ಗುರುವಾರ , ಆಗಸ್ಟ್ 18, 2022
25 °C

ದೇಶದ ಸಾರ್ವಭೌಮತೆ ಅಪಾಯದಲ್ಲಿದೆ: ನ್ಯಾ. ನಾಗಮೋಹನ್‌ ದಾಸ್‌ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರವೇ ಜನರನ್ನು ಜಾತಿ, ಧರ್ಮಗಳ ಹೆಸರಿನಲ್ಲಿ ಒಡೆದು ಆಳುತ್ತಿದೆ. ದೇಶದ ಸಾರ್ವಭೌಮತೆ ಅಪಾಯದಲ್ಲಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಾ.ಎಚ್.ಎನ್.‌ ನಾಗಮೋಹನ್‌ ದಾಸ್‌ ಹೇಳಿದರು.

ಜನ ಸಂಗ್ರಾಮ ಪರಿಷತ್‌- ಜನತಂತ್ರ ಪ್ರಯೋಗಶಾಲಾ, ಜನಾಂದೋಲನಗಳ ಮಹಾಮೈತ್ರಿ, ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ, ಸೊಸೈಟಿ ಫಾರ್‌ ಕಮ್ಯುನಲ್‌ ಹಾರ್ಮನಿ ಸಂಘಟನೆಗಳ ಜಂಟಿ ಸಹಭಾಗಿತ್ವದಲ್ಲಿ "ರಾಷ್ಟ್ರೀಯ ಬಿಕ್ಕಟ್ಟು- ನಾಗರಿಕ ಸಮಾಜದ ಪಾತ್ರʼ ಕುರಿತು ನಗರದ ಗಾಂಧಿ ಭವನದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲೇ ದೇಶ ಎದುರಿಸುತ್ತಿರುವ ಬಿಕ್ಕಟ್ಟುಗಳೂ ಬಲವಾಗುತ್ತಿವೆ. ರಷ್ಯಾ- ಉಕ್ರೇನ್‌ ನಡುವೆ ಯುದ್ಧ ಆರಂಭವಾಗಿ ಒಂದು ತಿಂಗಳವರೆಗೂ ಭಾರತ ಸರ್ಕಾರ ಮೌನ ವಹಿಸಿತ್ತು. ದೇಶದ ಒಳಗೆ ಮತ್ತು ಅಂತರರಾಷ್ಟ್ರೀಯ ಮಟ್ಟದ ಬಿಕ್ಕಟ್ಟುಗಳಿಗೆ ಧೈರ್ಯವಾಗಿ ಪ್ರತಿಕ್ರಿಯಿಸಲಾಗದ ಸ್ಥಿತಿಗೆ ನಮ್ಮ ಕೇಂದ್ರ ಸರ್ಕಾರ ತಲುಪಿದೆ. ಇದು ದೇಶದ ಸಾರ್ವಭೌಮತೆ ಅಪಾಯದಲ್ಲಿರುವುದರ ಸಂಕೇತ ಎಂದರು.

