ಸೋಮವಾರ, ಆಗಸ್ಟ್ 15, 2022
27 °C
ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಿಂಬಿಸಲು ಆಪ್ತರ ಸಿದ್ಧತೆ

ಆಗಸ್ಟ್‌ 3ರಿಂದ ಕರ್ನಾಟಕದಾದ್ಯಂತ ತಿಂಗಳಿಡೀ ‘ಸಿದ್ದರಾಮೋತ್ಸವ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆ ಚುನಾವಣೆಗೆ 10 ತಿಂಗಳು ಬಾಕಿ ಇರುವಂತೆ, ಇಡೀ ರಾಜ್ಯದಲ್ಲಿ ‘ಸಿದ್ದರಾಮಯ್ಯ’ ಪರ ಅಲೆ ಸೃಷ್ಟಿಸಲು ಅವರ ಆಪ್ತ ಬಳಗ ಸದ್ದಿ ಲ್ಲದೆ ತಯಾರಿ ನಡೆಸಿದೆ. ತಿಂಗಳಿಡೀ ‘ಸಿದ್ದರಾಮೋತ್ಸವ’ ಹಮ್ಮಿಕೊಳ್ಳುವ ಮೂಲಕ ಮುಂದಿನ ‘ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಬಿಂಬಿಸಲು ಅಭಿಮಾನಿಗಳು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಇದೇ ಆಗಸ್ಟ್‌ನಲ್ಲಿ 75 ವರ್ಷ ತುಂಬಲಿದೆ. ಆ ಸಂಭ್ರಮವನ್ನು ಆಗಸ್ಟ್‌ 3ರಂದು
ದಾವಣಗೆರೆಯಲ್ಲಿ ಬೃಹತ್‌ ಸಮಾ ವೇಶದ ಮೂಲಕ ಆಚರಿಸಲು ‘ಸಿದ್ದರಾಮಯ್ಯ–75 ಅಭಿನಂದನಾ ಸಮಿತಿ’ ರೂಪುರೇಷೆ ಸಿದ್ಧಪಡಿಸಿದೆ. ಈ ಸಂಬಂಧ ಕಾಂಗ್ರೆಸ್‌ ನಾಯಕರಾದ ಆರ್‌.ವಿ. ದೇಶಪಾಂಡೆ, ಎಚ್‌.ಸಿ. ಮಹದೇವಪ್ಪ ಸೇರಿದಂತೆ ಹಲವರು ಜತೆಗೂಡಿ ಚರ್ಚೆ ನಡೆಸಿದ್ದಾರೆ.

ಈ ಸಮಾವೇಶಕ್ಕೆ 6 ಲಕ್ಷಕ್ಕೂ ಹೆಚ್ಚು ಮಂದಿ ಸೇರಿಸಲು ಸಿದ್ಧತೆ ನಡೆದಿದೆ. ಬೃಹತ್ ಶಕ್ತಿ ಪ್ರದರ್ಶನದ ಮೂಲಕ ಸ್ಪಷ್ಟ ಸಂದೇಶವೊಂದನ್ನು ರವಾನಿಸುವುದು ಸಿದ್ದರಾಮಯ್ಯ ಅವ ರಿಗೆ ಆಪ್ತರಾಗಿರುವ ಹಾಲಿ ಶಾಸಕರ, ಮಾಜಿ ಶಾಸಕರ ಲೆಕ್ಕಾಚಾರ. ಎಐಸಿಸಿ ನಾಯಕರಾದ ರಾಹುಲ್‌ ಗಾಂಧಿ, ಕೆ.ಸಿ. ವೇಣುಗೋಪಾಲ್‌, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಹೀಗೆ ರಾಜ್ಯದ ಎಲ್ಲ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ. ನಂತರದ ಒಂದು ತಿಂಗಳು (ಆಗಸ್ಟ್‌ 3ರಿಂದ ಸೆ. 3ರವರೆಗೆ) ರಾಜ್ಯದಾದ್ಯಂತ ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರವಾರು ‘ಸಿದ್ದರಾಮೋತ್ಸವ’ ಹಮ್ಮಿಕೊಳ್ಳಲು ಅವರ ಅಭಿಮಾನಿ ವರ್ಗ ನಿರ್ಧರಿಸಿದೆ. 

ಸಿದ್ದರಾಮಯ್ಯ ಕುರಿತ ಸಾಕ್ಷ್ಯ ಚಿತ್ರ ತಯಾರಿಸಿ ಪ್ರದರ್ಶಿಸಲು ಕೂಡಾ ಉದ್ದೇಶಿಸಲಾಗಿದೆ. ಸಮಾವೇಶಗಳು, ವಿಚಾರಸಂಕಿರಣಗಳು, ಛಾಯಾಚಿತ್ರಗಳ ಪ್ರದರ್ಶನಗಳ ಮೂಲಕ ಅವರ ಜನಪರ ಯೋಜನೆಗಳು, ಆಡಳಿತ ವೈಖರಿಯನ್ನು ರಾಜ್ಯಮಟ್ಟದಿಂದ ಹೋಬಳಿವರೆಗೆ ಪರಿಚಯಿಸಲಾಗುವುದು. ಆ ಮೂಲಕ, ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳಿಗೆ ನೀಡಿದ ಕೊಡುಗೆ ಗಳನ್ನು ನೆನಪಿಸುವುದು ಇದರ ಉದ್ದೇಶ ಎಂದು ಮೂಲಗಳು ಹೇಳಿವೆ.

 

ಪಕ್ಷಾತೀತ ಕಾರ್ಯಕ್ರಮ

‘ಸಿದ್ದರಾಮೋತ್ಸವ’ವನ್ನು ಪಕ್ಷಾತೀತವಾಗಿ ನಡೆಸಲು ಅವರ ಅಭಿಮಾನಿ ಸಮೂಹ ತೀರ್ಮಾನಿಸಿದೆ. ಪಕ್ಷದ ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಿಸುವುದಕ್ಕಿಂತ ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿದರೆ ಪಕ್ಷಕ್ಕೆ ಅನುಕೂಲ. ಅಲ್ಲದೆ, ಸಿದ್ದರಾಮಯ್ಯ ಅವರ ವರ್ಚಸ್ಸಿಗೂ ಮೆರುಗು ನೀಡಬಹುದು ಎನ್ನುವುದು ಅವರ ಅಭಿಮಾನಿಗಳ ಅಭಿಪ್ರಾಯ. ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ಕಾಂಗ್ರೆಸ್‌ನಲ್ಲಿ ಈಗಾಗಲೇ ತೀರ್ಮಾನಿಸಿದೆ. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವುವನ್ನು ಈಗಿನಿಂದಲೇ ಪರೋಕ್ಷವಾಗಿ ಬಿಂಬಿಸುವುದು ಇದರ ಹಿಂದಿನ ಒಳಗುಟ್ಟು ಎಂಬ ಚರ್ಚೆಯೂ ಕಾಂಗ್ರೆಸ್‌ ವಲಯದಲ್ಲಿ ನಡೆದಿದೆ.

ಕಾಂಗ್ರೆಸ್‌ ಪರ ಜನಾಭಿಪ್ರಾಯ?

ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯದಲ್ಲಿ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ಪಕ್ಷದ ಪರ ‘ಜನಾಭಿಪ್ರಾಯ’ ಇರುವುದು ವ್ಯಕ್ತವಾಗಿದೆ ಎಂದು ಆ ಪಕ್ಷದ ಮೂಲಗಳು ಹೇಳಿವೆ. ಕ್ಷೇತ್ರವಾರು ‘ಸಂಭವನೀಯ’ ಅಭ್ಯರ್ಥಿಯನ್ನು ಗುರುತಿಸಿ ನಡೆಸಿದ ಸಮೀಕ್ಷೆಯಲ್ಲಿ 102ರಿಂದ 122ರವರೆಗೆ ಸೀಟು ಸಿಗುವ ಸಾಧ್ಯತೆಯಿದೆ ಎಂದು ಗೊತ್ತಾಗಿದೆ. ಈ ವರದಿ ಬಗ್ಗೆ ರಾಜ್ಯ ನಾಯಕರು ಹೈಕಮಾಂಡ್‌ ನಾಯಕರ ಜೊತೆ ಚರ್ಚಿಸಿ, ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು