ಮಂಗಳವಾರ, ಜೂನ್ 28, 2022
28 °C

ಮಹಿಳಾ ಕಾಂಗ್ರೆಸ್​​ನಿಂದ ಮಕ್ಕಳಿಗಾಗಿ ವಿಶೇಷ ಪೌಷ್ಟಿಕ ಆಹಾರದ ಕಿಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಸಂಭವನೀಯ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿರುವ ಕಾರಣ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಲು ಕೆಪಿಸಿಸಿ ಮಹಿಳಾ ಕಾಂಗ್ರೆಸ್​ ಮುಂದಾಗಿದೆ.

ಈ ಕುರಿತು ಮಹಿಳಾ ಎಲ್ಲಾ ಜಿಲ್ಲೆಗಳ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದು, ಬಡತನದಲ್ಲಿರುವ ಮತ್ತು ಕೆಳ, ಮಧ್ಯಮ ವರ್ಗದ ಮಕ್ಕಳನ್ನು ಗುರುತಿಸಿ ಪಟ್ಟಿ ನೀಡುವಂತೆ ಹೇಳಿದೆ.

ಮಕ್ಕಳಿಗಾಗಿ ಪೌಷ್ಟಿಕ ಆಹಾರದ ವಿಶೇಷ ಕಿಟ್ ಈಗಾಗಲೇ ಸಿದ್ಧಗೊಂಡಿದ್ದು, ಎರಡು ದಿನಗಳ ಹಿಂದೆ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಾಲನೆ ನೀಡಿದ್ದರು.

ಸದ್ಯ 1 ಸಾವಿರ ಕಿಟ್​ಗಳನ್ನು ಸಿದ್ಧಪಡಿಸಿರುವ ರಾಜ್ಯ ಸಮಿತಿ, ಮುಂದಿನ ದಿನಗಳಲ್ಲಿ ಜಿಲ್ಲಾ ಸಮಿತಿಗಳು ಕಳಿಸುವ ಮಾಹಿತಿ ಆಧರಿಸಿ ಅಗತ್ಯ ಪ್ರಮಾಣದ ಕಿಟ್​ಗಳನ್ನು ವಿತರಿಸಲು ತೀರ್ಮಾನಿಸಿದೆ. ಎಷ್ಟೇ ಕಿಟ್​ಗಳಿಗೆ ಬೇಡಿಕೆ ಬಂದರೂ ಪಕ್ಷದ ಕೇಂದ್ರ ಕಚೇರಿಯಿಂದ ಪೂರೈಸುವುದಾಗಿ ಕಾಂಗ್ರೆಸ್‌ ನಾಯಕರು ಭರವಸೆ ನೀಡಿದ್ದಾರೆ.

ಕಿಟ್​ನಲ್ಲಿ ಏನೇನಿದೆ: ‘ವಿಟನೆಕ್ಸ್ ಒಂದ್ ಬಾಟಲ್, ಡೋಲೊ ಕೋಲ್ಡ್ ಸಿರಪ್, ಪಾರಾಸಿಟಮಲ್ ಸಿರಪ್, ಚವನ್ ಪ್ರಶ್, ಹಾರ್ಲಿಕ್ಸ್ ಪ್ಯಾಕೇಟ್
ಬೂಸ್ಟ್ ಪ್ಯಾಕೇಟ್, ಪಾರ್ಲೆ ಜಿ ಬಿಸ್ಕೇಟ್, ಎರಡು ಮಾಸ್ಕ್, ಒಂದು ಸಂತೂರ್ ಸೋಪ್ ಈ ಕಿಟ್‌ನಲ್ಲಿ ಇರಲಿದೆ’  ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.

‘ಕೋವಿಡ್ ಮೂರನೇ ಅಲೆ ಸಂದರ್ಭ ಯಾವುದೇ ಮಕ್ಕಳು ಸಮಸ್ಯೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಕಿಟ್‌ ವಿತರಿಸಲು ತೀರ್ಮಾನಿಸಿದ್ದೇವೆ. ಮಕ್ಕಳ ಆರೋಗ್ಯ ಅತ್ಯಂತ ಮುಖ್ಯ. ಸರ್ಕಾರ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

‘ಕಾಂಗ್ರೆಸ್‌ ನಾಯಕರು ನೀಡುವ ಸಲಹೆಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ. ಮಕ್ಕಳ ಆರೋಗ್ಯ ಅತ್ಯಂತ ಸೂಕ್ಷ್ಮ ವಿಚಾರ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಕ್ಕಳಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು.ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದರಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ’ ಎಂದರು.

‘ಹಿರಿಯರಿಗೆ ಲಸಿಕೆ ಕೊಡುವಲ್ಲಿ ಸರ್ಕಾರ ವಿಫಲವಾಗಿದ್ದು, ಇನ್ನು ಮಕ್ಕಳಿಗೆ ಯಾವಾಗ ಲಸಿಕೆ ನೀಡಲಿದೆ. ಸರ್ಕಾರ ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳಬೇಕು. ಮಕ್ಕಳಿಗೆ ದಿಢೀರ್‌ ಅನಾರೋಗ್ಯವಾದರೆ ಅವರನ್ನು ಕಾಪಾಡುವುದು ಕಷ್ಟ ಸಾಧ್ಯ. ಒಂದೊಮ್ಮೆ ಮೂರನೇ ಅಲೆ ದೊಡ್ಡಮಟ್ಟದಲ್ಲಿ ಕಾಡಿದರೆ ಮಕ್ಕಳನ್ನು ಅದಕ್ಕಿಂತ ಮುಂಚಿತವಾಗಿ ಎದುರಿಸಲು ಸಿದ್ಧಪಡಿಸುವ ಕಿಟ್ ನಾವು ನೀಡುತ್ತಿದ್ದೇವೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು