ಚಿರತೆ ದಾಳಿ ತಡೆಯಲು ವಿಶೇಷ ತಂಡ: ಬಸವರಾಜ ಬೊಮ್ಮಾಯಿ

ಬೆಂಗಳೂರು: ‘ಚಿರತೆ ದಾಳಿ ಆಗುತ್ತಿರುವುದನ್ನು ತಡೆಯಲು ವಿಶೇಷ ತಂಡ ರಚಿಸಲಾಗಿದ್ದು, ನಿರ್ದಿಷ್ಟವಾಗಿ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಮೈಸೂರು ಮತ್ತು ಬೆಂಗಳೂರು ವಲಯದಲ್ಲಿ ಆನೆ ಕಾರಿಡಾರ್ ಸುತ್ತಮುತ್ತ ಚಿರತೆಗಳೂ ಇವೆ. ದಾಳಿಗಳನ್ನು ನಿಯಂತ್ರಿಸಲು ಹಾಗೂ ಕಾಡು ಬಿಟ್ಟು ಆಚೆ ಬಂದಿರುವ ಚಿರತೆಗಳನ್ನು ಹಿಡಿಯಲು ವಿಶೇಷ ತಂಡ ಕಾರ್ಯಾಚರಣೆ ಮಾಡಲಿದೆ’ ಎಂದರು.
‘ಚಿರತೆ ದಾಳಿಗಳು ಮೊದಲು ಕಾಡು ಪಕ್ಕದಲ್ಲಿ ಆಗುತ್ತಿತ್ತು. ಆದರೆ, ಈಗ ಬೆಂಗಳೂರಿನ ಆಸುಪಾಸಿನಲ್ಲಿ ಆಗುತ್ತಿದೆ. ಈ ವಿಷಯವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹಲವು ದಿನಗಳಿಂದ ಚಿರತೆ ಬೇಟೆಗೆ ಪ್ರಯತ್ನಿಸಲಾಗುತ್ತಿದೆ. ಅದಕ್ಕೆ ಬಲೆಯನ್ನೂ ಹಾಕಲಾಗಿದೆ. ಅದನ್ನು ಜೀವಂತವಾಗಿ ಹಿಡಿದು ಕಾಡಿಗೆ ಬಿಡಲು ಇಲಾಖೆಗೆ ಸೂಚನೆ ನೀಡಲಾಗಿದೆ‘ ತಿಳಿಸಿದರು.
₹ 15 ಲಕ್ಷ ಪರಿಹಾರ: ‘ಚಿರತೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ₹ 15 ಲಕ್ಷ ಪರಿಹಾರ’ ನೀಡಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದರು.
‘ಆನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ನೀಡಿದಂತೆ ಚಿರತೆ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೂ ಪರಿಹಾರ ಒದಗಿಸಲಾಗುವುದು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.