75 ವರ್ಷಗಳ ಅವಧಿಯಲ್ಲಿ ಸಾಕ್ಷರತೆ, ಬಡತನ ನಿವಾರಣೆ, ಆಹಾರ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶವು ಸಾಕಷ್ಟು ಪ್ರಗತಿ ಸಾಧಿಸಿತ್ತು. ಆದರೆ, ಈಗ ಬಂಡವಾಳಷಾಹಿಗಳ ಕೈಯಲ್ಲಿ ಪ್ರಜಾಪ್ರಭುತ್ವ ಸಿಲುಕಿದೆ. ದೇಶದ ಶೇಕಡ 82ರಷ್ಟು ಸಂಶದರು ಕೋಟ್ಯಧಿಪತಿಗಳಾಗಿದ್ದಾರೆ. ಶೇ 45ರಷ್ಟು ಮಂದಿ ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಶೇ 52.5ರಷ್ಟು ಮಂದಿ ಆನುವಂಶಿಕವಾಗಿ ರಾಜಕೀಯ ಅಧಿಕಾರ ಹಿಡಿದಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಧರ್ಮ ಮತ್ತು ರಾಜಕಾರಣ ಬೆರೆತುಹೋಗಿವೆ. ಪ್ರಶ್ನಿಸುವವರನ್ನು ಬಂಧಿಸಿ, ಬೆದರಿಸಲಾಗುತ್ತಿದೆ. ಮೀಸಲಾತಿಯೊಂದೇ ಸಾಮಾಜಿಕ ನ್ಯಾಯದ ಭಾಗ ಎಂದು ಬಿಂಬಿಸಲಾಗುತ್ತಿದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿಯ ರಾಷ್ಟ್ರೀಯ ಅಧ್ಯಕ್ಷ ಎಸ್‌.ಆರ್‌. ಹಿರೇಮಠ, “ಬಿಜೆಪಿ ಮತ್ತು ಸಮಘ ಪರಿವಾರಗಳು ದೇಶವನ್ನು ಹಿಂದಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿವೆ. ಅಧಿಕಾರದಲ್ಲಿರುವವರು ದುಡಿಯುವ ವರ್ಗದ ಜನರ ಬದುಕನ್ನು ದುರ್ಭರಗೊಳಿಸುತ್ತಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಕೆಡಿಸುವ ಕೆಲಸ ಆಗುತ್ತಿದೆʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ದೇಶದಲ್ಲಿ ಪ್ರಬಲವಾದ ಹೋರಾಟ ನಡೆದಿತ್ತು. ಈಗ ಅದಕ್ಕಿಂತಲೂ 20 ಪಟ್ಟು ಹೆಚ್ಚು ತೀವ್ರ ಸ್ವರೂಪದ ತುರ್ತು ಪರಿಸ್ಥಿತಿ ದೇಶದಲ್ಲಿ ಅಘೋಷಿತವಾಗಿ ಜಾರಿಯಲ್ಲಿದೆ. ಅದರ ವಿರುದ್ಧ ಎಲ್ಲ ಜನರನ್ನೂ ಒಗ್ಗೂಡಿಸಿಕೊಂಡು ಹೋರಾಟ ಕಟ್ಟಬೇಕಿದೆ ಎಂದರು.

ಸೊಸೈಟಿ ಫಾರ್‌ ಕಮ್ಯುನಲ್‌ ಹಾರ್ಮನಿಯ ಅಧ್ಯಕ್ಷ ಪ್ರೊ. ಆನಂದ್‌ ಕುಮಾರ್‌ ಮಾತನಾಡಿ, ʼಸರ್ಕಾರದ ಎಲ್ಲ ಅಂಗಗಳೂ ಜನರ ಸಂಕಷ್ಟಕ್ಕೆ ಮಿಡಿಯುವ ಶಕ್ತಿಯನ್ನು ಕಳೆದುಕೊಂಡಿವೆ. ರಾಜಕೀಯ ಪಕ್ಷಗಳೂ ಶಕ್ತಿಹೀನವಾಗಿವೆ. ಪ್ರಬಲ ಜನಹೋರಾಟದ ಮೂಲಕವೇ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕುʼ ಎಂದು ಸಲಹೆ ನೀಡಿದರು.

ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿಯ ಪ್ರಧಾನ ಕಾರ್ಯದರ್ಶಿ ಎನ್‌.ಡಿ. ಪಾಂಚೋಲಿ, ಜನ ಸಂಗ್ರಾಮ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ, ಜಮಾತೆ ಇಸ್ಲಾಮಿ ಹಿಂದ್‌ ಕರ್ನಾಟಕ ಘಟಕದ ಕಾರ್ಯದರ್ಶಿ ಮೊಹಮ್ಮದ್‌ ಯೂಸುಫ್‌ ಕನ್ನಿ, ಕಾನ್ಫೆಡರೇಷನ್‌ ಆಫ್‌ ಇಂಡಿಯನ್‌ ಕ್ರಿಶ್ಚಿಯನ್‌ ಕಾರ್ಯದರ್ಶಿ ಆಂಟೋನಿ ಜೋಸೆಫ್‌, ಸಮಾಜವಾದಿ ಉಖಂಡ ಪ. ಮಲ್ಲೇಶ್‌, ಜನಾಂದೋಲನಗಳ ಮಹಾಮೈತ್ರಿಯ ಸಹ ಸಂಚಾಲಕಿ ನಂದಿನಿ ಜಯರಾಮ್‌ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು