ಮಂಗಳವಾರ, ಡಿಸೆಂಬರ್ 1, 2020
17 °C

ಕಾಲೇಜುಗಳ ಆರಂಭಕ್ಕೆ ಎಸ್‌ಒಪಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲೇಜು ವಿದ್ಯಾರ್ಥಿ–ಸಾಂದರ್ಭಿಕ ಚಿತ್ರ

ಬೆಂಗಳೂರು: ಪದವಿ, ಎಂಜಿನಿಯರಿಂಗ್‌ ಹಾಗೂ ಡಿಪ್ಲೊಮಾ ಕಾಲೇಜುಗಳ ತರಗತಿಗಳನ್ನು ಇದೇ 17ರಿಂದ ಆರಂಭಿಸುವ ಸಂಬಂಧ ಉನ್ನತ ಶಿಕ್ಷಣ ಇಲಾಖೆಯು ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಸೋಮವಾರ ಬಿಡುಗಡೆ ಮಾಡಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ತರಗತಿಗಳ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಎಸ್‌ಒಪಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಸೂಚನೆ ನೀಡಲಾಗಿದ್ದು, ಅವುಗಳ ಪ್ರಕಾರವೇ ತರಗತಿಗಳು ನಡೆಯುತ್ತವೆ. ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೂ ನಿಗದಿತ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ನಾತಕೋತ್ತರ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ: ಭೌತಿಕ ತರಗತಿಗಳನ್ನು 17ರಿಂದ ಪ್ರಾರಂಭಿಸಬೇಕು. ತರಗತಿಗಳಿಗೆ ಹಾಜರಾಗಲು ಸಿದ್ಧರಿರುವ ವಿದ್ಯಾರ್ಥಿಗಳ ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಭೌತಿಕ ತರಗತಿಗಳನ್ನು ನಡೆಸಬೇಕು. ಬೋಧನೆ, ಪ್ರಯೋಗಾಲಯ ಮತ್ತು ಪ್ರಾಜೆಕ್ಟ್ ತರಗತಿಗಳನ್ನು ಅವಶ್ಯಕವಿದ್ದಲ್ಲಿ ಪಾಳಿ ವ್ಯವಸ್ಥೆಯ ಮೇರೆಗೆ ಮಾಡಬಹುದು.

ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ತರಗತಿಗಳನ್ನು ನಡೆಸಬೇಕು. ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಬಯಸಿದ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಬಗ್ಗೆ ಇರುವ ಅನುಮಾನಗಳನ್ನು ನಿವಾರಿಸುವ ಸಂಬಂಧ ಪ್ರತಿ ದಿನವು ಭೌತಿಕ ಸಂಪರ್ಕ ತರಗತಿಗಳನ್ನು ನಡೆಸಬೇಕು.

ಇತರೆ ವಿದ್ಯಾರ್ಥಿಗಳಿಗೆ: ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳ ಮೂಲಕ ‍ಪಾಠ ಮಾಡಬೇಕು. ಈ ವಿದ್ಯಾರ್ಥಿಗಳಿಗೆ ಪ್ರತಿದಿನವೂ ಭೌತಿಕ ಸಂಪರ್ಕ ತರಗತಿಗಳನ್ನು ಆಯೋಜಿಸಬೇಕು.

ಸಾಮಾನ್ಯ ಮಾರ್ಗಸೂಚಿಗಳು:

*ಕಾಲೇಜಿನ ಸಂಪೂರ್ಣ ಕಟ್ಟಡ, ಮುಖ್ಯದ್ವಾರ, ಶೌಚಾಲಯ ಹಾಗೂ ಎಲ್ಲ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯ ಸಾಮಗ್ರಿಗಳನ್ನು ಸ್ಯಾನಿಟೈಸ್ ಮಾಡಿಸಬೇಕು.

* ಬೋಧಕರು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ ಮೂರು ದಿನಗಳ ಮುಂಚೆ ಕೋವಿಡ್-19 (ಆರ್‌ಟಿಪಿಸಿಆರ್) ಪರೀಕ್ಷೆ ಮಾಡಿಕೊಂಡು ವರದಿ ನೆಗೆಟಿವ್‌ ಬಂದಲ್ಲಿ ಮಾತ್ರ ಕಾಲೇಜಿಗೆ ಹಾಜರಾಗಬೇಕು.

* ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಊಟ ಮತ್ತು ಕುಡಿಯುವ ನೀರನ್ನು ತಂದು ಉಪಯೋಗಿಸಬೇಕು.

* ಉಪನ್ಯಾಸಕರು ಕಡ್ಡಾಯವಾಗಿ ಮಾಸ್ಕ್‌ ಮತ್ತು ಫೇಸ್‌ ಶೀಲ್ಡ್‌ ಧರಿಸಬೇಕು.

* ಕಾಲೇಜುಗಳಲ್ಲಿ ಗ್ರಂಥಾಲಯ ಮತ್ತು ಕ್ಯಾಂಟೀನ್‌ಗಳನ್ನು ತೆರೆಯುವಂತಿಲ್ಲ.

* ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಎನ್‌ಸಿಸಿ ಹಾಗೂ ಎನ್ನೆಸ್ಸೆಸ್‌ ಚಟುವಟಿಕೆಗಳನ್ನು ಪ್ರಾರಂಭಿಸುವಂತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು