪೊಲೀಸರ ಕರ್ತವ್ಯ. ಅವರೇನಾದರೂ ಅತ್ಯಾಚಾರವನ್ನು ತಡೆದಿದ್ದರೆ ಬಹುಮಾನ ನೀಡಬಹುದಿತ್ತು. ಪೊಲೀಸರಿಗೆ ಅಂತಹದ್ದೊಂದು ಜಾಗವಿದೆ ಎಂದೇ ಗೊತ್ತಿರಲಿಲ್ಲ. ಆ ಸ್ಥಳ ಯಾರದ್ದು ಎಂಬ ವಿವರವನ್ನು ಇನ್ನೂ ಸಂಗ್ರಹಿಸಿಲ್ಲ. ಹಣ ಕೊಟ್ಟು ವರ್ಗಾವಣೆ ಮಾಡಿಸಿಕೊಂಡು ಬಂದ ಪೊಲೀಸರಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT