ಗುರುವಾರ , ಅಕ್ಟೋಬರ್ 1, 2020
24 °C
ಸಮಗ್ರ ಮಾಹಿತಿ ಒದಗಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಪತ್ರ

ಕ್ರಿಮಿನಲ್‌ ಮೊಕದ್ದಮೆ ಹಿಂದೆಗೆತ: ಮಾಹಿತಿ ಕೋರಿದ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಮೊಕದ್ದಮೆಗಳನ್ನು ವಿಚಾರಣೆಯಿಂದ ಹಿಂದಕ್ಕೆ ಪಡೆದಿರುವ ಕುರಿತ ಸಮಗ್ರ ಮಾಹಿತಿ ಒದಗಿಸುವಂತೆ ಕೋರಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಗೃಹ ಸಚಿವರಿಗೆ ಶನಿವಾರ ಎರಡು ಪ್ರತ್ಯೇಕ ಪತ್ರಗಳನ್ನು ಬರೆದಿರುವ ಸಿದ್ದರಾಮಯ್ಯ, 2009ರಿಂದ ಈವರೆಗೆ ವಿಚಾರಣೆ ಮತ್ತು ತನಿಖೆಯಿಂದ ಹಿಂದಕ್ಕೆ ಪಡೆದಿರುವ ರಾಜಕೀಯ ವ್ಯಕ್ತಿಗಳು ಹಾಗೂ ವಿವಿಧ ಸಂಘಟನೆಗಳಿಂದ ಸಂಬಂಧಿಸಿದ ಎಲ್ಲ ಪ್ರಕರಣಗಳ ಮಾಹಿತಿ ಒದಗಿಸುವಂತೆ ಕೋರಿದ್ದಾರೆ. ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ವಿಚಾರಣೆಯಿಂದ ಹಿಂದಕ್ಕೆ ಪಡೆಯಲು ಮತ್ತು ರದ್ದು ಮಾಡಲು ತೀರ್ಮಾನಿಸಿರುವ ಪ್ರಕರಣಗಳ ಮಾಹಿತಿಯನ್ನೂ ಒದಗಿಸುವಂತೆ ಕೇಳಿದ್ದಾರೆ.

ಸಂಘಟನೆಗಳ ಹೆಸರು, ಆರೋಪಿತರ ಹೆಸರು, ಘಟನೆಯ ವಿವರ, ಪ್ರಕರಣ ದಾಖಲಿಸಲಾದ ಸೆಕ್ಷನ್‌, ಪ್ರಕರಣ ಹಿಂಪಡೆದ ದಿನಾಂಕ ಮತ್ತು ಆದೇಶ, ಹಿಂಪಡೆಯಲು ಕಾರಣ, ಈ ಸಂಬಂಧ ಕಾನೂನು ಇಲಾಖೆಯ ಹಾಗೂ ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ಹಾಗೂ ಷರಾವನ್ನು ಒಳಗೊಂಡ ಮಾಹಿತಿ ಒದಗಿಸುವಂತೆ ಕೋರಿದ್ದಾರೆ. ಇದೇ ಮಾದರಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಪ್ರಕರಣಗಳ ಬಗ್ಗೆಯೂ ಮಾಹಿತಿ ನೀಡುವಂತೆ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೂ ಎರಡು ಪ್ರತ್ಯೇಕ ಪತ್ರಗಳನ್ನು ಬರೆದಿರುವ ಸಿದ್ದರಾಮಯ್ಯ, ಕ್ರಿಮಿನಲ್‌ ಪ್ರಕರಣ ಹಿಂಪಡೆದಿರುವ ಕುರಿತು ಮಾಹಿತಿ ಒದಗಿಸುವಂತೆ ಕೋರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು