ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಾಂತಿ ನಿರ್ಮಾಣಕ್ಕೆ ಪ್ರತಾಪ ಹೇಳಿಕೆ: ಸಿದ್ದರಾಮಯ್ಯ ಟೀಕೆ

Last Updated 15 ನವೆಂಬರ್ 2022, 7:11 IST
ಅಕ್ಷರ ಗಾತ್ರ

ಮೈಸೂರು: ‘ಚುನಾವಣೆಯಲ್ಲಿ ಮತಗಳ ಕ್ರೂಢೀಕರಣಕ್ಕೆ ಮತ್ತು ಅಶಾಂತಿ ಉಂಟು ಮಾಡುವುದಕ್ಕಾಗಿ ಬಿಜೆಪಿಯ ಸಂಸದ ಪ್ರತಾಪ ಸಿಂಹ ಹೇಳಿಕೆ ಕೊಡುತ್ತಿದ್ದಾರೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಬಸ್ ನಿಲ್ದಾಣದ ಮೇಲಿನ ಗುಂಬಜ್ ತೆರವುಗೊಳಿಸುವುದಾಗಿ ಪ್ರತಾಪ ನೀಡಿರುವ ಹೇಳಿಕೆಗೆ ಇಲ್ಲಿ ಮಂಗಳವಾರ ಖಾರವಾಗಿ ಪ್ರತಿಕ್ರಿಯಿಸಿದ ಅವರು, ‘ಗುಂಬಜ್ ಕೆಡವಲು ಅವನ್ಯಾವನ್ರೀ. ಸಂಸದನಾಗಿ ಸಾಮಾನ್ಯ ಜ್ಞಾನ ಬೇಡವೇ. ಅವರ ಮನೆ ದುಡ್ಡು ಹಾಕಿ ನಿಲ್ದಾಣ ಕಟ್ಟಿಸಿದ್ದಾರೆಯೇ, ಅಧಿಕಾರಿಗಳು ವಿನ್ಯಾಸ ಕೊಟ್ವಾಗ ಏನು ಮಾಡುತ್ತಿದ್ದಂತೆ. ಈಗ ಒಡೆಯುತ್ತೇನೆ ಎಂದರೆ ಏನರ್ಥ?’ ಎಂದು ಕೇಳಿದರು.

‘ಮೊಘಲರು ನಮ್ಮ ದೇಶವನ್ನು ಆಳುತ್ತಿದ್ದಾಗ ಇವರೆಲ್ಲಾ ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದರು.

‘ವಿನ್ಯಾಸ ಹೀಗೆಯೇ ಇರಬೇಕೆಂಬ ನಿಯಮ ಎಲ್ಲಿದೆ? ಗುಂಬಜ್ ರೀತಿ ಇರುವುದನ್ನೆಲ್ಲಾ ಒಡೆಯುತ್ತೀರಾ? ಬಿಜೆಪಿಯ ಈ ತಂತ್ರ ವರ್ಕ್ ಆಗೋಲ್ಲ. ದೇಶದ ಜನರು ಜ್ಯಾತ್ಯತೀತರು. ಜಾತಿ–ಧರ್ಮದ ವಿಚಾರವನ್ನು ಒಪ್ಪುವುದಿಲ್ಲ’ ಎಂದರು.

‘ಬಲವಂತದ ಮತಾಂತರಕ್ಕೆ ನನ್ನ ವಿರೋಧವಿದೆ. ಯಾರು ಯಾವ ಧರ್ಮ ಬೇಕಾದರೂ ಅನುಸರಿಸಬಹುದು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪರವಾಗಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

‘ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಿಂದ ಕೈಗೊಳ್ಳಲಿರುವ ಬಸ್ ಯಾತ್ರೆಗೆ ದಿನಾಂಕ‌ ನಿಗದಿಯಾಗಿಲ್ಲ. ಬಸ್ ತಯಾರಾಗುತ್ತಿದೆ. ಒಮ್ಮೆ ಕೋಲಾರಕ್ಕೆ ಹೋಗಿ ಬಸ್ ಪರೀಕ್ಷೆ ನಡೆಸಿದ್ದೇನೆ. ನಾನೊಂದು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒಂದು ತಂಡವಾಗಿ ಪ್ರಚಾರ ಮಾಡುತ್ತೇವೆ’ ಎಂದರು.

‘ಯಾತ್ರೆ ಆರಂಭಿಸಲು ಮುಹೂರ್ತ ನೋಡುವುದಿಲ್ಲ. ಎಲ್ಲ ಕಾಲವೂ ಒಳ್ಳೆಯದ್ದೇ. ಈ ತಿಂಗಳ ಕೊನೆಗೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ ಮಾಡಲಿದ್ದೇವೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಸೋಲಿಸಲು ಕಾಂಗ್ರೆಸ್‌ನವರೇ ಸಾಕು’ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ, ‘ಅವರಿವರ ಹೇಳಿಕೆಗೆ ಪ್ರತಿಕ್ರಿಯಿಸೋಲ್ಲ. ಕುಮಾರಸ್ವಾಮಿಯೋ, ಕಟೀಲೋ ಹೇಳಿದಂತೆ ಆಗುವುದಿಲ್ಲ. ಯಾರನ್ನು ಗೆಲ್ಲಿಸಬೇಕು ಎಂಬುದನ್ನು ನಿರ್ಧರಿಸುವವರು ಜನರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT