ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಗಂಡನಾಗಿ ನೆಮ್ಮದಿಯ ಬಾಳುವೆ...!

ಅಪ್ಪನ ಆಸೆಗೆ ಎಳ್ಳುನೀರು ಬಿಟ್ಟ ಮಗ
Last Updated 7 ಫೆಬ್ರುವರಿ 2023, 14:32 IST
ಅಕ್ಷರ ಗಾತ್ರ

ಬೆಂಗಳೂರು: ನಾಪತ್ತೆಯಾಗಿದ್ದ ಮಗನನ್ನು ಹುಡುಕಿಕೊಡುವಂತೆ ಕೋರಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದ 63 ವರ್ಷದ ವೃದ್ಧರೊಬ್ಬರ ಉದ್ದೇಶವನ್ನು ಪೊಲೀಸರು ಈಡೇರಿಸಿದರಾದರೂ ಮಗ ಮಾತ್ರ; ಕೋರ್ಟಿನಲ್ಲಿ, ‘ಅರ್ಜಿದಾರ ತಂದೆಯ ಜೊತೆಗೆ ಜೀವನ ನಡೆಸಲು ಒಲ್ಲೆ’ ಎಂದು ಕೈಕೊಡವಿದ ಪ್ರಸಂಗಕ್ಕೆ ಹೈಕೋರ್ಟ್‌ ಸಾಕ್ಷಿಯಾಗಿದೆ.

‘ವಯಸ್ಸಿಗೆ ಬಂದ ನನ್ನ ಮಗ ಕಾಣೆಯಾಗಿದ್ದಾನೆ. ಆತನನ್ನು ಪತ್ತೆ ಹಚ್ಚಲು ಪೊಲೀಸರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಉಡುಪಿ ಜಿಲ್ಲೆಯ ಹಿರಿಯ ನಾಗರಿಕೊಬ್ಬರು ಕಳೆದ ತಿಂಗಳ 16ರಂದು ಹೈಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಾಲಯದ ನಿರ್ದೇಶನದ ಅನುಸಾರ ಪೊಲೀಸರು ಅರ್ಜಿದಾರರ ಪುತ್ರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು, ‘ಅರ್ಜಿದಾರರ ಪುತ್ರ ಒಂದು ವರ್ಷ ಎಂಟು ತಿಂಗಳಿನಿಂದ ಪತ್ನಿಯ ಜೊತೆ ಬೆಂಗಳೂರಿನಲ್ಲಿದ್ದಾರೆ. ಈತ ಮದುವೆಯಾಗಿರುವ ಪತ್ನಿ ಇವರಿಗೀಗ ಮೂರನೇ ಗಂಡ. ಈ ಮೊದಲಿನ ಇಬ್ಬರು ಗಂಡಂದಿರಿಂದ ಆಕೆ ತಲಾ ಒಬ್ಬೊಬ್ಬರಂತೆ ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದಾರೆ. ಈ ಮೂವರ ಜೊತೆ ಅರ್ಜಿದಾರರ ಪುತ್ರ ವಾಸ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.

ಈ ಕುರಿತಂತೆ ನ್ಯಾಯಪೀಠವು ಪುತ್ರನ ಜೊತೆ ಕೆಲಕಾಲ ಸಮಾಲೋಚನೆ ನಡೆಸಿತು. ಆಗ ಆತ, ‘ನಾನು ಈಕೆಯನ್ನು (ಪತ್ನಿ) ಬಿಟ್ಟಿರಲಾರೆ ಮತ್ತು ಅವಳ ಈ ಮೊದಲಿನ ನಾಲ್ಕು ಮತ್ತು ಆರು ವರ್ಷದ ಇಬ್ಬರು ಗಂಡು ಮಕ್ಕಳೊಂದಿಗೇ ಮುಂದಿನ ಜೀವನ ನಡೆಸಲು ನಿಶ್ಚಯಿಸಿದ್ದೇನೆ’ ಎಂದು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ಉಮೇಶ್‌ ಎಂ.ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಈ ಅರ್ಜಿಯನ್ನು ಸಲ್ಲಿಸಿದ್ದ ಉದ್ದೇಶ ಈಡೇರಿದೆ. ಹೀಗಾಗಿ, ಇದರ ವಿಚಾರಣೆಯ ಮುಂದುವರಿಕೆ ಅಗತ್ಯವಿಲ್ಲ’ ಎಂದು ತಿಳಿಸಿ ವಿಲೇವಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT