ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಮೂಲಭೂತ ಹಕ್ಕಿನ ಉಲ್ಲಂಘನೆ: ಸಿದ್ದರಾಮಯ್ಯ

Last Updated 4 ಫೆಬ್ರುವರಿ 2022, 17:53 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಿಸದಂತೆ ತಡೆಯುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ಧರಿಸಬಾರದು ಎಂಬ ನಿಯಮವೇ ಇಲ್ಲ. ಈಗ ಕೆಲವು ಕಾಲೇಜುಗಳ ಪ್ರಾಂಶುಪಾಲರು ಹಿಜಾಬ್ ಧರಿಸಿ ಬರುವವರಿಗೆ ತರಗತಿ ಕೊಠಡಿ ಪ್ರವೇಶಿಸದಂತೆ ತಡೆಯುತ್ತಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ' ಎಂದರು.

ಹಿಜಾಬ್ ಧರಿಸಿ ತರಗತಿಗೆ ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗ ಅದನ್ನು ವಿರೋಧಿಸುತ್ತಿರುವುದರ ಹಿಂದೆ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಕುಟಿಲ ಪ್ರಯತ್ನವಿದೆ ಎಂದರು.

ಹಿಜಾಬ್ ಧರಿಸಿ ಕಾಲೇಜಿಗೆ ಬರಬಾರದು ಎಂದು ಹೇಳಲು ಶಾಸಕ ರಘುಪತಿ ಭಟ್ ಯಾರು? ಈ ರೀತಿಯ ಕ್ರಮ ಕೈಗೊಂಡಿರುವ ಪ್ರಾಂಶುಪಾಲರ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು. ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

‘ಹಿಜಾಬ್‌ ಸಂಘರ್ಷ ಎಂಬುದೇ ಇಲ್ಲ’

‘ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಶಾಲೆ, ಕಾಲೇಜಿಗೆ ಬರುವ ವಿಚಾರದಲ್ಲಿ ಸಂಘರ್ಷ ಎಂಬುದೇ ಇಲ್ಲ. ಉಡುಪಿಯಲ್ಲಿ ಕೆಲವರು ದುರುದ್ದೇಶದಿಂದ ಆ ರೀತಿ ಮಾಡುತ್ತಿದ್ದಾರೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕರಾವಳಿಯ ನೂರಾರು ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ತರಗತಿಗಳಿಗೆ ಹೋಗುತ್ತಿದ್ದಾರೆ. ಹಿಜಾಬ್‌ ಎಂದರೆ ತಲೆಗೂದಲು ಮುಚ್ಚಿಕೊಳ್ಳುವ ವಸ್ತ್ರ. ಅದನ್ನು ಎಲ್ಲ ವರ್ಗದವರೂ ಧರಿಸುತ್ತಾರೆ’ ಎಂದರು.

‘ರಾಜಕೀಯಕ್ಕೆ ವಿದ್ಯಾರ್ಥಿಗಳ ಬಳಕೆ’

‘ಹಿಜಾಬ್‌ ವಿಚಾರವನ್ನು ಮುಂದಿಟ್ಟುಕೊಂಡು ಕೆಲವರು ರಾಜಕೀಯ ಮಾಡು
ತ್ತಿದ್ದಾರೆ.ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣ ಪಡೆಯಲು ಬರುವ ಮಕ್ಕಳನ್ನೂ ರಾಜಕೀಯಕ್ಕೆ ಬಳಸಿಕೊಳ್ಳು
ತ್ತಿರುವುದು ದುರದೃಷ್ಟಕರ’ಎಂದು ಕಾಂಗ್ರೆಸ್‌ ಶಾಸಕ ಬಿ.ಜೆಡ್‌.ಜಮೀರ್‌ ಅಹಮ್ಮದ್ ಖಾನ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹಿಜಾಬ್‌ ಧಾರಣೆ ಈಗಿನಿಂದ ಆರಂಭವಾದುದಲ್ಲ. ಬಹಳ ಹಿಂದಿನಿಂದಲೂ ಇದೆ. ಬ್ರಿಟಿಷರ ಕಾಲದಿಂದಲೂ ಇತ್ತು. ಉಡುಪಿ ಕಾಲೇಜೊಂದರಲ್ಲಿ ರಾಜಕೀಯ ಕಾರಣಕ್ಕೆ ಆರಂಭವಾದ ವಿರೋಧ ಈಗ ಎಲ್ಲ ಕಡೆಯೂ ಹರಡುತ್ತಿದೆ’ ಎಂದರು.

‘ಬಹಿರಂಗ ಚರ್ಚಿಸುವ ವಿಚಾರವಲ್ಲ’

‘ಹಿಜಾಬ್‌ ಧಾರಣೆ ವಿಷಯದಲ್ಲಿ ಮಕ್ಕಳು, ಧಾರ್ಮಿಕ ಆಚರಣೆಯಂತಹ ಸೂಕ್ಷ್ಮ ವಿಚಾರಗಳು ಅಡಗಿವೆ. ಇದು ಬಹಿರಂಗವಾಗಿ ಚರ್ಚಿಸುವ ವಿಚಾರವಲ್ಲ. ಈ ಕುರಿತು ಒಂದು ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಈ ಕುರಿತು ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಮೊದಲಿನಿಂದ ಆಚರಿಸಿಕೊಂಡು ಬಂದ ಪದ್ಧತಿ, ಸಂಸ್ಕೃತಿ, ಇತಿಹಾಸ, ಕಾನೂನು ಎಲ್ಲವನ್ನೂ ಚರ್ಚಿಸಬೇಕಾಗಿದೆ. ಈ ವಿಚಾರವನ್ನು ಗಮನಿಸುತ್ತಿದ್ದೇನೆ. ಈ ಕುರಿತು ಸ್ಥಳೀಯ ನಾಯಕರ ಜತೆಗೂ ಚರ್ಚಿಸಬೇಕಾಗಿದೆ’ ಎಂದರು.

ನ್ಯಾಯಾಲಯ ಮಧ್ಯ ಪ್ರವೇಶಿಸಿರುವುದರಿಂದ ಪಕ್ಷದ ಅಧ್ಯಕ್ಷನಾಗಿ ತಾವು ಮಾತನಾಡುವುದು ಸರಿಯಾಗುವುದಿಲ್ಲ. ಎಲ್ಲರಿಗೂ ಅವರದ್ದೇ ಆದ ಜೀವನ ಪದ್ಧತಿ, ಸಂಸ್ಕೃತಿ ಇರುವ ಕುರಿತು ಚರ್ಚೆ ಆಗಬೇಕಿದೆ ಎಂದು ಹೇಳಿದರು.

‘ಇಂತಹ ಘಟನೆಗಳು ತಪ್ಪು’

‘ಹಿಜಾಬ್‌ ಧಾರಣೆಗೆ ವಿರೋಧಿಸುವಂತಹ ಘಟನೆಗಳು ತಪ್ಪು’ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಂಭ್ರಮಿಸುವ ದೇಶ. ಈ ನಾಡಿನಲ್ಲಿ ಇಂತಹ ಘಟನೆಗಳು ಸರಿಯಲ್ಲ. ಧರ್ಮದ ಹೆಸರಿನಲ್ಲಿ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿ, ವಿಭಜನೆಗೆ ಪ್ರಯತ್ನಿಸಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT