ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದೆ ಜೈಲಿಗೆ ಹೋಗುವ ಸರದಿ ಸಿದ್ದರಾಮಯ್ಯ ಅವರದು: ನಳಿನ್‌ ಕುಮಾರ್‌

‘ಬೂತ್‌ ವಿಜಯ’ ಅಭಿಯಾನಕ್ಕೆ ಚಾಲನೆ: ಕಾಂಗ್ರೆಸ್‌ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಾಗ್ದಾಳಿ
Last Updated 2 ಜನವರಿ 2023, 9:47 IST
ಅಕ್ಷರ ಗಾತ್ರ

ಮಂಗಳೂರು: ‘ಕಾಂಗ್ರೆಸ್‌ ಪಕ್ಷವು ಕೆಂಪಣ್ಣ ಅವರನ್ನು ಬುಟ್ಟಿಗೆ ಹಾಕಿಕೊಂಡು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್ ಆರೋಪ ಮಾಡಿತು. ಆಧಾರರಹಿತ ಆರೋಪ ಮಾಡಿದ ಕೆಂಪಣ್ಣ ಜೈಲು ಸೇರಿದ್ದಾರೆ. ಜೈಲಿಗೆ ಹೋಗುವ ಮುಂದಿನ ಸರದಿ ಸಿದ್ದರಾಮಯ್ಯ ಅವರದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಹೇಳಿದರು.

ಬಿಜೆಪಿ ವತಿಯಿಂದ ಏರ್ಪಡಿಸಿರುವ ‘ಬೂತ್‌ ವಿಜಯ’ ಅಭಿಯಾನಕ್ಕೆ ಇಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಮಹಾಭ್ರಷ್ಟರು ಎಂದು ನಾನೂ ಆರೋಪ ಮಾಡುತ್ತೇನೆ. ಡಿ.ಕೆ.ಶಿ ಅವರು ಈಗಾಗಲೇ ಜೈಲಿಗೆ ಹೋಗಿದ್ದಾರೆ. ಸಿದ್ದರಾಮಯ್ಯ ಅವರೂ ಮುಂದಿನ ಚುನಾವಣೆ ಒಳಗೆ ಜೈಲಿಗೆ ಹೋಗಲಿದ್ದಾರೆ’ ಎಂದರು.

‘ಬಿಜೆಪಿ ಸರ್ಕಾರದ ವಿರುದ್ಧ 40 ಪೆರ್ಸೆಂಟ್‌ ಕಮಿಷನ್‌ ಆರೋಪ ಮಾಡಿದ ಹಾಗೂ ಪೇಸಿಎಂ ಅಭಿಯಾನ ನಡೆಸಿದ ಕಾಂಗ್ರೆಸ್‌ ಪಕ್ಷವು ವಿಧಾನಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಚಕಾರ ಎತ್ತಲಿಲ್ಲ. ದಾಖಲೆ ಸಮೇತ ಲೋಕಾಯುಕ್ತಕ್ಕೂ ದೂರು ನೀಡಲಿಲ್ಲ. ಈಗಲೂ ದಾಖಲೆ ಸಮೇತ ದೂರು ನೀಡಬಹುದು. ಸರ್ಕಾರದ ಯಾವುದೇ ಮಂತ್ರಿ ಅಕ್ರಮ ನಡೆಸಿದ್ದರೂ ಅವರನ್ನು ಕಿತ್ತು ಹಾಕಲು ಸಿದ್ಧರಿದ್ದೇವೆ’ ಎಂದರು.

‘ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿಗೆ ಭಯೋತ್ಪಾದನೆಯ ನಂಟು ಇದೆ ಎಂದು ಹೇಳಿದ್ದು ರಾಜ್ಯದ ಪೊಲೀಸ್‌ ಮಹಾ ನಿರ್ದೇಶಕರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯೇ (ಎನ್‌ಐಎ) ಹೊರತು ಬಿಜೆಪಿ ಅಲ್ಲ. ಆದರೆ, ಭಯೋತ್ಪಾದಕರನ್ನು ಬೆಂಬಲಿಸುವ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷರು ನೀಡಿದರು. ಅವರಿಗೆ ಬೆಳಗಾವಿಯ ಕುಕ್ಕರ್‌ ಹಾಗೂ ಮಂಗಳೂರಿನ ಕುಕ್ಕರ್‌ ಮೇಲೆ ತುಂಬಾ ಪ್ರೀತಿ. ಬೆಳಗಾವಿಯ ಕುಕ್ಕರ್‌ ಒಡೆದರೆ ಅವರ ಮನೆ ಒಡೆಯುತ್ತದೆ. ಮಂಗಳೂರಿನ ಕುಕ್ಕರ್‌ ಒಡೆದರೆ ದೇಶವೇ ಒಡೆಯುತ್ತದೆ’ ಎಂದರು.

‘ಪ್ರವೀಣ್‌ ನೆಟ್ಟಾರು ಹತ್ಯೆಯಿಂದಾಗಿ ಆಪ್ತ ಮಿತ್ರನನ್ನು ಕಳೆದುಕೊಂಡೆ. ದೇಶದಲ್ಲಿ ಅಮಿತ್‌ ಶಾ ಅವರಂತಹ ಗೃಹಸಚಿವರಿದ್ದ ಕಾರಣಕ್ಕೆ ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳೇ ನಿಷೇಧಗೊಂಡವು. ಒಂದು ವೇಳೆ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇರುತ್ತಿದ್ದರೆ ಪಿಎಫ್‌ಐ, ಕೆಎಫ್‌ಡಿ ಕಾರ್ಯಕರ್ತರು ಮನೆ ಮನೆಗೆ ನುಗ್ಗಿ ಸರಣಿ ಹತ್ಯೆ ನಡೆಸುತ್ತಿದ್ದರು. ಮೋನಪ್ಪ ಭಂಡಾರಿ, ಶಾಸಕ ವೇದವ್ಯಾಸ ಕಾಮತ್‌, ಹರೀಶ್‌ ಅವರಂತಹವರು ಈ ಸಭೆಯಲ್ಲಿ ಇರುತ್ತಿರಲಿಲ್ಲ. ಅಂತಹ ಸಂಘಟನೆಯ ನಿಷೇಧ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ’ ಎಂದರು.

‘ದೇಶದಲ್ಲಿ ಭಯೋತ್ಪಾದನೆ ಇರಬೇಕೋ, ರಾಷ್ಟ್ರವಾದ ಇರಬೇಕೋ? ರಾಜ್ಯದಲ್ಲಿ ಟಿಪ್ಪು ಸುಲ್ತಾನ್‌ಗೆ ಗೌರವ ಸಲ್ಲಬೇಕೋ, ವೀರ ಸಾವರ್ಕರ್‌ ಅವರಿಗೆ ಗೌರವ ಸಲ್ಲಬೇಕೋ’ ಎಂದು ಅವರು ಸಭಿಕರನ್ನು ಪ್ರಶ್ನಿಸಿದರು.

‘ಶಾಲೆಗೆ ಹೋದ ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳಬೇಕಾದರೆ, ನಿಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕಾದರೆ ‘ಲವ್‌ ಜಿಹಾದ್‌’ ನಿಲ್ಲಬೇಕು. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮತಾಂತರ ನಿಷೇಧ, ಗೋಹತ್ಯೆ ನಿಷೇಧದಂತಹ ಕಾನೂನುಗಳನ್ನು ಜಾರಿಗೊಳಿಸಿದೆ. ಲವ್ ಜಿಹಾದ್‌ ತಡೆಯುವ ಕುರಿತೂ ಕಾನೂನು ರೂಪಿಸಲಿದೆ’ ಎಂದರು.

‘ ಭಯೋತ್ಪಾದನೆಗೆ ಇನ್ನೊಂದು ಹೆಸರೇ ಕಾಂಗ್ರೆಸ್‌. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದನೆ ಚಟುವಟಿಕೆ ಗರಿಗೆದರಲಿದೆ. ನಮ್ಮ ರಾಜ್ಯದಲ್ಲೂ ಗೋಹತ್ಯೆ ನಿಷೇದ, ಮತಾಂತರ ನಿಷೇಧ ಕಾಯ್ದೆಗಳು ರದ್ದಾಗಲಿವೆ. ಕರ್ನಾಟಕದಲ್ಲೂ ಭಯೋತ್ಪಾದಕ ಚಟುವಟಿಕೆ ಮತ್ತೆ ಆರಂಭವಾಗಲಿದೆ. ನವಕರ್ನಾಟಕ ಬೇಕೋ, ಭಯೋತ್ಪಾದನೆ ಚಟುವಟಿಕೆಗಳಿಂದ ಕೂಡಿದ ಕರ್ನಾಟಕ ಬೇಕೋ’ ಎಂದು ಅವರು ಪ್ರಶ್ನಿಸಿದರು.

‘ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಆ ಪಕ್ಷವು ಒಡೆದ ಮನೆಯಂತಾಗಿದ್ದು, ಮೂರು ಭಾಗಗಳಾಗಿದೆ. ನಾನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷನಾದ ಬಳಿಕ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದೇನೆ. ಮನೆ– ಮನಗಳನ್ನು ಜೋಡಿಸಿ ಎಲ್ಲ ಕಡೆ ಕಮಲ ಅರಳಿಸುವ ಕೆಲಸ ಮಾಡಿದ್ದೇನೆ’ ಎಂದರು.

‘ವಿಜಯಪುರ, ಬೀದರ್‌, ಕಲಬುರ್ಗಿಯಂತಹ ಕಡೆಗಳಲ್ಲೂ ಪಕ್ಷದವು ಗಟ್ಟಿಯಾಗಿದೆ. ಕಲಬುರ್ಗಿಯ ಪಾಲಿಕೆ ಚುನಾವಣೆಯಲ್ಲೂ ಈಚೆಗೆ ಕಮಲ ಅರಳಿದೆ. ಅಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಅಂಗಡಿ ಬಂದ್‌ ಆಗಿದೆ. ಹಾಗಾಗಿ ಪ್ರಿಯಾಂಕ್‌ ಖರ್ಗೆ ಬಾಯಿ ಓಪನ್‌ ಆಗಿದೆ’ ಎಂದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಮಾನಾಥ ರೈ, ಯು.ಟಿ.ಖಾದರ್‌ ಹಾಗೂ ಜೆ.ಆರ್‌.ಲೋಬೊ ಅವರು ಮಂತ್ರಿಯಾಗಲು ಈಗಲೇ ಸೂಟು ಹೊಲಿಸಿದ್ದಾರೆ. ಆದರೆ, ಜಿಲ್ಲೆಯ ಎಂಟೂ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಮುಂದಿನ 15 ವರ್ಷ ನೀವು ಅಂತಹ ಕನಸು ಕಾಣಲು ಅವಕಾಶ ಇಲ್ಲ. ಜಿಲ್ಲೆಯ ಶೇ 80ರಷ್ಟು ಮನೆಗಳಲ್ಲೂ ಬಿಜೆಪಿಯ ಬಾವುಟ ಅರಳಲಿದೆ. ಕಾಂಗ್ರೆಸ್‌ಗೆ ಜಿಲ್ಲೆಯ ಒಂದು ಬೂತ್‌ನಲ್ಲೂ ಒಬ್ಬನೇ ಒಬ್ಬ ಹಿಂದೂ ಕಾರ್ಯಕರ್ತರು ಸಿಗುವುದಿಲ್ಲ’ ಎಂದರು.

‘ಪಕ್ಷಕ್ಕೆ ಬಹುಮತ ಸಿಕ್ಕಿದರೆ ಸಾಲದು, ಶಾಶ್ವತ ಅಧಿಕಾರ ಬೇಕು. ಬೂತ್‌ ಮಟ್ಟದಲ್ಲೇ ವಿಜಯ ಯಾತ್ರೆ ಆರಂಭಿಸಿ ಅದನ್ನು ಸಾಧಿಸಬೇಕು’ ಎಂದರು.

ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಶಾಸಕ ಡಿ.ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ವಿಭಾಗದ ಪ್ರಭಾರಿ ಉದಯ್‌ ಕುಮಾರ್‌ ಶೆಟ್ಟಿ, ಸಹಪ್ರಭಾರಿ ರಾಜೇಶ್‌ ಕಾವೇರಿ ಇದ್ದರು.

‘ನಗರದ 123ನೇ ಬೂತ್‌ನ ಬಿಜೆಪಿ ಘಟಕದ ಅಧ್ಯಕ್ಷ ದೇವದಾಸ ನಾಗರಮಠ ಅವರ ಮನೆಯಲ್ಲಿ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ‘ಬೂತ್‌ ವಿಜಯ ಅಭಿಯಾನ’ಕ್ಕೆ ನಳಿನ್‌ ಕುಮಾರ್ ಕಟೀಲ್‌ ಚಾಲನೆ ನೀಡಿದರು.

‘ನಳಿನ್‌, ಯಡಿಯೂರಪ್ಪ.. ಯಾರೂ ಪಕ್ಷಕ್ಕೆ ಮುಖ್ಯವಲ್ಲ’

‘ನಮ್ಮ ಪಕ್ಷದಲ್ಲಿ ದೇವದುರ್ಲಭ ಎನಿಸಿಕೊಂಡ ಕಾರ್ಯಕರ್ತರ ಪಡೆ ಇದೆ. ಅವರಿಂದಾಗಿಯೇ ಪಕ್ಷ ಈ ಮಟ್ಟಕ್ಕೆ ಬೆಳೆದಿದೆ. ಪಕ್ಷಕ್ಕೆ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ವೇದವ್ಯಾಸ ಕಾಮತ್‌, ಪ್ರತಾಪಸಿಂಹ ನಾಯಕ್‌, ಯಡಿಯೂರಪ್ಪ.. ಯಾರೂ ಮುಖ್ಯವಲ್ಲ. ನಾವು ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಿಲ್ಲ ಜಗದ್ವಂದ್ಯ ಭಾರತವನ್ನು ನಿರ್ಮಿಸುವುದೇ ನಮ್ಮ ಗುರಿ’ ಎಂದು ನಳಿನ್‌ ಕುಮಾರ್‌ ಹೇಳಿದರು.

ಟಿಕೆಟ್‌ ಬೇಕೋ ಬೇಡವೋ: ವೇದವ್ಯಾಸ್ ಕಾಮತ್‌ಗೆ ನಳಿನ್‌ ಪ್ರಶ್ನೆ

‘ವಿಧಾನ ಸಭೆಯಲ್ಲಿ ನಿಮಗೆ ಮತ್ತೆ ಟಿಕೆಟ್‌ ಕೊಡಬೇಕೋ ಬೇಡವೋ. ಬೇರೆ ಜನ ರೆಡಿ ಇದ್ದಾರೆ’ ಎಂದು ನಳಿನ್‌ ಕುಮಾರ್ ಕಟೀಲ್‌ ಅವರು ಶಾಸಕ ವೇದವ್ಯಾಸ ಕಾಮತ್‌ ಅವರನ್ನು ಉದ್ದೇಶಿಸಿ ಕೇಳಿದರು.

‘ನೀವು ಕಾರ್ಯಕ್ರಮದ ಹೆಸರನ್ನೇ ಸರಿಯಾಗಿ ಹೇಳಿಲ್ಲ. ಇದು ಬೂತ್‌ ಸಶಕ್ತೀಕರಣ ಕಾರ್ಯಕ್ರಮ ಅಲ್ಲ. ಇದು ಬೂತ್‌ ವಿಜಯ ಅಭಿಯಾನ’ ಎಂದು ತರಾಟೆಗೆ ತೆಗೆದುಕೊಂಡರು.

‘ವೇದವ್ಯಾಸ್‌ ಕಾಮತ್‌ ಅವರು ಕೈಕೊಟ್ಟರೂ ಸುದರ್ಶನ ಅವರು ಕೈಕೊಡುವುದಿಲ್ಲ ಎಂಬ ವಿಶ್ವಾಸ ನನಗಿದೆ’ ಎಂದು ಮತ್ತೊಂದು ಸಂದರ್ಭದಲ್ಲಿ ಹೇಳುವ ಮೂಲಕ ಅಸಮಾಧಾನ ಹೊರಹಾಕಿದರು.

3 ವರ್ಷ ನಿದ್ದೆ ಮಾಡಿದಿರಿ: ಪಾಲಿಕೆ ಸದಸ್ಯರಿಗೆ ಚಾಟಿ

‘ಮೂರು ವರ್ಷ ನಿದ್ದೆ ಮಾಡಿದ್ದೀರಿ. ನಿದ್ದೆ ಸಾಕು. ಇನ್ನಾದರೂ ಪಕ್ಷ ಸಂಘಟನೆಯ ಕೆಲಸ ಮಾಡಿ. ಮನೆ ಮನೆಯನ್ನು ಸಂಪರ್ಕಿಸುವ ಕೆಲಸ ಮಾಡಿ’ ಎಂದು ನಳಿನ್‌ ಕುಮಾರ್‌ ಕಟೀಲ್‌ ಪಾಲಿಕೆ ಸದಸ್ಯರಿಗೆ ಚಾಟಿ ಬೀಸಿದರು.

‘ನಿಮ್ಮ ನಿಮ್ಮ ವಾರ್ಡ್‌ಗಳಲ್ಲಿ ನೀವು ಪಡೆದುದಕ್ಕಿಂತ ಹೆಚ್ಚು ಮತಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಸಿಗುವಂತೆ ಮಾಡಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT